ಒಂದು ಊರಿನ ಬೆಳವಣಿಗೆಯಲ್ಲಿ ಅಲ್ಲಿರುವ ಶಾಲೆಗಳ ಹಾಗೂ ಕಾಲೇಜುಗಳ ಪಾತ್ರ ಹಿರಿದಾದದ್ದು. ಶಿಕ್ಷಣ ಸಂಸ್ಥೆಗಳು ಊರಿನ ಭವಿಷ್ಯವನ್ನು ಉಜ್ವಲಗೊಳಿಸಿ ಜನರಲ್ಲಿ ಅರಿವಿನ ಬಲವನ್ನು ತುಂಬಿ ಊರನ್ನು ಶ್ರೀಮಂತಗೊಳಿಸುತ್ತವೆ. ಇವೆಲ್ಲವನ್ನೂ ನಾವು ಉಡುಪಿ ಜಿಲ್ಲೆಯ ಮೊತ್ತ ಮೊದಲ ಕಾಲೇಜಾಗಿ ರೂಪುಗೊಂಡ ಎಂಜಿಎಂ ಕಾಲೇಜು ಅಥವಾ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಹುಟ್ಟು ಮತ್ತು ಬೆಳವಣಿಗೆಯ ಇತಿಹಾಸದಲ್ಲಿ ಕಾಣಬಹುದಾಗಿದೆ. ಉಡುಪಿಯ ಅತ್ಯಂತ ಹಳೇ ಕಾಲೇಜು ಆಧುನಿಕ ಶಿಕ್ಷಣ ನೀಡುವ ಜೊತೆಗೆ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದು ಈಗ ತನ್ನ ಅಮೃತ ಮಹೋತ್ಸವ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಆ ‘ಅಮೃತಪಥದ’ ಕಿರು ಅವಲೋಕನ ಇಲ್ಲಿದೆ.
ಯೋಜನೆಯ ಮೂಲ
ಅದು 1942ರ ಹೊತ್ತು. ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿದ್ದ ಕಾಲ. ಆಗ ಉಡುಪಿಯ ಜನಾನುರಾಗಿ ಡಾಕ್ಟರ್ ಹಾಗೂ ಜನಪರ ಬ್ಯಾಂಕರ್ ಆಗಿ ಪ್ರಸಿದ್ಧರಾಗಿದ್ದ ಡಾ. ಟಿ.ಎಂ.ಎ. ಪೈ ಅವರು ಶಿಕ್ಷಣ ಕ್ಷೇತ್ರದಲ್ಲಿ ಬಹಳ ರಚನಾತ್ಮಕವಾದ ಹಾಗೂ ಕ್ರಾಂತಿಕಾರಿ ಎನಿಸಿದ್ದ ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಮಣಿಪಾಲದಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಎಂಬ ವಿನೂತನವಾದ ಸಂಸ್ಥೆಯನ್ನು ಸ್ಥಾಪಿಸಿದರು. ಅದು ಆ ಕಾಲದಲ್ಲಿ ಮಹತ್ಮಾ ಗಾಂಧಿಯವರು ಪ್ರತಿಪಾದಿಸಿದ್ದ ರಚನಾತ್ಮಕ ಕಾರ್ಯಕ್ರಮಗಳಿಗೆ ಪೂರಕವಾದ ಯೋಜನೆಯಾಗಿದ್ದಿತು.
