ಜೇವರ್ಗಿ: ಸಾಂಕ್ರಾಮಿಕ ಪಿಡುಗನ್ನು ತೊಲಗಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಪ್ರಾಮುಖ್ಯವಾದದ್ದು, ಅವರು ಕೊರೊನಾ ವಾರಿಯರ್ಸ್ ಆಗಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನೆರವೇರಿಸಿದ್ದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಜಿಲ್ಲಾಧ್ಯಕ್ಷ ವಿ.ಜಿ. ದೇಸಾಯಿ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಆಶಾ ಕಾರ್ಯಕರ್ತೆಯರ ತಾಲೂಕು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ. ಗರ್ಭೀಣಿಯರ ಆರೈಕೆ, ತಾಯಿ-ಮಕ್ಕಳ ರಕ್ಷಣೆ, ತಾತ್ಕಾಲಿಕ ಕುಟುಂಬ ಯೋಜನೆ ಕೆಲಸಗಳು, ಚಿಕೂನ್ ಗೂನ್ಯಾ, ಕುಷ್ಟರೋಗ ಕುರಿತು ಜಾಗೃತಿ ಕಾರ್ಯಕ್ರಮ ನಿರ್ವಹಿಸುವುದರ ಜತೆಗೆ ಎಡೆಬಿಡದೇ ಕೋವಿಡ್ ಕಾರ್ಯದಲ್ಲಿ ತೊಡಗಿ ಹಗಲಿರುಳು ಶ್ರಮಿಸಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಸೂಕ್ತ ಸಂಬಳ, ಇನ್ನಿತರ ಸೌಲಭ್ಯಗಳು ಸಿಗದೇ ಇರುವುದು ನೋವಿನ ಸಂಗತಿ ಎಂದರು.
ಆಶಾ ಸಂಘಟನೆಯ ಕಲಬುರಗಿ ನಗರ ಅಧ್ಯಕ್ಷೆ ಜಯಶ್ರೀ ಮಾತನಾಡಿ, ದಿನಪೂರ್ತಿ ದುಡಿದರೂ ಆಶಾಗಳಿಗೆ ನಿಗದಿತ ಸಂಬಳ ಸಿಗುತ್ತಿಲ್ಲ. ಇದರಿಂದ ಬದುಕು ಸಾಗಿಸುವುದು ಬಹಳ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಸೂಕ್ತ ಹಾಗೂ ನಿಗದಿತ ಸಂಬಳ ನೀಡಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಆಶಾ ಸಂಘಟನೆ ತಾಲೂಕು ಕಾರ್ಯದರ್ಶಿ ಲಕ್ಷ್ಮೀ ಮಾತನಾಡಿ, ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ಸಂಘಟಿತವಾದ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಇದೇ ವೇಳೆ ಆಶಾಕಾರ್ಯಕರ್ತೆಯರ ತಾಲೂಕು ಸಮಿತಿ ರಚಿಸಲಾಯಿತು. ನೂತನ ಅದ್ಯಕ್ಷೆಯಾಗಿ ಲಕ್ಷ್ಮೀ ಜೇರಟಗಿ, ಉಪಾಧ್ಯಕ್ಷರಾಗಿ ಸುಧಾ ವಡಗೇರಾ, ಕಾರ್ಯದರ್ಶಿಯಾಗಿ ತಾಯಮ್ಮ ನರಿಬೋಳ, ಸಹ ಕಾರ್ಯದರ್ಶಿಯಾಗಿ ಗಂಗೂಬಾಯಿ ಜೇರಟಗಿ, ರವಿಕಲಾ ಆಂದೋಲಾ ಅವರನ್ನು ಆಯ್ಕೆ ಮಾಡಲಾಯಿತು. ಇದರೊಂದಿಗೆ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪ್ರತಿನಿಧಿ ಗಳನ್ನು ಆಯ್ಕೆ ಮಾಡಿ 25 ಜನರ ತಾಲೂಕು ಸಮಿತಿ ರಚಿಸಲಾಯಿತು. ಮಹಾದೇವಿ ಮಳ್ಳಿ ಸ್ವಾಗತಿಸಿದರು, ಲಕ್ಷ್ಮೀ ನಿರೂಪಿಸಿದರು, ತಾಯಮ್ಮ ನರಿಬೋಳ ವಂದಿಸಿದರು.