Advertisement

Desi Swara: ಯಮ ಮತ್ತು ವಿದುರರ ಧರ್ಮ – ಕರ್ಮಗಳು

12:21 PM Nov 18, 2023 | Team Udayavani |

ಜೀವನದಲ್ಲಿ ಎಲ್ಲ ಮಜಲುಗಳಿಗೂ ನಾವು ಮತ್ತೆ -ಮತ್ತೆ ಕರ್ಮವನ್ನೇ ಹೋಲಿಸಿ ತಳುಕು ಹಾಕುತ್ತೇವೆ. ನಮ್ಮ ಪುರಾಣ ಕಥೆಗಳು, ಪುರಾಣ ಪಾತ್ರಗಳು ಮತ್ತು ದೇವರುಗಳು ಆವತರಿಸಿದ ಮರ್ಮ ಕರ್ಮವೇ ಆಗಿರುವುದರಿಂದ ಕರ್ಮವನ್ನು ಹೊರತುಪಡಿಸಿ ನಾವು ಜೀವನವನ್ನು ಪೃಥಕ್ಕರಿಸುವುದು ಕಷ್ಟ ಸಾಧ್ಯ. ದೇವತೆಗಳಿಗೂ ಹಾಗೆಯೇ ಕರ್ಮವನ್ನು ಹೊರತುಪಡಿಸಿ ಧರ್ಮವನ್ನು ರಕ್ಷಿಸಿಕೊಂಡು ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇದಕ್ಕೆ ಪೂರಕವಾಗಿ ಯಮಧರ್ಮ ಮತ್ತು ಅಣಿಮಾಂಡವ್ಯರ ಕಥೆಯನ್ನು ನೋಡೋಣ.

Advertisement

ಯಾವುದೇ ವಿಷಯ, ವಸ್ತು, ರಾಕ್ಷಸ, ಮಾನವ ಮತ್ತು ದೇವತೆಗಳಲ್ಲಾದರೂ ಸರಿಯೆ, ಅವರವರ ತಪ್ಪು ಕರ್ಮಗಳನ್ನು ನಿರ್ಧರಿಸಿ ನ್ಯಾಯವನ್ನೇ ಹೇಳುವ ಧರ್ಮದ ಅಧಿಕಾರಿ ಯಮ, ಯೂರ್ಯ ಹೇಗೆ ಲೋಕವನ್ನು ತನ್ನ ಬೆಳಕಿನಲ್ಲಿ ನಡೆಸುತ್ತಾನೆಯೋ ಹಾಗೆ ತಮ್ಮ, ತನ್ನ ಧರ್ಮದ ತಕ್ಕಡಿಯಲ್ಲಿ ಲೋಕವನ್ನು ಸಮತೋಲನ ಮಾಡುತ್ತಾನೆ. ಯಮನಿಗೆ ಧರ್ಮವನ್ನು ಹೊರತುಪಡಿಸಿ ಮಾತನಾಡುವ ಯಾವುದೇ ದಾರಿಗಳೂ ತಿಳಿದಿಲ್ಲ . ಇಂತಹ ಒಂದು ಧರ್ಮದ ಪರಿಸ್ಥಿತಿಯಿಂದಾಗಿ ಯಮನು ಶಾಪಗ್ರಸ್ತ್ಯನಾಗುತ್ತಾನೆ.

ದ್ವಾಪರಯುಗದ ಆರಂಭದಲ್ಲಿ ಅಣಿಮಾಂಡ್ಯ ಎಂಬ ಋಷಿಯೊಬ್ಬರು ಕಾಶೀ ದೇಶದ ಒಂದು ಆಶ್ರಮದಲ್ಲಿ ತನ್ನ ಶಿಷ್ಯರೊಟ್ಟಿಗೆ ವಾಸಿಸುತ್ತಿರುತ್ತಾರೆ. ಯಜ್ಞ ಯಾಗಾದಿಗಳು, ವ್ರತ ನಿಯಮಗಳೇ ಮೊದಲಾಗಿ ಅನೇಕ ದೈವಿಕ ಕಾರ್ಯಗಳನ್ನು ಮಾಡುತ್ತಾ ಅಧರ್ಮಾದಿ ಕಾರ್ಯಗಳಿಂದ ದೂರವಾಗಿ ಬದುಕುತ್ತಿದ್ದರು. ಹೀಗಿರುವಾಗ ಒಮ್ಮೆ ಅಣಿಮಾಂಡ್ಯರು ಮೌನ ವ್ರತವನ್ನು ಆಚರಿಸುವ ಸಂದರ್ಭದಲ್ಲಿ ಕಾಶೀ ರಾಜನ ರಾಜಭಟರು ತಲೆದಂಡಕ್ಕೆ ಗುರಿಯಾಗಿದ್ದ ಈ ದೇಶದ ರಾಜದ್ರೋಹಿಗಳಿಗಾಗಿ ಹುಡುಕಾಟ ನಡೆಸುತ್ತಾ ಅಣಿಮಾಂಡ್ಯರ ಆಶ್ರಮದ ಕಡೆ ಬರುತ್ತಾರೆ.

