ಸುರಪುರ: ಜಾತ್ಯತೀತ, ಐಕ್ಯತೆ ಒಳಗೊಂಡಿರುವ ಭಾರತದ ಸಂವಿಧಾನ ರಾಷ್ಟ್ರೀಯ ಸಮಗ್ರತೆ ಸಂಕೇತವಾಗಿದೆ. ಸಂವಿಧಾನದ ಆಶಯದಂತೆ ಹಕ್ಕುಗಳ ರಕ್ಷಣೆ ಮತ್ತು ಕರ್ತವ್ಯಗಳ ನಿರ್ವಹಣೆ ದೇಶದ ಪ್ರತಿಯೊಬ್ಬರ ಹೊಣೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 73ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಅನೇಕ ಮತ, ಧರ್ಮ, ಸಂಸ್ಕೃತಿಯ ನೆಲೆವೀಡಾಗಿದೆ. ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಡಾ| ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ತಿಳಿಸಿದರು.
ಉಪ ಖಜನಾಧಿಕಾರಿ ಡಾ| ಎಂ.ಎಸ್. ಶಿರವಾಳ ಮತ್ತು ಶ್ರೀಪ್ರಭು ಕಾಲೇಜಿನ ಉಪ ಪ್ರಾಚಾರ್ಯ ಪ್ರೊ| ವೇಣುಗೋಪಾಲನಾಯಕ ಜೇವರ್ಗಿ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಡಾ| ಓಂಪ್ರಕಾಶ ಅಂಬೂರೆ, ಪತ್ರಕರ್ತರಾದ ಅಶೋಕ ಸಾಲವಡಗಿ, ಗಿರೀಶ ಶಾಬಾದಿ, ರಾಚಪ್ಪ (ಕಂದಾಯ), ಶಿವಲೀಲಮ್ಮ (ಪೌರ ಕಾರ್ಮಿಕ), ಬಸಮ್ಮ(ಅಂಗನವಾಡಿ ಕಾರ್ಯಕರ್ತೆ), ಶಬೀರ್ ಅಲಿ (ಪೊಲೀಸ್ ಇಲಾಖೆ), ವೆಂಕಟೇಶ ನಾಯಕ ಬೈರಿಮರಡ್ಡಿ (ಸಾಮಾಜಿಕ ಕ್ಷೇತ್ರ), ವೀರಣ್ಣ ಕಲಕೇರಿ (ಸಾಹಿತ್ಯ, ಪತ್ರಿಕಾರಂಗ). ಸನ್ಮಾನಿಸಲಾಯಿತು. ಸುಜಾತಾ ಜೇವರ್ಗಿ, ಮಹೇಶ ಪಾಟೀಲ್, ಪ್ರಕಾಶ ಸಜ್ಜನ್, ದುರ್ಗಪ್ಪ ಗೋಗಿಕೇರಾ, ಅಮರೇಶ, ಸತ್ಯನಾರಾಯಣ ದರಬಾರಿ, ಪಿಎಸ್‌ಐ ಕೃಷ್ಣಾ ಸುಬೇದಾರ್ ಇದ್ದರು.