Advertisement

“ಕೈ’ಶಾಸಕರು, ನಾಯಕರ ತದ್ವಿರುದ್ಧ ಅಭಿಪ್ರಾಯ

11:41 PM Jul 09, 2019 | Team Udayavani |

ಬೆಂಗಳೂರು: ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆಗೆ ಹೋಗುವುದಕ್ಕಿಂತ ಪ್ರತಿಪಕ್ಷ ಸ್ಥಾನದಲ್ಲಿ ಕೂಡುವುದು ಉತ್ತಮ ಎಂದು ಕಾಂಗ್ರೆಸ್‌ ಶಾಸಕರು ಪಕ್ಷದ ನಾಯಕರಿಗೆ ಸಲಹೆ ನೀಡಿದ್ದಾರೆ. ಆದರೆ, ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಒಟ್ಟಾಗಿರುವಂತೆ ನಾಯಕರು ಶಾಸಕರಿಗೆ ಸೂಚಿಸಿದ್ದಾರೆ.

Advertisement

ಮಂಗಳವಾರ ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಯಕರು ಹಾಗೂ ಶಾಸಕರು ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊನೆಗೆ, ನಾಯಕರ ಇಚ್ಚೆಯಂತೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಶಾಸಕರು ಪಕ್ಷ ತೊರೆಯದಂತೆ ನಾಯಕರು ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

21 ಶಾಸಕರು ಗೈರು: 80 ಶಾಸಕರ ಬಲ ಹೊಂದಿರುವ ಕಾಂಗ್ರೆಸ್‌ನಲ್ಲಿ ಮಂಗಳವಾರದ ಸಭೆಗೆ ರಾಜೀನಾಮೆ ಸಲ್ಲಿಸಿದ 11 ಶಾಸಕರು ಸೇರಿ 21 ಶಾಸಕರು ಗೈರು ಹಾಜರಾಗಿದ್ದರು. ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ, ಸಂಡೂರು ಶಾಸಕ, ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ, ಹರಿಹರ ಶಾಸಕ ಎಸ್‌.ರಾಮಪ್ಪ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌, ಹೊಸಕೋಟೆ ಶಾಸಕ, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಅನುಮತಿ ಪಡೆದು ಗೈರು ಹಾಜರಾಗಿದ್ದರು.

ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಅನುಮತಿ ಪಡೆಯದೇ ಗೈರು ಹಾಜರಾಗಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮೂಲಕ ತಮ್ಮ ಗೈರು ಹಾಜರಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರಿಗೂ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಆದರೆ, ಯಾವುದೇ ಶಾಸಕರು ಪಕ್ಷದ ಸೂಚನೆಗೆ ಪ್ರತಿಕ್ರಿಯೆ ನೀಡಿಲ್ಲ. ಬಿಟಿಎಂ ಲೇಔಟ್‌ ಶಾಸಕ ರಾಮಲಿಂಗಾ ರೆಡ್ಡಿ ಅವರ ಅನುಪಸ್ಥಿತಿಯನ್ನು ಗೈರು ಹಾಜರಿ ಎಂದು ಕಾಂಗ್ರೆಸ್‌ ಪರಿಗಣಿಸಿದೆ.

Advertisement

ನಾಯಕರ ವಿರುದ್ಧ ಶಾಸಕರ ಅಸಮಾಧಾನ: ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿರುವುದೇ ಸರ್ಕಾರ ಪತನದ ಅಂಚಿಗೆ ಬಂದು ನಿಲ್ಲಲು ಕಾರಣವಾಗಿದೆ. ನಾಯಕರ ವಿಳಂಬ ಧೋರಣೆಯಿಂದ ಈ ಬೆಳವಣಿಗೆಯಾಗಿದೆ ಎಂದು ಕೆಲವು ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.

ಆರು ತಿಂಗಳ ಹಿಂದೆಯೇ ಬಂಡಾಯ ಸಾರಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ, ಈಗ ಇಷ್ಟೊಂದು ಶಾಸಕರು ರಾಜೀನಾಮೆ ನೀಡುವ ಪ್ರಸಂಗವೇ ಬರುತ್ತಿರಲಿಲ್ಲ. ಆಗಲೇ ಆ ಇಬ್ಬರೂ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳದೇ ವಿಳಂಬ ಧೋರಣೆ ಅನುಸರಿಸಿರುವುದರಿಂದ ಬೇರೆ ಶಾಸಕರು ಬಂಡಾಯ ಸಾರಲು ಪ್ರೇರೇಪಣೆ ನೀಡಿದೆ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ನೇರವಾಗಿಯೇ ಆರೋಪಿಸಿದ್ದಾರೆಂದು ತಿಳಿದು ಬಂದಿದೆ.

