ಯಳಂದೂರು: ಭಾರತದ ಸಂವಿಧಾನವು ವಿಶ್ವಶ್ರೇಷ್ಠ ಲಿಖೀತ ಸಂವಿಧಾನವಾಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂವಿಧಾನದಲ್ಲಿರುವ ಉತ್ತಮ ಅಂಶಗಳೆಲ್ಲವೂ ನಮ್ಮ ಸಂವಿಧಾನದಲ್ಲಿ ಅಡಕವಾಗಿದೆ. ಇದರ ಪ್ರಕಾರ ನಡೆಯುವುದು ಇದಕ್ಕೆ ಗೌರವ ಕೊಡುವುದು ಭಾರತೀಯರೆಲ್ಲರ ಕರ್ತವ್ಯ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು, ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ವಾಕಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವೀಯ ಗುಣ ಬೆಳೆಸಿಕೊಳ್ಳಿ: ಸಂವಿಧಾನ ನೀಡಿರುವ ಕರ್ತವ್ಯಗಳ ಪಾಲನೆ ಮಾಡಿದರೆ ನಮಗಿರುವ ಹಕ್ಕುಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ದೇಶದ ಪ್ರತಿಯೊಬ್ಬ ಪ್ರಜೆಯೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ಯಾವುದೇ ಕೃತ್ಯವನ್ನು ಮಾಡಬಾರದು. ಇದರ ಆಶಯಗಳನ್ನು ಪ್ರಾಮಾಣಿಕವಾಗಿ ಪಾಲನೆ ಮಾಡಿದ್ದಲ್ಲಿ ದೇಶ ಸುಭೀಕ್ಷವಾಗುತ್ತ ದೆ ಎಂದರು.
ನಾಗರಿಕರಲ್ಲೂ ಕಾನೂನು ಜಾಗೃತಿ ಮೂಡಬೇಕು: ಶಾಸಕ ಎನ್.ಮಹೇಶ್ ಮಾತನಾಡಿ, ಸಂವಿಧಾನದ ಪೀಠಿಕೆ ನಮ್ಮ ಪ್ರಜಾಪ್ರಭುತ್ವದ ಇಡೀ ಚಿತ್ರಣವನ್ನು ಒಳಗೊಂಡಿದೆ. ಇಂಡಿಯಾದ ಸಂವಿಧಾನದ ಆಶಯ ಇದರಲ್ಲಿ ಅಡಕವಾಗಿದೆ. ಪ್ರತಿ ಶಾಲೆಗಳಲ್ಲೂ ಪೀಠಿಕೆ ಹೇಳಿಕೊಡುವ ಪರಿಪಾಠಕ್ಕೆ ರಾಜ್ಯ ಸರ್ಕಾರ ನಾಂದಿ ಹಾಡಿದೆ. ಇದೊಂದು ಉತ್ತಮ ಬೆಳವಣಿಗೆ. ಆದರೆ ಈ ಪೀಠಿಕೆ ಹೇಳಿಕೊಡುವುದು ಕೇವಲ ಶಾಸ್ತ್ರೋಕ್ತ ಕಾರ್ಯಕ್ರಮವಾಗಬಾರದು. ಶಿಕ್ಷಕರು ಪೀಠಿಕೆ ಅರ್ಥವನ್ನು ಹೇಳಿಕೊಡಬೇಕು. ಕಾನೂನು ಪರಿಪಾಲಿಸುವ ಪಾಠ ಕಲಿಯುವತ್ತ ಈಗಿನ ಪೀಳಿಗೆ ಹೆಚ್ಚು ಆಸಕ್ತವಾಗಿದೆ. ಮುಂದಿನ 20 ವರ್ಷಗಳಲ್ಲಿ ದೇಶದ ಪ್ರತಿ ನಾಗರಿಕರಲ್ಲೂ ಕಾನೂನು ಜಾಗೃತಿ ಮೂಡುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಕಾನೂನು ಪಾಲಿಸಿ: ದೇಶದ ಐಕ್ಯತೆ ಸಮಗ್ರತೆ ಉಳಿಯಬೇಕಾದರೆ ಭಾತೃತ್ವ ಭಾವನೆ ಇರಬೇಕು. ಸರ್ವರಿಗೂ ಆರ್ಥಿಕ, ರಾಜಕೀಯ, ನ್ಯಾಯ ಸಿಗಬೇಕು. ವಿಚಾರ ಅಭಿವ್ಯಕ್ತಿ, ನಂಬಿಕೆ, ಧರ್ಮಶ್ರದ್ಧೆ ಮತ್ತು ಉಪಾಸನೆ ಸ್ವಾತಂತ್ರ್ಯವಿದ್ದು ಇದರ ಪಾಲನೆ ಕಾನೂನು ಚೌಕಟ್ಟಿನಲ್ಲಿ ಆಗಬೇಕು. ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇಂದಿನಿಂದಲೇ ಇದನ್ನು ಪಾಲನೆ ಮಾಡುವ ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು.
ಸಂವಿಧಾನ ಜಾಗೃತಿ ಜಾಥಾ: ಪಟ್ಟಣದ ನಾಡಮೇಗಲಮ್ಮ ದೇಗುಲದ ಆವರಣದಲ್ಲಿ ಸಂವಿಧಾನ ಜಾಗೃತಿ ವಾಕಥಾನ್‌ಗೆ ಚಾಲನೆ ನೀಡಲಾಯಿತು. ತಾಲೂಕಿನ ವಿವಿಧ ಸಂಘಟನೆಗಳ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ರೈತಸಂಘ, ವಿವಿಧ ಮುಸ್ಲಿಂ ಸಂಘಟನೆಗಳು, ವರ್ತಕರ ಸಂಘ, ಗುತ್ತಿಗೆದಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಸಲಾಯಿತು.
ಸಿವಿಲ್ ನ್ಯಾಯಾಧೀಶ ಎನ್. ಶರತ್‌ಚಂದ್ರ, ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಮಹಾದೇವಸ್ವಾಮಿ, ಜಿಪಂ ಸದಸ್ಯ ಜೆ. ಯೋಗೇಶ್, ತಾಪಂ ಅಧ್ಯಕ್ಷ ನಿರಂಜನ್, ಸದಸ್ಯ ಸಿದ್ದರಾಜು, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹಾದೇವನಾಯಕ, ಕೆ.ಮಲ್ಲಯ್ಯ, ವಿವಿಧ ಸಂಘಟನೆಗಳ ಸದಸ್ಯರು, ವಕೀಲರ ಸಂಘದ ಪದಾಧಿಕಾರಿಗಳು, ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಇದ್ದರು.