ಹೊಸದಿಲ್ಲಿ: “ಗಾಡ್ ಆಫ್ ವಾರ್’, “ಪ್ರಿನ್ಸ್ ಆಫ್ ಪರ್ಷಿಯಾ’ ಮುಂತಾದ ರಾಜ-ರಾಣಿಯರ ಕಥೆಗಳನ್ನೇ ಇರಿಸಿಕೊಂಡು ಅಭಿವೃದ್ಧಿಪಡಿಸಲಾದ ವೀಡಿಯೋ ಗೇಮ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಅದೇ ರೀತಿ ಭಾರತೀಯ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಬಳಸಿಕೊಂಡು ವೀಡಿಯೋ ಗೇಮ್‌ಗಳನ್ನು ತಯಾರಿಸಬಾರದೇಕೆ?
ಹೀಗೆ ಯೋಚಿಸಿರುವ ಕೇಂದ್ರ ಸರಕಾರದ ಕಾರ್ಯಪಡೆಯೊಂದು ರಾಮಾಯಣ-ಮಹಾಭಾರತದಂಥ ಪುರಾಣ ಕಥೆಗಳು, ಶೋಲೆ, ಬಾಹುಬಲಿಯಂಥ ಜನಪ್ರಿಯ ಸಿನೆಮಾಗಳ ಪಾತ್ರಗಳಿಂದ ಸ್ಫೂರ್ತಿ ಪಡೆದು ಆನ್‌ಲೈನ್ ಮತ್ತು ವೀಡಿಯೋ ಗೇಮ್ ಅಭಿವೃದ್ಧಿಪಡಿಸಲು ಶಿಫಾರಸು ಮಾಡಿದೆ.
ಭಾರತದ ಆ್ಯನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ ವಲಯವನ್ನು ಹೇಗೆ ಉತ್ತೇಜಿಸಬಹುದು ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಉಪ ಕಾರ್ಯಪಡೆಯೊಂದನ್ನು ರಚಿಸಿತ್ತು. ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಂ ಸಹಾಯ್ ನೇತೃತ್ವದ ಈ ಸಮಿತಿ ಈಗ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.
ಯಾವೆಲ್ಲ ಗೇಮ್‌ಗಳು?
ವೇದ, ಉಪನಿಷತ್‌ಗಳ ಆಯ್ದ ವಿಚಾರಗಳು, ಬುದ್ಧ, ಮಹಾವೀರರ ಬದುಕಿನ ವೃತ್ತಾಂತಗಳು, ಕಾಳಿದಾಸನ ಕುಮಾರಸಂಭವ, ಅಭಿಜ್ಞಾನಶಾಕುಂತಲ, ಶಿಲಪ್ಪದಿಕಾರಂನ ಕಥೆಗಳು, ರಾಮಾಯಣ, ಮಹಾಭಾರತ ಆಧರಿಸಿದ ಗೇಮ್, ಕಾಮಿಕ್‌ಗಳನ್ನು ರಚಿಸುವ ಬಗ್ಗೆ ಸಮಿತಿಯು ಶಿಫಾರಸು ಮಾಡಿದೆ. ಈ ಮೂಲಕ ಭಾರತವನ್ನು ಆನ್‌ಲೈನ್ ವೀಡಿಯೋ ಗೇಮ್‌ಗಳ ಹಬ್ ಆಗಿ ಪರಿವರ್ತಿಸಬಹುದಾಗಿದೆ ಎಂದಿದೆ. ಜತೆಗೆ ಐತಿಹಾಸಿಕ, ಧಾರ್ಮಿಕ, ಜನಪದ ಕಥಾ ಪಾತ್ರಗಳನ್ನು ಕೂಡ ಗೇಮ್‌ಗಳಿಗೆ ಬಳಸಿಕೊಳ್ಳಬಹುದು ಎಂದೂ ತಿಳಿಸಿದೆ.
Related Articles
ಶಿಫಾರಸಿನಲ್ಲೇನಿದೆ?
– ರಾಮಾಯಣ, ಮಹಾಭಾರತ, ಕುಮಾರಸಂಭವ, ಬುದ್ಧ, ಮಹಾವೀರರ ಕಥೆಗಳನ್ನು ಆಧರಿಸಿದ ವೀಡಿಯೋ ಗೇಮ್ ಅಭಿವೃದ್ಧಿ.
– ಶೋಲೆ, ಬಾಹುಬಲಿಯಂಥ ಸಿನೆಮಾಗಳನ್ನು ಆಧರಿಸಿದ ವ್ಯೂಹತಂತ್ರ ಗೇಮ್‌ಗಳ ಸೃಷ್ಟಿ
– ಇಂಥ ಗೇಮ್ ಶಾಲಾ ಪಠ್ಯಗಳಲ್ಲೂ ಸೇರ್ಪಡೆ
– ಗೇಮ್ಸ್ ಅಭಿವೃದ್ಧಿಪಡಿಸುವ ಸಂಸ್ಥೆಗಳಿಗೆ ಪ್ರೋತ್ಸಾಹ ಧನ
– ಗೇಮಿಂಗ್ ಕುರಿತ ಪದವಿ, ಡಿಪ್ಲೋಮಾ ಕೋರ್ಸ್‌ಗಳ ಆರಂಭ
– ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಗೇಮಿಂಗ್ ಪಠ್ಯಕ್ರಮ ಸೇರ್ಪಡೆ
– ಗೇಮಿಂಗ್ ಸ್ಟಾರ್ಟಪ್ ಹಬ್‌ಗಳು, ತಂತ್ರಜ್ಞಾನ ವಿನಿಮಯ ವೇದಿಕೆಗಳ ಮೂಲಕ ತಂತ್ರಜ್ಞಾನಗಳ ಹಂಚಿಕೆಗೆ ಉತ್ತೇಜನ
– ಅನ್ವಯಿಕ ಗೇಮ್‌ಗಳ ಅಂತಾರಾಷ್ಟ್ರೀಯ ಬೇಡಿಕೆ ಹೇಗಿದೆ ಎಂಬ ಬಗ್ಗೆಯೂ ಅಧ್ಯಯನ