ಹಣ ಮತ್ತು ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡುವವರಿಗೆ ತಕ್ಕ ಪಾಠ ಕಲಿಸಲು ಅತೃಪ್ತರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ನೀಡುವಂತೆ ಶಾಸಕರು ಆಗ್ರಹಿಸಿದ್ದಾರೆ. ಈಗಲಾದರೂ ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಂಡರೆ, ಉಳಿದವರಿಗೆ ಭಯ ಹುಟ್ಟುತ್ತದೆ ಎಂದು ಶಾಸಕರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರೇವಣ್ಣ ವಿರುದ್ಧವೂ ಆಕ್ರೋಶ: ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಕೆಲವು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಕಾಂಗ್ರೆಸ್‌ ಶಾಸಕರ ಯಾವುದೇ ಕೆಲಸಗಳೂ ಮೈತ್ರಿ ಸರ್ಕಾರದಲ್ಲಿ ಆಗುತ್ತಿಲ್ಲ. ರೇವಣ್ಣ ಅವರು ಬೇರೆ ಸಚಿವರ ಇಲಾಖೆಯ ಕೆಲಸಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು ಎನ್ನಲಾಗಿದೆ.

ಕಾಂಗ್ರೆಸ್‌ ಸಚಿವರೂ ಕೂಡ ಪಕ್ಷದ ಶಾಸಕರ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಲಸ ಆಗದಿರುವ ಸರ್ಕಾರದಲ್ಲಿ ಮುಂದುವರೆಯುವುದಕ್ಕಿಂತ ಪ್ರತಿಪಕ್ಷದಲ್ಲಿಯೇ ಕೂಡುವುದು ಉತ್ತಮ. ಏಕೆಂದರೆ ತಕ್ಷಣವೇ ಚುನಾವಣೆಗೆ ಹೋದರೆ, ಎದುರಿಸುವುದು ಕಷ್ಟ ಎಂಬ ಅಭಿಪ್ರಾಯವನ್ನು ಕೆಲವು ಶಾಸಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಗೈರು ಹಾಜರಾದ ಶಾಸಕರು
ಕನೀಜ್‌ ಫಾತಿಮಾ- ಕಲಬುರಗಿ ಉತ್ತರ
ಈ ತುಕಾರಾಂ- ಸಂಡೂರು
ಎಸ್‌.ರಾಮಪ್ಪ- ಹರಿಹರ
ಶಾಮನೂರು ಶಿವಶಂಕರಪ್ಪ-ದಾವಣಗೆರೆ ಶಾಸಕ
ಟಿ.ಡಿ. ರಾಜೇಗೌಡ-ಶೃಂಗೇರಿ
ಡಾ.ಕೆ.ಸುಧಾಕರ್‌- ಚಿಕ್ಕಬಳ್ಳಾಪುರ
ಎಂ.ಟಿ.ಬಿ.ನಾಗರಾಜ್‌ -ಹೊಸಕೋಟೆ
ಡಾ. ಅಂಜಲಿ ನಿಂಬಾಳ್ಕರ್‌-ಖಾನಾಪುರ

ರಾಜೀನಾಮೆ ನೀಡಿ ಗೈರು ಹಾಜರಾದವರು
ಎಸ್‌.ಟಿ.ಸೋಮಶೇಖರ್‌-ಯಶವಂತಪುರ
ಬೈರತಿ ಬಸವರಾಜ್‌-ಕೆ.ಆರ್‌.ಪುರ
ಮುನಿರತ್ನ-ಆರ್‌.ಆರ್‌. ನಗರ
ಶಿವರಾಮ್‌ ಹೆಬ್ಟಾರ್‌- ಯಲ್ಲಾಪುರ
ರಮೇಶ್‌ ಜಾರಕಿಹೊಳಿ-ಗೋಕಾಕ್‌
ಮಹೇಶ್‌ ಕುಮಟಳ್ಳಿ-ಅಥಣಿ
ಪ್ರತಾಪ್‌ಗೌಡ ಪಾಟೀಲ್‌-ಮಸ್ಕಿ
ಬಿ.ಸಿ.ಪಾಟೀಲ್‌-ಹಿರೆಕೆರೂರು
ರಾಮಲಿಂಗಾ ರೆಡ್ಡಿ-ಬಿಟಿಎಂ ಲೇಔಟ್‌
ಆನಂದ್‌ ಸಿಂಗ್‌-ವಿಜಯನಗರ (ಹೊಸಪೇಟೆ)
ರೋಷನ್‌ ಬೇಗ್‌-ಶಿವಾಜಿನಗರ

ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಜತೆ ಕೈ ಜೋಡಿಸಿರುವುದರಿಂದ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ದೂರು ನೀಡಲಾಗಿದೆ. ರಾಮಲಿಂಗಾರೆಡ್ಡಿ ಕಾಂಗ್ರೆಸ್‌ ವಿರುದ್ಧ ಹೇಳಿಕೆ ನೀಡಿಲ್ಲ ಅಥವಾ ಬಿಜೆಪಿ ಜೊತೆ ಸೇರಿಕೊಂಡಿಲ್ಲ. ಹೀಗಾಗಿ, ಅವರ ವಿರುದ್ಧ ಕ್ರಮ ಇಲ್ಲ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next