ಸಮಾಜವು ಎದುರಿಸುತ್ತಿದ್ದ ಬಡತನ, ಅನಾರೋಗ್ಯ, ಅನಕ್ಷರತೆ, ಅವಕಾಶಗಳ ಕೊರತೆ ಮತ್ತು ನಿರುದ್ಯೋಗವೇ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಆಗಬಲ್ಲ ರೀತಿಯ ಕೆಲಸಗಳನ್ನು ಮಾಡುತ್ತಾ ಡಾ. ಟಿ.ಎಂ.ಎ. ಪೈ ಅವರು ವಿದ್ಯಾದಾನ ಮತ್ತು ಕೌಶಲ್ಯಾಭಿವೃದ್ಧಿ ಕಡೆಗೆ ಗಮನ ಹರಿಸಿ ಆ ಕಾಲದಲ್ಲಿ ಎಸ್.ಎಸ್.ಎಲ್.ಸಿ ಫೇಲ್ ಆದವರಿಗೆ ಹಾಗೂ ಪಾಸ್ ಆದವರಿಗೆ ವಿವಿಧ ಕೌಶಲಗಳನ್ನು ಕಲಿಸುವುದನ್ನು ಆರಂಭಿಸಿ ಈಗಿನ ಸ್ಕಿಲ್ ಡೆವಲಪ್ಮೆಂಟ್ ಪರಿಕಲ್ಪನೆಗೆ ಮುನ್ನುಡಿಯನ್ನು ಬರೆದು ಯುವಜನತೆಗೆ ಉದ್ಯೋಗ ಹಾಗೂ ಸ್ವೋದ್ಯೋಗ ಕಲ್ಪಿಸಿದರು. ಅಕಾಡೆಮಿಯ ಮೂಲಕ ಹಲವು ಶಾಲೆಗಳು ಸ್ಥಾಪಿತವಾದವು ಮತ್ತು ಕೆಲವು ಹಳೆಯ ಶಾಲೆಗಳಿಗೆ ಕಾಯಕಲ್ಪ ದೊರೆಯಿತು. ಆ ಕಾಲದ ಉಡುಪಿಯಲ್ಲಿ ಮತ್ತು ಆಸುಪಾಸಿನಲ್ಲಿ ಬರೇ ಹತ್ತನೇ ಕ್ಲಾಸ್ ತನಕ ಓದುವ ಸೌಕರ್ಯಗಳು ಮಾತ್ರ ಇದ್ದವು. ಆಧುನಿಕ ಶಿಕ್ಷಣ ವ್ಯವಸ್ಥೆಯ ಉನ್ನತ ಶಿಕ್ಷಣ ಸಂಸ್ಥೆಗಳು ಇರಲಿಲ್ಲ.
ಆಗ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಮಂಗಳೂರಿನಲ್ಲಿದ್ದ ಮೂರು ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮುಂದುವರೆಸಬೇಕಾಗಿತ್ತು ಅಥವಾ ದೂರದ ನಗರಗಳಿಗೆ ಹೋಗಬೇಕಾಗಿತ್ತು. ಸಮರ್ಪಕವಾಗಿ ರಸ್ತೆಗಳು ಸಾರಿಗೆ ಸಂಪರ್ಕ, ಹಾಗೂ ಆರ್ಥಿಕ ಬಲ ಇರದಿದ್ದ ಆ ಕಾಲದ ಬಹುತೇಕ ವಿದ್ಯಾರ್ಥಿಗಳ ಶಿಕ್ಷಣ ಹತ್ತನೇ ಕ್ಲಾಸಿಗೇ ಮೊಟಕಾಗುತ್ತಿತ್ತು. ಇದನ್ನೆಲ್ಲ ಸೂಕ್ಷ¾ವಾಗಿ ಗಮನಿಸುತ್ತಿದ್ದ ಡಾ.ಪೈ ಅವರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮೂಲಕ ಉಡುಪಿಯಲ್ಲಿ ಒಂದು ಕಾಲೇಜನ್ನು ಸ್ಥಾಪಿಸುವ ಕನಸನ್ನು ನನಸು ಮಾಡಲು ಕಾರ್ಯತತ್ಪರರಾದರು.
ಆಗಿನ ಕಾಲದಲ್ಲಿ ಈ ಕೆಲಸ ಅಷ್ಟು ಸುಲಭದ ಮಾತಾಗಿರಲಿಲ್ಲ. ಆಗ ಉಡುಪಿಗೆ ಕಾಲೇಜಿನ ಅಗತ್ಯ ಏಕಿದೆ ಎಂಬ ಬಗ್ಗೆ ಜನರಿಗೆ ಮನದಟ್ಟು ಮಾಡುತ್ತಾ, ಕಾಲೇಜ್ ಸ್ಥಾಪನೆಯಾಗುವುದಾದರೆ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ ಎಂದು ಸಮೀಕ್ಷೆಯನ್ನು ಮಾಡಿ ಆ ಕುರಿತಾದ ಕೆಲಸ ಆರಂಭಿಸಿದರು. 1942-43 ರಿಂದ ಆರಂಭಿಸಿ 1948-49 ತನಕವೂ ಅವರ ಉಡುಪಿ ಕಾಲೇಜು ಯೋಜನೆ ಬಹಳ ಏಳುಬೀಳುಗಳನ್ನು ಕಾಣುವಂತಾಯಿತು.
