Advertisement
ನಮ್ಮ ದೇಶದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಈ ಹಿಂದೆ 1971, 1981 ಮತ್ತು 2001ರಲ್ಲಿ ಜನಗಣತಿ ನಡೆಸಲಾಗಿತ್ತು. 2011ರಲ್ಲಿ ಮತ್ತೆ ಜನಗಣತಿ ನಡೆಸಲಾಗಿತ್ತಾದರೂ ಯಾವುದೋ ಕಾರಣಕ್ಕೆ ಅದರ ಫಲಿತಾಂಶಗಳನ್ನು ಬಹಿರಂಗಗೊಳಿಸಿರಲಿಲ್ಲ. ಇದೀಗ ಮುಂದಿನ ಜನಗಣತಿ 2021ರಲ್ಲಿ ನಡೆಯುವ ಕೇವಲ ಮೂರು ವರುಷಗಳ ಮುನ್ನ 2011ರ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಸರಕಾರ ಸಂಗ್ರಹಿಸಿದ ಮಾಹಿತಿಗಳನ್ನು ವರ್ಗೀಕರಿಸಿ ಸಾರ್ವಜನಿಕರಿಗೆ ಮಂಡಿಸಲು ಏಳು ವರ್ಷಗಳನ್ನು ತೆಗೆದುಕೊಂಡಿದೆ ಎಂಬ ಅಂಶವು ಡಿಜಿಟಲ್ ಭಾರತಕ್ಕೆ ಒಳ್ಳೆಯ ಹೆಸರೇನನ್ನೂ ತಂದುಕೊಡದು.
Related Articles
Advertisement
ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು ಇದರಲ್ಲಿ ಶೇ. 96.47ರಷ್ಟು ಜನರು ( 43706512) ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಉಳಿದ 21,54,853 (ಶೇ. 3.53) ಜನರು ಕರ್ನಾಟಕದಲ್ಲಿರುವ ಬೇರೆ ಭಾಷೆಯವರಾಗಿದ್ದಾರೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಒಂದು ನಿರ್ದಿಷ್ಟ ಭಾಷೆಯನ್ನು ಆಡುವವರ ಸಂಖ್ಯೆಯಲ್ಲಿ ಕಂಡು ಬರುವ ಏರಿಳಿತಗಳು. 1971ರಿಂದ 2011ರ ಅಂಕಿ ಅಂಶಗಳನ್ನು ಗಮನಿಸಿದರೆ, ಕನ್ನಡ ಮಾತಾಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಸರಾಸರಿ ಶೇ. 3.75 ಮಾತ್ರ ಏರಿಕೆ ಆಗಿದೆ. ಇದು ಹಿಂದಿಯಲ್ಲಿ ಸರಾಸರಿ ಶೇ. 42 ಆಗಿದ್ದರೆ ತಮಿಳಿನಲ್ಲಿ ಶೇ. 6 ಆಗಿದೆ. ಈ ವಿಷಯದಲ್ಲಿ ತುಳುವರು ಕನ್ನಡಕ್ಕಿಂತ ಮುಂದಿದ್ದು ಶೇ. 9 ಏರಿಕೆ ತೋರಿಸಿದ್ದಾರೆ.
ಸಂವಿಧಾನದ ಎಂಟನೇ ಪರಿಚ್ಛೇದ ಈಚಿನ ದಿನಗಳಲ್ಲಿ ತುಳುವೂ ಸೇರಿದಂತೆ ಒಟ್ಟು 39 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಲು ಹೋರಾಟ ನಡೆಸುತ್ತಿವೆ. ಇತರ 60 ಭಾಷೆಗಳು ಹೋರಾಟಕ್ಕೆ ತಯಾರಾಗುತ್ತಿವೆ. ನಡೆಸಲು ಸಜ್ಜಾಗುತ್ತಿವೆ. ಈ ಹೋರಾಟಗಳನ್ನು ಸವಾಲಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕೇಂದ್ರ ಸರಕಾರವು ಎಂಟನೆಯ ಪರಿಚ್ಛೇದದ ಕೆಲವು ಸವಲತ್ತುಗಳನ್ನು ಕಡಿತಗೊಳಿಸಲು ಆರಂಭಿಸಿದೆ. ಈ ನಡುವೆ ಯುನೆಸ್ಕೋವು ಸಿದ್ಧಪಡಿಸಿದ ಭಾಷೆಗಳ ಜಾಗತಿಕ ಭೂಪಟವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. ತುಳುವಿಗೆ ಸಿಗದ ಮನ್ನಣೆ
