Advertisement

ಸನಾತನ ಧರ್ಮಕ್ಕೆ ಶ್ರೀಮದಾನಂದ ತೀರ್ಥರ ಕೊಡುಗೆ ಅಪಾರ

10:05 AM Feb 15, 2019 | |

ಭದ್ರಾವತಿ: ಭಾರತೀಯ ಸಂಸ್ಕೃತಿ, ಸಾಹಿತ್ಯಕ್ಕೆ ಮೂಲ ಆಧಾರ ವೇದ, ಉಪನಿಷತ್‌ಗಳು, ಮಹಾಭಾರತ. ಈ ನಾಲ್ಕು ವೇದಗಳೂ ಪರಮಾತ್ಮನ ಅನಂತ ಗುಣಗಳನ್ನು ಸಾರುತ್ತವೆ. ಶ್ರೀಮದಾನಂದ ತೀರ್ಥರು ವೇದಮಂತ್ರಗಳ ಯತಾರ್ಥವನ್ನು ತಿಳಿಸಿ ಹೇಳುವ ಮೂಲಕ ಸನಾತನಧರ್ಮದ ನಿಜವಾದ ಅರ್ಥವನ್ನು ಜಗತ್ತಿಗೆ ಸಾರುವ ಮೂಲಕ ಮಹದುಪಕಾರ ಮಾಡಿದ್ದಾರೆ ಎಂದು ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಜನ್ನಾಪುರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪಂಚಯತಿಗಳ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಶ್ರೀಮನ್ಮಧ್ವಾಚಾರ್ಯರ ಶೋಭಾಯಾತ್ರೆ ನಂತರ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸನಾತನ ಧರ್ಮ ಸರಿಯಾಗಿ ಅರಿಯಲು ವೇದಗಳೇ ಆಧಾರ. ವೇದವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಸನಾತನ ಧರ್ಮದ ಬಗ್ಗೆ ಅನ್ಯರು ಮಾಡುವ ಆಕ್ಷೇಪಣೆ ಅವರ ಅಜ್ಞಾನ ತೋರಿಸುತ್ತದೆ ಎಂದರು. 

 ಸನಾತನ ಧರ್ಮದಲ್ಲಿ ಅನೇಕ ದೇವರು ಇದ್ದರೂ ಸಹ ಅವರೆಲ್ಲರೂ ಒಬ್ಬ ಭಗವಂತನ ಅಧೀನದಲ್ಲಿರುವ ದೇವತೆಗಳು. ಆದ್ದರಿಂದ ಸನಾತನ ಧರ್ಮದಲ್ಲಿ ಒಬ್ಬನೇ ದೇವರನ್ನು ಅವನಲ್ಲಿರುವ ಅನಂತ ಗುಣಗಳನ್ನು ಆಧರಿಸಿ ಅವನಿಗೆ ಬೇರೆ ಬೇರೆ ಹೆಸರುಗಳಿವೆ. ಉಳಿದ ದೇವರುಗಳು ಅವನ ಅಧೀನದಲ್ಲಿ ಇದ್ದರಿಂದ ಭಗವಂತನೊಬ್ಬನೇ ಸರ್ವೋತ್ತಮ ಎಂದರು.

 ಈ ತತ್ವವನ್ನು ಭಗವಂತನ ಆದೇಶಾನುಸಾರ ಹನುಮ, ಭೀಮ, ಮಧ್ವರಾಗಿ ಜನಿಸಿದ ಶ್ರೀಮದಾನಂದ ತೀರ್ಥಾಚಾರ್ಯರು ವೇದಗಳಲ್ಲಿ ಬರುವ ಶಬ್ದಗಳಿಗೆ ಸರಿಯಾದ ರೀತಿ ವ್ಯಾಖ್ಯಾನ ಮಾಡುವ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ. ಇದನ್ನು ನಾವುಗಳು ಆಚಾರ್ಯರ ಗ್ರಂಥಗಳ ಅಧ್ಯಯನ ಮಾಡುವುದರಿಂದ ಅರಿಯಬೇಕು. ಆ ಮೂಲಕ ಪ್ರತಿನಿತ್ಯ ಅನುಸಂಧಾನದ ಮೂಲಕ ಶ್ರೀಮದಾನಂದ ತೀರ್ಥರನ್ನು ಸ್ಮರಿಸಿದರೆ ಅದು ನಾವು ಆ ಗುರುಗಳಿಗೆ ತೋರುವ ನಿಜವಾದ ನಮನ ಗೌರವ, ಭಕ್ತಿ ಎನಿಸುತ್ತದೆ ಎಂದರು.

ಪಂಡಿತ ರಾಮಾಚಾರ್‌ ಉಪನ್ಯಾಸ ನೀಡಿ, ಮಠ, ಆರಾಧನೆ ಎಂದರೆ ಊಟ, ಪ್ರಸಾದ ದೊರಕುವ ಸ್ಥಳ ಎಂದು ಭಾವಿಸಿ ಹೋಗಬಾರದು. ಬದಲಿಗೆ ಗುರುಗಳ ಸೇವೆ ಮಾಡಲು ದೊರಕುವ ಸೌಭಾಗ್ಯ ಎಂಬ ಭಾವನೆಯಿಂದ ಹೋಗಿ ಗುರುಗಳ ಸೇವೆ ಮಾಡಬೇಕು. ಮಾನವ ಜನ್ಮ ಅತಿದುರ್ಲಬ. ಅದು ದೊರಕಿರುವ ಈ ಜನ್ಮದಲ್ಲಿ ಸಾರ್ಥಕ ಮಾಡಿಕೊಳ್ಳಲು ಗುರು ಸೇವೆ, ಭಗವಂತ ನಾಮಸ್ಮರಣೆ ಮಾಡುವ ಮೂಲಕ ಮೋಕ್ಷ ಸಾಧನೆಗೆ ಪ್ರಯತ್ನಿಸಬೇಕು ಎಂದರು.

Advertisement

ಶೋಭಾಯಾತ್ರೆ: ನ್ಯೂಟೌನ್‌ ಶ್ರೀರಾಮ ಮಂದಿರದ ಮುಂಭಾಗದಿಂದ ಶ್ರೀಮಠದ ವರೆಗೆ ಶ್ರೀಮನ್ಮಧ್ವಾಚಾರ್ಯರ ಭಾವಚಿತ್ರ ಹಾಗೂ ಸೀತಾರಾಮ ಲಕ್ಷ್ಮಣರ ಮೂರ್ತಿಯನ್ನು ವಿದ್ಯುತ್‌ ಅಲಂಕೃತ ವಾಹನದಲ್ಲಿರಿಸಿ ಶೋಭಾಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ಚಂಡೆವಾದ್ಯ, ಮಂಗಳ ವಾದ್ಯ ಸಹಿತ ಅಪಾರ ಭಕ್ತರು, ಮಹಿಳೆಯರು ಭಜನೆ ಮಾಡುತ್ತಾ, ಕೋಲಾಟವಾಡುತ್ತಾ ಸಾಗಿದರು. 

Advertisement

Udayavani is now on Telegram. Click here to join our channel and stay updated with the latest news.

Next