ಆಗಿನ ಕಾಲದಲ್ಲಿ ಉಡುಪಿ ಮದ್ರಾಸ್ ಪ್ರಾಂತ್ಯದ ಒಂದು ಚಿಕ್ಕ ತಾಲ್ಲೂಕಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಮದ್ರಾಸ್ ವಿಶ್ವವಿದ್ಯಾಲಯದ ಸಂಲಗ್ನತೆಯನ್ನು ಪಡೆಯಲು ದೊಡ್ಡ ಮೊತ್ತದ ಹಣಕಾಸನ್ನು ಹೊಂದಿಸಲು ಬಹಳ ಕಷ್ಟಗಳನ್ನು ಎದುರಿಸಿದರು. ಸೋತಂತಾದರೂ ನಿರಾಶರಾಗದೆ ಮತ್ತೆ ಪ್ರಯತ್ನವನ್ನು ಮಾಡುತ್ತಲೇ ಅವರು ತಮ್ಮ ಸ್ವಂತ ಆಸ್ತಿ ಹಾಗೂ ಒಡವೆಗಳನ್ನು ಅಡವಿಟ್ಟು ಹಣವನ್ನು ಹೊಂದಿಸುತ್ತಿದ್ದಂತೆ ಊರ ಮಹಾಜನತೆಯಿಂದಲೂ ಪೂರಕವಾದ ಬೆಂಬಲ ಮತ್ತು ಸಹಕಾರ ಲಭಿಸಲು ಆರಂಭವಾಯಿತು. ಡಾ. ಪೈ ಅವರು ಉಡುಪಿ ಶ್ರೀ ಕೃಷ್ಣನಲ್ಲಿ ಅಚಲ ಭಕ್ತಿ ಹಾಗೂ ನಂಬಿಕೆ ಇರಿಸಿ ಕೆಲಸ ಮುಂದುವರಿಸಿದರು.ದೇಶವು ಸ್ವಾತಂತ್ರÂ ಪಡೆದಾಗ ಡಾ.ಪೈಯವರ ಉತ್ಸಾಹ ಇಮ್ಮಡಿಯಾಯಿತು. 1948ರಲ್ಲಿ ಗಾಂಧೀಜಿ ಹುತಾತ್ಮರಾದ ಸಂದರ್ಭದಲ್ಲಿ ಅವರು ಕಾಲೇಜಿಗೆ ಮಹಾತ್ಮಾ ಗಾಂಧಿಯವರ ಹೆಸರನ್ನು ಇಡುವುದಾಗಿ ಸಂಕಲ್ಪಿಸಿದರು.
ಎಂಜಿಎಂ ಕಾಲೇಜಿನ ಸ್ಥಾಪನೆ
ಆ ಪ್ರಕಾರವಾಗಿ ಉಡುಪಿಯ ಮೊದಲ ಕಾಲೇಜ್ ಆಗಿ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಸ್ಥಾಪನೆಯಾಯಿತು. 27-06-1949ರಂದು ಕಾಲೇಜಿನ ಉದ್ಘಾಟನೆಯನ್ನು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪ್ರಸಿದ್ಧ ವೈದ್ಯರಾದ ಡಾ. ಎ. ವಿ. ಬಾಳಿಗಾ ಅವರು ನೆರವೇರಿಸಿದರು. ಆರಂಭದಲ್ಲಿ ಉಡುಪಿಯ ಮುನ್ಸಿಪಲ್ ಮೈನ್ ಶಾಲೆಯಲ್ಲಿ ಖಾಲಿ ಇದ್ದ ಕೆಲವು ಕೊಠಡಿಗಳಲ್ಲಿ ಕಾಲೇಜಿನ ತರಗತಿಗಳು ಆರಂಭವಾದವು. ಆಗ ಮದ್ರಾಸ್ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಇಂಟರ್ಮೀಡಿಯೇಟ್ ಆರ್ಟ್ ತರಗತಿಗಳು ಆರಂಭವಾದವು.
