ದಾವಣಗೆರೆ: ಉತ್ಕಟ ದೇಶಾಭಿಮಾನ, ಉದಾತ್ತ ಚಿಂತನೆಯುಳ್ಳ ಕ್ರಾಂತಿಕಾರಿ ಭಗತ್ ಸಿಂಗ್‌ರ ಆದರ್ಶಗಳ ಪಾಲಿಸುವ ಮೂಲಕ ಯುವ ಸಮೂಹ ಭವ್ಯ ಭಾರತದ ನಿರ್ಮಾಣ ಮಾಡಬೇಕಿದೆ ಎಂದು ಭಾರತೀಯ ಜನಕಲಾ ಸಮಿತಿಯ ಜಿಲ್ಲಾ ಮುಖಂಡ ಪಿ. ಷಣ್ಮುಖಸ್ವಾಮಿ ಮನವಿ ಮಾಡಿದ್ದಾರೆ.
ಕೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಅಖೀಲಭಾರತ ವಿದ್ಯಾರ್ಥಿ ಫೆಡರೇಷನ್(ಎಐಎಸ್‌ಎಫ್) ವತಿಯಿಂದ ಆಯೋಜಿಸಿದ್ದ ಭಗತ್‌ಸಿಂಗ್ ಹಾಗೂ ರಾಜ್ ಗುರು,ಸುಖದೇವ್‌ರವರ 86ನೇ ಹುತಾತ್ಮ ದಿನ ಆಚರಣೆಯಲ್ಲಿ ಮಾತನಾಡಿದರು.
ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಸಿಡಿದೆದ್ದು ಅತೀ ಚಿಕ್ಕ ವಯಸ್ಸಿನಲ್ಲಿಯೇ ರಾಜ್‌ಗುರು, ಸುಖದೇವ್‌ರೊಂದಿಗೆ ಪ್ರಾಣಾರ್ಪಣೆ ಮಾಡಿದ ಭಗತ್‌ಸಿಂಗ್‌ರ ವಿಚಾರಧಾರೆಯನ್ನು ಶಾಲಾಹಂತದಲ್ಲಿಯೇ ತಿಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಭಗತ್‌ಸಿಂಗ್ ಅವರು ಕಂಡ ಸ್ವಾತಂತ್ರದ ಕನಸು ಇಂದಿಗೂ ಈಡೇರಿಲ್ಲ.
ದೇಶದ ಒಳಗಿನ ಸಮಾಜದಲ್ಲಿ ಬಂಡವಾಳಶಾಹಿಗಳ ದಬ್ಟಾಳಿಕೆ, ಮಹಿಳೆಯರ, ದಮನಿತರ ಮೇಲಿನ ಶೋಷಣೆ ನಿರಂತರವಾಗಿ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಎಂದು ಆತಂಕಗೊಂಡರು. ಇಂದಿನ ಮೂಲಭೂತವಾದಿಗಳು ನಡೆಸುತ್ತಿರುವ ಇತಿಹಾಸ ತಿರುಚುವಿಕೆಯಿಂದ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಕ್ರಾಂತಿಕಾರಿಗಳ ವಿಚಾರಗಳೇ ಕಣ್ಮರೆಯಾಗುತ್ತಿವೆ.
ಸರ್ಕಾರಗಳು ಹುತಾತ್ಮ, ಮಹಾನೀಯರ ಆಚರಣೆಗಳ ಮೂಲಕ ಸ್ಮರಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಎಐಎಸ್‌ಎಫ್ ಜಿಲ್ಲಾ ಅಧ್ಯಕ್ಷ ಮಾದಿಹಳ್ಳಿ ಕೆ. ಮಂಜಪ್ಪ ಮಾತನಾಡಿ, ವಿದ್ಯಾಥಿಗಳಿಗೆ ಪಠ್ಯದ ಜೊತೆಗೆ ದೇಶಕ್ಕೆ ಕೊಡುಗೆ ನಿಡಿದ ಮಹಾನೀಯರ ಜೀವನ ಚರಿತ್ರೆಯ ಪುಸ್ತಕ ಓದಬೇಕು.
ಕೆಲವು ಸಂಘಟನೆಗಳು ಕೆಲವೊಬ್ಬ ವ್ಯಕ್ತಿಗಳನ್ನು ವೈಭವೀಕರಿಸುತ್ತಾ ಕ್ರಾಂತಿಕಾರಿ ಭಗತ್‌ಸಿಂಗ್, ಸುಖದೇವ್,ಚಂದ್ರಶೇಖರ್ ಅಜಾದ್, ಸುಭಾಸಚಂದ್ರಬೋಸ್ ಆವರಂತಹವರನ್ನು ಮರೆ ಮಾಚಲು ಯತ್ನಿಸುತ್ತಿವೆ ಎಂದು ದೂರಿದರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ, ಜಿಲ್ಲಾ ಕಾರ್ಯದರ್ಶಿ ರಮೇಶ್‌ನಾಯ್ಕ, ಶಾಂತಲಾ, ಎಚ್.ಎಂ. ಹರೀಶ್, ಉಪನ್ಯಾಸಕಿಯರಾದ ಶ್ವೇತ, ಕಲ್ಯಾಣಿ ಇತರರು ಇದ್ದರು.