ವಿಪರ್ಯಾಸವೆಂದರೆ ಆ ರಾಜದ್ರೋಹಿಗಳು ಅಶ್ರಮವನ್ನು ಹೊಕ್ಕು ಅಲ್ಲಿಯೇ ಅಡಗಿರುತ್ತಾರೆ. ಆಶ್ರಮಕ್ಕೆ ಬಂದ ರಾಜಭಟರು ಅಣಿಮಾಂಡ್ಯರನ್ನು ಅವರನ್ನು ಕುರಿತು ಪ್ರಶ್ನಿಸಿದಾಗ, ಜ್ಞಾನಿಗಳಾದ ಅಣಿಮಾಂಡ್ಯರು ಎಲ್ಲ ತಿಳಿದಿದ್ದರೂ ವ್ರತನಿಯಮದ ಕಾರಣದಿಂದ ಮಾತನಾಡದೇ ಹೋಗುತ್ತಾರೆ.

ಕೋಪಗೊಂಡ ಭಟರು ಆಶ್ರಮದಲ್ಲಿ ಹುಡುಕಿದಾಗ ಸಿಕ್ಕ ರಾಜದ್ರೋಹಿಗಳ ಜತೆ ಅಣಿಮಾಂಡ್ಯರನ್ನ ಎಳೆದುಕೊಂಡು ಹೋಗಿ ಶೂಲಕ್ಕೇರಿಸಲು ಬೇಕಾದ ತಯಾರಿಗಳನ್ನು ಮಾಡಿರುತ್ತಾರೆ. ನಿಯಮದ ಪ್ರಕಾರ ರಾಜನು ಕೊನೆಯ ಬಾರಿಗೆ ಶೂಲಕ್ಕೇರಲು ಸಿದ್ಧವಾದ ದ್ರೋಹಿಗಳನ್ನು ಭೇಟಿಯಾಗಲು ಬಂದಾಗ ರಾಜದ್ರೋಹಿಗಳ ಸಾಲಿನಲ್ಲಿದ್ದ ಗುರುವನ್ನು ಗುರುತಿಸಿ ನೊಂದು ಹೋಗುತ್ತಾನೆ. ಯಾವುದೇ ಪಾಪಕರ್ಮವನ್ನೂ ಮಾಡದ ಮಹಾನುಭಾವರು ನೀವು. ಕ್ಷಮಿಸಿ ಎಂದು ಕ್ಷಮಾದಾನವನ್ನು ಬೇಡಿ ರಾಜಮರ್ಯಾದೆಯಿಂದ ಅವರನ್ನು ಬೀಳ್ಕೊಡುತ್ತಾನೆ.

Advertisement

ಮಹಾತ್ಮರಾದ ಅವರು ತಮ್ಮ ಕೋಪವನ್ನು ರಾಜನ ಮೇಲೆ ತೋರಿಸುವುದಿಲ್ಲ. ಆದರೆ ಅವಮಾನದಿಂದ ಕುಪಿತರಾದ ಅಣಮಾಂಡ್ಯರಿಗೆ ಅವಮಾನದ ಬೇಗೆಯಿಂದ ಬದುಕಿನ ಮೇಲಿದ್ದ ನಂಬಿಕೆ, ಧಾರ್ಮಿಕ ಕ್ರಿಯೆಗಳ ಮೇಲಿದ್ದ ಅವರ ಅಭಿಮಾನ ಸುಟ್ಟು ಹೋಗುತ್ತದೆ. ಆಗ ತಮ್ಮ ಕೋಪವನ್ನು ತಮ್ಮ ಅಸ್ತ್ರವಾಗಿದ್ದ ಸದಾಕಾಲ ತಮ್ಮೊಟ್ಟಿಗೆ ಇಟ್ಟುಕೊಳ್ಳುತ್ತಿದ್ದ ಶೂಲದ ಮೇಲೆ ತೋರಿಸಿ ಅದನ್ನು ಮುರಿದು ಅಲ್ಲಿಂದ ಹೊರಡುತ್ತಾರೆ.