ಇವತ್ತು ತುಳು ಭಾಷೆಯ ಕುರಿತಾದ ಅಧ್ಯಯನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಪ್ರಾಪ್ತಿಸಿದೆ. ಆದರೂ ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಿ, ಆ ಭಾಷೆಗೊಂದು ಅಧಿಕೃತ ಮಾನ್ಯತೆಯನ್ನು ತಂದುಕೊಳ್ಳಲು ಇದುವರೆಗೆ ನಮಗೆ ಸಾಧ್ಯ ಆಗಿಲ್ಲ. ಹಾಗೆ ಸಾಧ್ಯವಾಗಲು ಬೇಕಾದ ರಾಜಕೀಯ ತುಳುವರಿಗೆ ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣವೇ ಹೊರತು ತುಳುವಿಗೆ ಅಂಥ ಅರ್ಹತೆಯಿಲ್ಲವೆಂದು ಅರ್ಥವಲ್ಲ. ಭಾಷೆಯೊಂದು ಯಾವುದೇ ರಾಜ್ಯದ ಅಧಿಕೃತವಾದ ಭಾಷೆಯೆಂದು ಘೋಷಿಸಲ್ಪಟ್ಟಾಗ ಅದು ಸಹಜವಾಗಿ ಎಂಟನೆಯ ಪರಿಚ್ಛೇದಕ್ಕೆ ಸೇರುತ್ತದೆ. ಕಾರಣ ಸಂವಿಧಾನ ಅಸ್ತಿತ್ವಕ್ಕೆ ಬಂದಾಗ 14 ಭಾಷೆಗಳನ್ನು ಪಟ್ಟಿಗೆ ಸೇರಿಸಲಾಯಿತು. ಮುಂದೆ 1967ರಲ್ಲಿ ಸಿಂಧಿ, 1992ರಲ್ಲಿ ಕೊಂಕಣಿ, ಮಣಿಪುರಿ, ಮತ್ತು ನೇಪಾಲಿ ಭಾಷೆಗಳನ್ನು ಸೇರಿಸಲಾಯಿತು. ಆದರೆ 2003ರಲ್ಲಿ ಭಾರತದ ಸಂವಿಧಾನದಲ್ಲಿ ಬದಲಾವಣೆ ಮಾಡಿ, ಯಾವುದೇ ರಾಜ್ಯದ ಆಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಗಳನ್ನು ಸೇರಿಸಲಾಯಿತು. ಈ ನಾಲ್ಕು ಭಾಷೆಗಳು ಕೇವಲ ಅರ್ಹತೆಯಿಂದ ಸೇರಿವೆ ಎಂದೇನೂ ಭಾವಿಸಬೇಕಾಗಿಲ್ಲ. ಡೋಗ್ರಿ ಭಾಷೆಯ ಹಿಂದೆ ಮಹಾರಾಜಾ ಕರಣ್ ಸಿಂಗ್ ಇದ್ದರು. ಅಸ್ಸಾಂಗೆ ಭೇಟಿ ನೀಡಿದ್ದ ಆಗಣ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತ್ಯೇಕ ಬೋಡೋ ಲ್ಯಾಂಡ್ ಕೇಳುತ್ತಿರುವ ಬೋಡೋ ಬುಡಕಟ್ಟಿನ ಜನರನ್ನು ಮೆಚ್ಚಿಸಲು ಬೋಡೋ ಭಾಷೆಗೆ ಮನ್ನಣೆ ನೀಡುವ ಕೆಲಸ ಮಾಡಿದರು. ಮೈಥಿಲಿ ಭಾಷೆಯ ಹಿಂದೆ ಆಗಣ ಗೃಹ ಸಚಿವ ಎಲ್. ಕೆ. ಆಡ್ವಾಣಿ ಅವರ ಕೆಲಸಗಳಿವೆ ಮತ್ತು ಸಂತಾಲಿ ಭಾಷೆಯ ಹಿಂದೆ ಪಶ್ಚಿಮ ಬಂಗಾಳ ಸರಕಾರದ ಒತ್ತಡವಿದೆ. ತುಳುವಿಗೆ ಈ ಮಟ್ಟದ ಹೋರಾಟಗಾರರು ಸಿಗಲಿಲ್ಲವಾದ್ದರಿಂದ ಕನಸು ಹಾಗೆಯೇ ಉಳಿಯಿತು. ಒಟ್ಟಾರೆಯಾಗಿ ಇದೀಗ ಉತ್ತರ ಭಾರತದ 18 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿವೆ. ಆದರೆ, ದಕ್ಷಿಣಭಾರತದ ಕೇವಲ 4 ಭಾಷೆಗಳಿಗೆ ಅಲ್ಲಿ ಸ್ಥಾನ ಸಿಕ್ಕಿದೆ. ಇದೊಂದು ಅಪಾಯಕಾರೀ ಪ್ರಾದೇಶಿಕ ಅಸಮತೋಲನ. ದಕ್ಷಿಣಭಾರತದ ರಾಜಕಾರಣಿಗಳಿಗೆ ಈ ಬಗ್ಗೆ ನಾವೆಲ್ಲ ತಿಳಿಸಿ ಹೇಳಬೇಕಾಗಿದೆ. ಪ್ರಸ್ತುತ ತುಳು, ಕೊಡವದಂಥ ನೂರಾರು ಸಣ್ಣ ಭಾಷೆಗಳ ಮುಂದೆ ಇಂದು ಹಲವು ಸವಾಲುಗಳಿವೆ. ಈ ಸಣ್ಣ ಭಾಷೆಗಳನ್ನು ಆಯಾ ರಾಜ್ಯ ಸರಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಯೆಂದು ಇದುವರೆಗೂ ಘೋಷಿಸಿಲ್ಲ. ಆಂಧ್ರ ಪ್ರದೇಶವು ತೆಲುಗಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು , ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು , ದೆಹಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು? ಹಾಗೆ ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರಕಾರಕ್ಕೆ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಾಗಿದೆ.