ಆಳಂದ: ಕನ್ನಡ ನಾಡಿಗೆ ಸಾಮಾಜಿಕ, ಧಾರ್ಮಿಕ ಮತ್ತು ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ತುಮಕೂರಿನ ಸಿದ್ಧಗಂಗಾ ಮಠದ ಲಿಂ. ಡಾ| ಶಿವುಕುಮಾರ ಸ್ವಾಮೀಜಿಗಳ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಮುಖಂಡ ಮಹೇಶ್ವರಿ ಎನ್. ವಾಲಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಬಳಿ ಶುಕ್ರವಾರ ಜೆಡಿಎಸ್ ನಿಂದ ಹಾಗೂ ಅಭಿಮಾನಿ ಬಳಗದಿಂದ ಹಮ್ಮಿಕೊಂಡ ಸಿದ್ಧಗಂಗಾ ಮಠದ ಶತಾಯುಷಿ ಲಿಂ. ಡಾ| ಶಿವಕುಮಾರ ಮಹಾ ಸ್ವಾಮೀಜಿ ಅವರ 115ನೇ ಜನ್ಮದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸಾರ್ವಜನಿಕರಿಗೆ ಆಯೋಜಿಸಿದ್ದ ಅನ್ನಸಂತರ್ಪಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿದ್ಧಗಂಗೆಯ ನೆಲದಲ್ಲಿ ವಾತ್ಸಲ್ಯದ ಮಡಿಲಾಗಿದ್ದ ಶ್ರೀಗಳು ನಡೆದಾಡುವ ದೇವರಾಗಿದ್ದರು. ಗಾಳಿಯಿಂದ ಶಿವಲಿಂಗ ತೆಗೆಯಲಿಲ್ಲ. ಬೂದಿಯಿಂದ ಉಂಗುರ ಸೃಷ್ಟಿಸಲಿಲ್ಲ. ಸ್ಪರ್ಶಮಾತ್ರದಿಂದಲೇ ಕಾಯಿಲೆಗಳನ್ನು ಗುಣಪಡಿಸಲಿಲ್ಲ. ಸೇವಾ ಮನೋಭಾವ ಇರುವ ಯಾವುದೇ ಸಾಮಾನ್ಯ ಮನುಷ್ಯರು ಮಾಡಬಹುದಾದ ಅನ್ನ, ಅಕ್ಷರ, ಆಶ್ರಯ ಎಂಬ ತ್ರೀವಿಧ ದಾಸೋಹವನ್ನು ಸಣ್ಣ ಪ್ರಮಾಣದಲ್ಲೇ ಆರಂಭಿಸಿ ಬದ್ಧತೆಯಿಂದ ಅದನ್ನು ಲಕ್ಷಾಂತರ ಜೀವಿಗಳಿಗೆ ವಿಸ್ತರಿಸಿ ದೇವರೆನಿಸಿಕೊಂಡರು. ನಿಜವಾದ ಪವಾಡವೆಂದರೆ ಇದು ಎಂದು ಹೇಳಿದರು.
ಒಳ್ಳೆಯತನವೊಂದೇ ಮನುಷ್ಯರನ್ನು ದೇವರಾಗಿಸಬೇಕೇ ಹೊರತು ಜನರನ್ನು ಮೋಸಮಾಡುವ ಕಣ್ಕಟ್ಟು, ಕೈಚಳಕದಂತ ಪವಾಡಗಳಲ್ಲ. ಸ್ವಾಮೀಜಿ ಎನ್ನುವ ಪದಕ್ಕೆ ಬೆಲೆ ಸಿಕ್ಕಿದ್ದು ಸಿದ್ಧಗಂಗಾ ಶ್ರೀಗಳಂತ ದೇವತಾ ಮುನುಷ್ಯರಿಂದ ಮಾತ್ರ. ಇದನ್ನು ಅರಿತು ಸಮಾಜದ ಅಭಿವೃದ್ಧಿಗೆ ಯತ್ನಿಸೋಣ ಎಂದರು.
ಮುಖಂಡರಾದ ಶರಣ ಕುಲಕರ್ಣಿ, ಅಮರ ಪೂಜಾರಿ, ಜೈರಾಮ ರಾಠೊಡ, ಮಹೇಶ ಸಂಗೋಳಗಿ, ನವೀನ ಪೂಜಾರಿ ಮತ್ತಿತರರು ಇದ್ದರು. ಬಳಿಕ ಸಾರ್ವಜನಿಕರು ಸಿದ್ಧಂಗಗಾ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.