ಮುಂದೆ ಅವರಿಗೆ ತಮ್ಮ ಬದುಕನ್ನು ಮುಂದುವರೆಸಲಾಗುವುದಿಲ್ಲ. ಹಾಗಾಗಿ ಪರಮಾತ್ಮನ ಸಂಘ ಬಯಸಿ ಸ್ವ-ಇಚ್ಛೆಯಿಂದ ದೇಹತ್ಯಾಗವನ್ನು ಮಾಡುತ್ತಾರೆ. ಆದರೆ ಅವರ ಸಾವಿನ ಅನಂತರದ ಜೀವನವನ್ನು ಆತುಕೊಳ್ಳಲು ದೈವಧೂತರ ಬದಲಾಗಿ ಯಮದೂತರು ಬರುತ್ತಾರೆ. ಅದನ್ನು ಕಂಡ ಅಣಿಮಾಂಡ್ಯರಿಗೆ ಆಘಾತವಾಗುತ್ತದೆ. ಅವರೆಂದೂ ಇದನ್ನು ನಿರೀಕ್ಷಿಸಿರಲಿಲ್ಲ. ಬದಲಾಗಿ ಅವರು ನಿರೀಕ್ಷಿಸಿದ್ದು ಸ್ವರ್ಗಪ್ರಾಪ್ತಿಯನ್ನು. ಆದರೆ ಯಮಕಿಂಕರರ ಜತೆ ಯಮಲೋಕಕ್ಕೆ ಹೋಗುವ ಅನಿವಾರ್ಯತೆ ಅವರಿಗಾಗುತ್ತದೆ. ಯಮಲೋಕವೆಂದರೆ ಅದೇನೂ ಬರಿ ನರಕವಲ್ಲ. ಬದಲಾಗಿ ಅಲ್ಲಿ ಧರ್ಮಕರ್ಮಗಳ ಲೆಕ್ಕಚಾರವಾಗುತ್ತದೆ. ಹಾಗೆಯೇ ಲೆಕ್ಕಾಚಾರಗಳ ಪ್ರಕಾರ ಅಣಿಮಾಂಡ್ಯರಿಗೆ ನರಕ ಪ್ರಾಪ್ತಿಯಾಗುತ್ತದೆ.

ಅಣಿಮಾಂಡ್ಯರಿಗೆ ತಿಳಿದಿದ್ದ ಹಾಗೆ ಅವರು ನಿಯಮಾನುಸಾರವಾಗಿ ವ್ರತಾಚರಣೆಗಳನ್ನು ಮಾಡಿಕೊಂಡು ಬಂದವರು. ಹಾಗೆಯೇ ಯಾವುದೇ ಪಾಪಕರ್ಮಗಳನ್ನೂ ಮಾಡಿದವರಲ್ಲ . ಹಾಗಿದ್ದಾಗಲೂ ಅವರಿಗೆ ಯಮಲೋಕ ಪ್ರಾಪ್ತಿಯಾದದ್ದು ಹೇಗೆ ಎಂದು ಯಮರಾಜನನ್ನು ಪ್ರಶ್ನಿಸುತ್ತಾರೆ. ಸೂಕ್ಷ¾ವಾದ ಎಲ್ಲವನ್ನೂ ಗಮನಿಸಿ ಧರ್ಮ ಕರ್ಮಗಳನ್ನು ನಿರ್ಣಯ ಮಾಡುವ ಯಮನು ಅಣಿಮಾಂಡ್ಯರಿಗೆ ಹೀಗೆ ಹೇಳುತ್ತಾನೆ.

“ಬಾಲ್ಯದಲ್ಲಿದ್ದಾಗ ನೀನು ನೊಣಗಳನ್ನು ಕೊಂದು ಆಟವಾಡುತ್ತಿದ್ದೆ. ಅದರ ಕರ್ಮದ ಫ‌ಲದಿಂದ ನೀನು ಯಮಲೋಕಕ್ಕೆ ಬಂದಿರುವೆ’ ಎನ್ನುತ್ತಾನೆ. ಅಣಿಮಾಂಡ್ಯರು ಕೋಪಾವೇಶಿತರಾಗುತ್ತಾರೆ. ಏಕೆಂದರೆ ಮಕ್ಕಳಲ್ಲಿ ಮಾಡುವ ಯಾವುದೇ ತಪ್ಪು ನಿರ್ಣಾಯಕವಾಗಿರುವುದಿಲ್ಲ. ಹಾಗಾಗಿ ಅವರ ಜವಾಬ್ದಾರಿಯನ್ನು ಹೊತ್ತ ತಂದೆ ತಾಯಿಗಳದ್ದಾಗಿರುತ್ತದೆ ಎಂಬ ಸಣ್ಣ ಸೂಕ್ಷವೂ ಅರಿಯದ ನೀನು ಹೇಗೆ ಧರ್ಮ ನಿರ್ಣಯ ಮಾಡುವೆ ಎಂದು ಯಮರಾಜನನ್ನು ನಿಂದಿಸುವ ಅವರು “ಸಣ್ಣ ಧರ್ಮ ಸೂಕ್ಷ್ಮವೂ ಅರಿಯದ ನೀನು ಭೂಲೋಕದಲ್ಲಿ ಹುಟ್ಟು’ ಎಂದು ಶಪಿಸುತ್ತಾರೆ.