ಪ್ರಸಿದ್ಧ ಶಿಕ್ಷಣ ತಜ್ಞರಾಗಿದ್ದ ಪ್ರೋ. ಹೆಚ್. ಸುಂದರ ರಾವ್ ಅವರು ಕಾಲೇಜಿನ ಮೊದಲ ಪ್ರಾಂಶುಪಾಲರಾದರು. ಆರಂಭದ ಬ್ಯಾಚ್ನಲ್ಲಿ 79 ಹುಡುಗರು , 10 ಹುಡುಗಿಯರು ಒಳಗೊಂಡಂತೆ 89 ವಿದ್ಯಾರ್ಥಿಗಳಿದ್ದರು. 10 ಬೋಧಕರು ಮತ್ತು 7 ಬೋಧಕೇತರರು ಇದ್ದರು. ಡಾ. ಟಿ.ಎಂ.ಎ ಪೈ ಅವರು ಪುರುಷರು ಹಾಗೂ ಮಹಿಳೆಯರಿಗೆ ಸಮಾನವಾದ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಲೇಜನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೋ-ಎಜುಕೇಶನ್ ಅಥವಾ ಸಹಶಿಕ್ಷಣವನ್ನು ಸ್ಥಾಪನೆಯಾದ ದಿನದಿಂದಲೂ ಒದಗಿಸಿದರು. ಬಾಲಕ ಬಾಲಕಿಯರಿಗೆ ಒಂದೇ ಕಡೆಯಲ್ಲಿ ಸಮಾನ ಅವಕಾಶಗಳನ್ನು ಆರಂಭದಿಂದಲೇ ನೀಡಿದ ಪ್ರಪ್ರಥಮ ಕಾಲೇಜು ಎಂಬ ಪ್ರಸಿದ್ಧಿಗೂ ಇದು ಪಾತ್ರವಾಗಿ ದೇಶದ ಗಮನವನ್ನು ಸೆಳೆಯಿತು. ಉತ್ತಮ ಗುರುವೃಂದ ದೊರೆಯಿತು. ಅದರಲ್ಲಿ ಇಬ್ಬರು ಪೊ›ಫೆಸರ್ಗಳು ಮಹಿಳೆಯರು ಎಂಬುದು ಗಮನಾರ್ಹ. ಆರಂಭದÇÉೇ ಉತ್ತಮ ಗ್ರಂಥಾಲಯ ರೂಪಿಸಿದರು.
25-10-1949 ರಂದು ಕುಂಜಿಬೆಟ್ಟುವಿನಲ್ಲಿರುವ ಈಗಿನ ಸ್ವಂತ ಕ್ಯಾಂಪಸ್ಗೆ ಶಿಲಾನ್ಯಾಸವನ್ನು ಅಂದಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಾ ನೆರವೇರಿಸಿದರು. ಹೊಸಾ ಕಟ್ಟಡ ನಿರ್ಮಾಣಕ್ಕೆ ಡಾ. ಟಿ.ಎಂ.ಎ ಪೈ ಅವರು ಸ್ವತಃ ಉಡುಪಿಯ ಜನರೊಂದಿಗೆ ಶ್ರಮದಾನ ಮಾಡಿದರು. ಹೊಸ ಕ್ಯಾಂಪಸ್ನ ಉದ್ಘಾಟನೆಯನ್ನು ಅಷ್ಟ ಮಠಗಳ ಸ್ವಾಮಿಗಳು ನೆರವೇರಿಸಿದರು. ಡಾ. ಟಿ.ಎಂ.ಎ ಪೈ ಅವರು ಸ್ಥಾಪಿಸಿದ ಎಂಜಿಎಂ ಕಾಲೇಜು ಅವರ ಮಣಿಪಾಲ ಉನ್ನತ ಶಿಕ್ಷಣ ಸಮುಚ್ಚಯದ ಕನಸಿಗೆ ಮೊದಲ ಬುನಾದಿಯಾಯಿತು. ಆದುದರಿಂದಲೇ ಡಾ. ಟಿ.ಎಂ.ಎ ಪೈ ಅವರು ಉಡುಪಿಗೆ ಆಧುನಿಕ ಉನ್ನತ ಶಿಕ್ಷಣದ ಜ್ಞಾನ ಗಂಗೆಯನ್ನು ತಂದ ಭಗೀರಥ ಎಂದು ಪೇಜಾವರ ಮಠದ ಅಂದಿನ ಸ್ವಾಮಿಗಳಾಗಿದ್ದ ಪರಮಪೂಜ್ಯ ವಿಶ್ವೇಶತೀರ್ಥರು ಹೇಳುತ್ತಿದ್ದ ಮಾತುಗಳು ನೆನಪಾಗುತ್ತದೆ. ಉಡುಪಿಯ ಮಹಾಜನತೆ ಈ ಕಾಲೇಜನ್ನು ಭಾಗ್ಯದ ಬಾಗಿಲು ಎಂದು ಹೆಮ್ಮೆಯಿಂದ ಕೊಂಡಾಡಿದರು.
