ಬ್ಯಾಡಗಿ: ಪಟ್ಟಣದ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಕೊಡುಗೆ ಶೂನ್ಯವಾಗಿದೆ. ಅಧಿ ಕಾರಕ್ಕೆ ಬಂದ 6 ತಿಂಗಳಲ್ಲಿ ಮುಖ್ಯ ರಸ್ತೆ ಅಗಲೀಕರಣ ಮಾಡುವುದಾಗಿ ಶಾಸಕರು ಹೇಳಿದ್ದರು. ಆದರೆ, 4 ವರ್ಷ ಗತಿಸಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೇವಲ ಸುಳ್ಳು ಭರವಸೆ ನೀಡುವುದನ್ನು ಬಿಟ್ಟರೆ ಮತ್ಯಾವ ಮಹತ್ತರ ಕೆಲಸವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣ ಸಮಿತಿ ಕಳೆದ 12 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಅನುಕೂಲವಾಗುವಂತೆ 80 ಅಡಿಯಷ್ಟು ಅಗಲದ ಮತ್ತು 60 ಟನ್ ಸಾಮರ್ಥ್ಯದ ಮುಖ್ಯರಸ್ತೆ ಅವಶ್ಯಕತೆಯಿದೆ. ಹೀಗಿದ್ದರೂ, ಇಂದಿಗೂ ರಸ್ತೆ ಅಗಲೀಕರಣವಾಗದೇ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣದ ಅಭಿವೃದ್ಧಿಗೆ 36 ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳಿಕೆ ನೀಡುತ್ತಿರುವ ಶಾಸಕರು, ಇಲ್ಲಿಯೂ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ನಿವೇಶನದಲ್ಲಿ ಅನ್ಯಾಯವಾಗದಿರಲಿ: ಆಶ್ರಯ ನಿವೇಶನ ಹಂಚಿಕೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬ್ಯಾಡಗಿಯಲ್ಲಿರುವ ಬಡ ಜನರಿಗೆ ಕೊಟ್ಟಂತಹ ಕೊಡುಗೆಯಾಗಿದೆ. ಸಿದ್ಧರಾಮಯ್ಯ ನೇತೃತ್ವದ ಅಂದಿನ ಸರ್ಕಾರ ಪುರಸಭೆಗೆ ಅನುದಾನ ನೀಡುವ ಮೂಲಕ 10 ಎಕರೆ ನಿವೇಶನ ಖರೀದಿಸಿದೆ ವಿನಃ ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ. ಅದರಲ್ಲೂ ನಿವೇಶನ ರಹಿತರಿಗೆ ಮನೆಗಳು ಹಂಚಿಕೆ ಆಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ದ್ವೇಷ ರಾಜಕಾರಣ: ಬ್ಯಾಡಗಿಯ ಸೂಡಂಬಿ ಗ್ರಾಮದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಕೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮೇಲೆ ಪ್ರಕರಣ
ದಾಖಲಿಸಿದ್ದು ತಾಲೂಕಿನ ಬಿಜೆಪಿ ನಾಯಕರೇ ಎಂಬುದು ಸತ್ಯ. ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಹಾಗೂ ಅಲ್ಪ ಸಂಖ್ಯಾತ ಮಹಿಳೆಯರಿಗೆ ಭದ್ರತೆಯಿಲ್ಲ ಎಂಬುದನ್ನು ಈ ಘಟನೆ ಮತ್ತೂಮ್ಮೆ ಸಾಬೀತು ಮಾಡಿದಂತಾಗಿದೆ. ಸದರಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ದೂರಿದರು.
ಕೋರ್ಟ್ ತೀರ್ಮಾನಕ್ಕೆ ಬದ್ಧ: ಹಿಜಾಬ್-ಕೇಸರಿ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲೆ ಎಂಬುದು ದೇವಸ್ಥಾನವಿದ್ದಂತೆ. ಸರಸ್ವತಿ ನೆಲೆಸಿರುವ ಜಾಗದಲ್ಲಿ ಜಾತಿ ವಿವಾದ ಭುಗಿಲೆದ್ದಿರುವುದು ದುರದೃಷ್ಟಕರ. ಶಾಲೆಗಳಲ್ಲಿ ಎಲ್ಲರೂ ಸಮಾನರು. ಅಲ್ಲಿ ಜಾತಿ, ಮತ ಭೇದ, ಮೇಲು, ಕೀಳು ಎಂಬ ಪ್ರಶ್ನೆ ಉದ್ಭವವಾಗಬಾರದು. ಹೈಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರಕಾಶ ಬನ್ನಿಹಟ್ಟಿ, ಮಂಜುನಾಥ ಭೋವಿ, ರಮೇಶ ಮೋಟೆಬೆನ್ನೂರ, ಸರ್ಪರಾಜ್ ಹೆರಕಲ್ ಇನ್ನಿತರರು ಉಪಸ್ಥಿತರಿದ್ದರು.