Advertisement

ಸಂವಿಧಾನ ಬುಡಮೇಲು ಮಾಡುವ ಹುನ್ನಾರ 

01:07 PM Nov 03, 2017 | Team Udayavani |

ಮೈಸೂರು: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.

Advertisement

ಮೈಸೂರು ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ಅಭಿವೃದ್ಧಿ ಆಡಳಿತ: ಒಂದು ವಿಶ್ಲೇಷಣೆ ವಿಷಯ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್‌.ಅಂಬೇಡ್ಕರ್‌ ಅವರು ನೀಡಿದ ಸಂವಿಧಾನವೇ ಅಂತಿಮ. ಇದರಡಿ ಕೆಲಸ ಮಾಡುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದ್ದು, ಈ ಬಗ್ಗೆ ದೇಶದ ಜನರ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದ ನಂತರ ಸಂವಿಧಾನ ಬದ್ಧವಾಗಿ ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿದೆ ಎಂದರು. ಮೈಸೂರು ವಿವಿಗೆ ರಾಷ್ಟ್ರಪತಿ ಹಾಗೂ ರಾಷ್ಟ್ರಕವಿಗಳನ್ನು ನೀಡಿದ ಗೌರವವಿದ್ದು, ಇದಲ್ಲದೆ ಅನೇಕ ಚಳವಳಿ, ಸಾಮಾಜಿಕ, ಸೈದ್ಧಾಂತಿಕ ಹೋರಾಟದ ಮೂಲಕ ಚಲನಶೀಲ ಸಮಾಜದ ಸ್ಥಾಪನೆಯಲ್ಲೂ ವಿವಿ ಪಾತ್ರ ಅಪಾರವಾಗಿದೆ ಎಂದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ಯಾವುದೇ ರಾಜಕೀಯ ಗುಂಪಿಗೆ ಸೇರದೆ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕಲಿಕೆಯ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಬೇಕು ಎಂದು ತಿಳಿಸಿದರು. ಮೈಸೂರು ವಿವಿ ರಾಣಿ ಬಹದ್ದೂರ್‌ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಪೊ›.ಡಿ.ಆನಂದ್‌, ಅಭಿವೃದ್ಧಿ ಎನ್ನುವುದು ನೈತಿಕತೆಯನ್ನು ಒಳಗೊಂಡಿರಬೇಕಿದ್ದು, ನೈತಿಕತೆ ಇಲ್ಲದ ಅಭಿವೃದ್ಧಿ ಅಭಿವೃದ್ಧಿಯಲ್ಲ.

Advertisement

ಆದರೆ ಪ್ರಸ್ತುತ ದಿನಗಳಲ್ಲಿ ಹಣಸಂಪಾದನೆ ಅಭಿವೃದ್ಧಿ ಎನ್ನುವಂತಾಗಿದ್ದು, ಅಭಿವೃದ್ಧಿ ಮತ್ತು ಪ್ರಗತಿಯನ್ನು ಒಂದಾಗಿಸಿ ಅಂಕಿ ಅಂಶಗಳ ಪಟ್ಟಿ ನೀಡಿ ಅದರ ಆಧಾರದ ಮೇಲೆ ಅಭಿವೃದ್ಧಿಯನ್ನು ನಿರ್ಧರಿಸಲಾಗುತ್ತಿದೆ. ಅಭಿವೃದ್ಧಿ ಮತ್ತು ಪ್ರಗತಿ ಬೇರೆ ಬೇರೆಯಾಗಿದ್ದು, ಅಭಿವೃದ್ಧಿ ಗುರಿಯಾದರೆ, ಪ್ರಗತಿ ಗುರಿಯ ನಂತರದ ಪರಿಣಾಮ ಹಾಗೂ ವಿಶ್ಲೇಷಣೆಯಾಗಿದೆ ಎಂದರು.

 ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ದಯಾನಂದ ಮಾನೆ, ಆಹಾರ ಇಲಾಖೆ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯರಾದ ಪೊ›.ಡಿ.ನಂಜುಂಡಯ್ಯ, ಲಯನ್‌ ಎಚ್‌.ರಮೇಶ್‌, ಮಹಮದ್‌ ಸಲಾಮ್‌, ಮೈಸೂರು ವಿವಿ ಆಡಳಿತಾಧಿಕಾರಿ ಡಿ.ಕೆ.ಶ್ರೀನಿವಾಸ್‌, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗ ನಿರ್ದೇಶಕ ಡಾ.ಎಂ.ಸುರೇಶ್‌ ಬೆಂಜಮಿನ್‌ ಮತ್ತಿತರರಿದ್ದರು.
 
ಮೈಸೂರು ವಿವಿ ರಾಜಕೀಯ ಮತ್ತು ಕೋಮುವಾದಕ್ಕೆ ಆಸ್ಪದ ನೀಡದಂತೆ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಂವಿಧಾನದ ರಕ್ಷಣೆ ಮಾಡಬೇಕಿದೆ.
-ಡಾ.ಎಚ್‌.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next