ಬಾಲಕಿಯರಿಗೂ ಉನ್ನತ ಶಿಕ್ಷಣ
ಆ ಕಾಲದಲ್ಲಿ ಬಾಲಕೀಯರಿಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶ ಸುಲಭವಾಗಿರಲಿಲ್ಲ. ಅದರಲ್ಲಿಯೂ ಕಾಲೇಜು ಬಾಲಕೀಯರ ಸಹ ಶಿಕ್ಷಣಕ್ಕೆ ಅವಕಾಶವನ್ನು ನೀಡಿದಾಗ ಮದ್ರಾಸ್ ವಿಶ್ವವಿದ್ಯಾನಿಲಯ ಬಾಲಕೀಯರ ಪ್ರವೇಶಾತಿಗೆ ಅವಕಾಶವನ್ನು ನಿರಾಕರಿಸಿಸಲು ಯತ್ನಿಸಿತ್ತು. ಆಗ ಡಾ.ಪೈಯವರ ಪ್ರೇರಣೆಯಿಂದ ಶಾಂತಾ ಎಂಬ ಓರ್ವ ಬಾಲಕಿ ಮದ್ರಾಸ್ ಉಚ್ಚನ್ಯಾಯಾಲಯದಲ್ಲಿ ಆ ಕುರಿತು ಹೋರಾಟ ನಡೆಸಿದರು. ಆಗ ಕಾಂಗ್ರೆಸ್ಸಿನ ಪ್ರಭಾವಿ ಯುವ ನಾಯಕಿ ಇಂದಿರಾ ಗಾಂಧಿಯವರಿಗೂ ಪತ್ರ ಬರೆದು ಮದ್ರಾಸ್ ರಾಜ್ಯಪಾಲರಿಗೂ ಮನವಿಯನ್ನು ಸಲ್ಲಿಸಿ ಮತ್ತೆ ಅವಕಾಶವನ್ನು ಪಡೆದುಕೊಂಡರು. ಕಾಲೇಜಿನ ಮೊದಲ ಬ್ಯಾಚ್ನ ವಿದ್ಯಾರ್ಥಿನಿ ಟಿ. ನಿರ್ಮಲಾ ಪೈ ಮದ್ರಾಸ್ ವಿಶ್ವವಿದ್ಯಾಲಯದ ಚಿನ್ನದ ಪದಕದೊಂದಿಗೆ ರ್ಯಾಂಕ್ ಗಳಿಸಿದ್ದು ಈಗ ಇತಿಹಾಸ.
