ಹೂವಿನಹಿಪ್ಪರಗಿ: ದೇಶದ ಅಭಿವೃದ್ಧಿಗೆ ವಿಜ್ಞಾನಿಗಳು ವಿವಿಧ ರೀತಿಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ ಅಂತಹ ಮಹಾ ಪುರುಷರ ಸವಿ ನೆನಪಿಗಾಗಿ ಫೆ. 28ರಂದು ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಅಡಗಿಮನಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ| ಸಿ.ವಿ. ರಾಮನ್. ಡಾ| ಜಗದೀಶಚಂದ್ರ ಬೋಸ್, ಹೋಮಿ ಜಹಂಗೀರ ಬಾಬಾ, ಎಪಿಜಿ ಅಬ್ದುಲ್ ಕಲಾಂ ಸೇರಿದಂತೆ ಹಲವಾರು ವಿಜ್ಞಾನಿಗಳು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹಾ ಪುರುಷರ ಜೀವನ ಆದರ್ಶ. ಅವರು ನಡೆದು ಬಂದ ದಾರಿ ಸಾಧನೆಗಳನ್ನು ಇಂದಿನ ವಿದ್ಯಾರ್ಥಿಗಳು ತಿಳಿಯುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ತಮ್ಮ ತರಗತಿಯ ಕಲಿಕೆಯೊಂದಿಗೆ ವಿಜ್ಞಾನ ಜಗತ್ತಿನಲ್ಲಿ ಸಾಧನೆ ಮಾಡಿದ ಸಾಧಕರ ಬಗ್ಗೆ ತಿಳಿದುಕೊಳ್ಳಬೇಕು. ಇಂದಿನ ಆಧುನಿಕ ಯುಗದಲ್ಲಿ ಸಾಕಷ್ಟು ಹೊಸ ಹೊಸ ಆವಿಷ್ಕಾರಗಳು ಹುಟ್ಟಿ ನಮ್ಮ ಕಣ್ಣ ಮುಂದೆ ಬರುತ್ತಿವೆ ನಾವೆಲ್ಲರೂ ಅಂತಹ ಆವಿಷ್ಕಾರಗಳ ಬಗ್ಗೆ ತಿಳಿದು ಕೊಳ್ಳುವುದರ ಮೂಲಕ ಅಧುನಿಕ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡುವತ್ತ ಗಮನ ಹರಿಬೇಕು ಎಂದರು.
ಮುಖ್ಯಗುರು ಸುಭಾಷ್ ಹರಿಜನ ಮಾತನಾಡಿ, ಮಕ್ಕಳು ತಮ್ಮ ಕಲಿಕೆಯೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅನುಶ್ರೀ ಸಜ್ಜನ ನಿರೂಪಿಸಿದರು. ಐಶ್ವರ್ಯ ಗೋಕಾವಿ ವಂದಿಸಿದರು.