ಯಮಧರ್ಮನಿಗೆ ತಪ್ಪಿನ ಅರಿವಾಗುತ್ತದೆ. ಸೂಕ್ಷ¾ವನ್ನು ಗಮನಿಸದೇ ಆದ ತಪ್ಪಿಗೆ ಯಮ ಕ್ಷಮೆ ಯಾಚಿಸುತ್ತಾನೆ. ಅಣಿಮಾಂಡ್ಯರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಆದರೆ ಯಮನು ದ್ವಾಪರ ಯುಗದಲ್ಲಿ ದಾಸಿಯ ಮಗನ ರೂಪದಲ್ಲಿ ವಿದುರ ನಾಮಧೇಯರಾಗಿ ಜನಿಸುತ್ತಾರೆ. ಆದರೆ ಅವರಿಬ್ಬರೂ ಯಾವಾಗಲೂ ಧರ್ಮವನ್ನೇ ಸಾರುತ್ತಾರೆ. ಮಹಾಭಾರತದಲ್ಲಿ ಒಂದು ಪರ್ವವೇ ವಿದುರನೀತಿಯಾಗಿ ರೂಪುಗೊಳ್ಳುತ್ತದೆ. ಅಲ್ಲಿರುವುದು ಬರಿಯ ಧರ್ಮಸೂಕ್ಷ್ಮವನ್ನು ಅರಿತು ಬದುಕುವ ರೀತಿಯಾಗಿದೆ.

ಹೀಗೆ ಧರ್ಮರೂಪನಾದ ಯಮರು ವಿದುರರಾಗಿ ಭೂಲೋಕದಲ್ಲಿ ಹುಟ್ಟಿ ತಮ್ಮ ಕರ್ಮವನ್ನು ತೀರಿಸಿ ಶಾಪಮುಕ್ತರಾಗುತ್ತಾರೆ. ಅಂದರೆ ದೇವತೆಗಳಾಗಲೀ ಮಾನವರಾಗಲೀ ಯಾರೂ ಕರ್ಮವನ್ನು ಮೀರಿ ನಡೆಯಲಾರೆವು. ಧರ್ಮ-ಕರ್ಮವೆಂಬುದು ಎಲ್ಲರಿಗೂ ಸಮವಾದ ಅಂಶವೇ ಆಗಿದೆ. ಮೀರಿ ನಡೆದವರು ಯಾರೇ ಆದರೂ ಶಾಪಯೋಗ್ಯರು. ಅದಲ್ಲದೇ ಬಾಲ್ಯದಲ್ಲಿ ಮಕ್ಕಳು ಮಾಡುವ ತಪ್ಪಿಗೆ ತಂದೆ-ತಾಯಿಗಳು ಹೊಣೆಯಾಗುತ್ತಾರೆ.

ಈ ಸೂಕ್ಷ್ಮವನ್ನು ನಾವು ಅರಿತು ಮಕ್ಕಳನ್ನು ಯೋಗ್ಯರನ್ನಾಗಿಸಿ ಶಾಪ ಮುಕ್ತರಾಗುವ ಹೊಣೆಯೂ ನಮ್ಮ ಮೇಲಿದೆ ಎಂಬ ಸಣ್ಣ ಅರಿವು ನಮ್ಮನ್ನು ಜಾಗೃತರನ್ನಾಗಿರಿಸಿದರೆ ಭವಿಷ್ಯದ ಸಮಾಜ ಸ್ವತ್ಛವಾಗಿ, ನಿರ್ಮಲವಾಗಿರುತ್ತದೆ. ನಮ್ಮೆಲ್ಲ ಪುರಾಣ ಕಥೆಗಳೂ ಇಂತಹ ಸೂಕ್ಷ್ಮಗಳನ್ನೇ ನಮಗೆ, ಮುಂದಿನ ಪೀಳಿಗೆಗೆ ಮಾರ್ಗದರ್ಶನವನ್ನಾಗಿ ನೀಡಿವೆ. ಅವುಗಳನ್ನು ಪಾಲಿಸಿದರೆ, ಅರ್ಥೈಸಿಕೊಂಡರೆ ಅವೆಷ್ಟು ಶುದ್ಧರಾಗುತ್ತೇವೆ ಮತ್ತು ನಿಶ್ಕಲ್ಮಶರಾಗುತ್ತೇವೆ ಅಲ್ಲವೇ ? ಇದೇ ನಮ್ಮ ಪುರಾಣಗಳ ಆಶಯವೂ ಹೌದು.

*ಡಾ| ಜಲದರ್ಶಿನಿ ಜಲರಾಜು, ಮಾಂಟ್ರಿಯಲ್‌

 

Advertisement

Udayavani is now on Telegram. Click here to join our channel and stay updated with the latest news.

Next