ವಿಸ್ತರಣೆ
ಕಾಲೇಜು ಬಹು ಬೇಗನೆ ಬಿ.ಎ ತರಗತಿಯನ್ನು ಪ್ರಾರಂಭಿಸಿತು. ಕೆಲವೇ ವರ್ಷಗಳಲ್ಲಿ ಬಿ. ಕಾಂ, ಬಿ. ಎಸ್ಸಿ ತರಗತಿಗಳು ಆರಂಭವಾಗಿ ಕಾಲೇಜು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಸುಸಜ್ಜಿತ ಪ್ರಯೋಗಾಲಯಗಳು ಹಾಗೂ ವಿದ್ಯಾರ್ಥಿನಿಲಯಗಳ ವಿಸ್ತರಣೆ ನಡೆದವು. ಪಾಠೇತರ ಚಟುವಟಿಕೆಗಳನ್ನು ಪೋ›ತ್ಸಾಹಿಸಿ ಕ್ರೀಡೆಗಾಗಿ ಕಾಲೇಜು ಬಹು ವಿಸ್ತಾರವಾದ ಎ. ಎಲ್.ಎನ್. ರಾವ್ ಮೈದಾನವನ್ನು ಹೊಂದಿತು.
ಮುದ್ದಣ ಮಂಟಪ ಹಾಗೂ ರವೀಂದ್ರ ಮಂಟಪಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತಮ ಪೊ›ತ್ಸಾಹ ದೊರಕಿತು. ಸಂಗೀತ, ರಂಗ ತರಬೇತಿ, ಯಕ್ಷಗಾನ ತರಬೇತಿ, ಸಾಹಿತ್ಯ ಚಟುವಟಿಕೆಗಳು, ಸಂಶೋಧನೆಗಳಿಗೆ ಅವಕಾಶವನ್ನು ಕಲ್ಪಿಸಲಾಯಿತು. ಎರಡನೇ ಪ್ರಾಂಶುಪಾಲರಾದ ಪೊ› ಕು.ಶಿ ಹರಿದಾಸ ಭಟ್ಟರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಪ್ರಾದೇಶಿಕ ಜಾನಪದ ರಂಗ ಕಲೆಗಳ ಕೇಂದ್ರ, ತುಳು ನಿಘಂಟು ಯೋಜನಾ ವಿಭಾಗ ಮುಂತಾದವುಗಳನ್ನು ಸ್ಥಾಪಿಸಿದರು.
ಆಧುನಿಕ ಅಗತ್ಯತೆಗಳಿಗೆ ತಕ್ಕಂತೆ ಕೋರ್ಸ್ಗಳನ್ನು ಆರಂಭಿಸುತ್ತಾ ಮುಂದೆ ಗಣಕ ವಿಜ್ಞಾನವನ್ನೂ ಅಳವಡಿಸಿಕೊಳ್ಳಲಾಯಿತು. ಕಾಲೇಜು ಆರಂಭದಿಂದ 1956 ತನಕ ಮದ್ರಾಸ್ ವಿ.ವಿ.ಯ ವ್ಯಾಪ್ತಿಯಲ್ಲಿ, 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ, 1958 ರಿಂದ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿ 1980ರಿಂದ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದೆ. ಇದಲ್ಲದೆ ಶೈಕ್ಷಣಿಕ-ಸಂಶೋಧನೆಗಳ ಕೊಡುಕೊಳ್ಳುವಿಕೆಯಲ್ಲಿ ಸಹೋದರ ಸಂಸ್ಥೆಯಾದ ಮಾಹೆ ಮಣಿಪಾಲ ಪರಿಗಣಿತ ವಿವಿಯ ಸಹಕಾರವನ್ನು ಹೊಂದಿದೆ.
ಗುಣಮಟ್ಟದ ಶಿಕ್ಷಣ -ಉತ್ತಮ ಪ್ಲೇಸ್ ಮೆಂಟ್
ಪ್ರಸ್ತುತ ಎಂಜಿಎಂ ಕಾಲೇಜು ನ್ಯಾಕ್ನಿಂದ ಎ ಪ್ಲಸ್ ಶ್ರೇಣಿಯನ್ನು ಹೊಂದಿದೆ ಹಾಗೂ ಯುಜಿಸಿಯಿಂದ ಸ್ವಾಯತ್ತ ಸ್ಥಾನಮಾನವನ್ನು ಪಡೆದು ಸ್ವಾಯತ್ತ ಕಾಲೇಜು ಆಗುವ ಪ್ರಕ್ರಿಯೆಯಲ್ಲಿದೆ.ಎಂಜಿಎಂ ಕಾಲೇಜು ಸಮೂಹವು ಎಲ್ಲರಿಗೂ ಕೈಗೆಟುಕುವಂತೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಒದಗಿಸುವ ಬದ್ಧತೆಯೊಂದಿಗೆ ಎಂಜಿಎಂ ಪದವಿ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಕೋರ್ಸ್ಗಳನ್ನು ನೀಡುತ್ತಿದೆ. ಉತ್ತಮ ಪ್ಲೇಸ್ ಮೆಂಟ್ ಅವಕಾಶವಿದೆ. ಪದವಿಪೂರ್ವ ಕಾಲೇಜು ಸೈನ್ಸ್, ಕಾಮರ್ಸ್, ಆರ್ಟ್ಸ್ ಕೋರ್ಸ್ಗಳನ್ನು ನೀಡುತ್ತಿದೆ. ಎಂಜಿಎಂ ಸಂಧ್ಯಾ ಕಾಲೇಜು ಬಿಸಿಎ, ಬಿಕಾಂ, ಬಿಬಿಎ ಕೋರ್ಸ್ಗಳನ್ನು ನೀಡುತ್ತಿದೆ. ಈಗ ಕ್ಯಾಂಪಸ್ನಲ್ಲಿ ಮೂರುವರೆ ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಅಮೃತ ಮಹೋತ್ಸವದ ಕೊಡುಗೆ
ಅಮೃತ ಮಹೋತ್ಸವ ಸಂದರ್ಭದಲ್ಲಿ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶ್ರೀ ಸತೀಶ್ ಯು. ಪೈ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸಂಸ್ಥೆಗಳ ನಿಕಟಪೂರ್ವ ಅಧ್ಯಕ್ಷರೂ, ಕಾಲೇಜಿನ ಮೊದಲ ಬ್ಯಾಚ್ನ ವಿದ್ಯಾರ್ಥಿಯೂ ಆಗಿದ್ದ ದಿವಂಗತ ಶ್ರೀ ಟಿ. ಮೋಹನದಾಸ ಪೈ ಅವರ ಸ್ಮರಣಾರ್ಥ ‘ಅಮೃತ ಮಹೋತ್ಸವ ಸೌಧ’ ಎಂಬ ಸುಸಜ್ಜಿತವಾದ ತರಗತಿಗಳ ಸಮುಚ್ಚಯದ ನಿರ್ಮಾಣವಾಗಿದೆ. ಈ ಕಟ್ಟಡದಲ್ಲಿಯೇ ‘ಟಿ. ಮೋಹನದಾಸ ಪೈ ಸ್ಕಿಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್’ ಕೂಡಾ ಆರಂಭವಾಗಲಿದೆ.
ಈ ಅಮೃತ ಮಹೋತ್ಸವ ಸಮುಚ್ಚಯದ ಉದ್ಘಾಟನೆಯು ಅಮೃತ ಮಹೋತ್ಸವ ವರ್ಷದ ಕೊಡುಗೆಯಾಗಿ ಇದೇ ನವೆಂಬರ್ 29ರಂದು ನೆರವೇರಲಿದೆ.ಅಮೃತ ಮಹೋತ್ಸವದ ಪ್ರಯುಕ್ತ ಕಳೆದ ಒಂದು ವರ್ಷದಲ್ಲಿ 75 ಪ್ರಮುಖವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಮೃತ ಮಹೋತ್ಸವ ವರ್ಷದ ಸಮಾರೋಪ ಸಮಾರಂಭವು ಡಿಸೆಂಬರ್ ಒಂದರಂದು ಸಂಪನ್ನಗೊಳ್ಳಲಿದೆ.
– ಪ್ರೋ. ಲಕ್ಷ್ಮೀ ನಾರಾಯಣ ಕಾರಂತ ,ಪ್ರಾಂಶುಪಾಲರು, ಎಂಜಿಎಂ ಕಾಲೇಜು, ಉಡುಪಿ
ಟಿ.ಮೋಹನದಾಸ್ ಪೈ ಸ್ಮಾರಕ ಅಮೃತ ಸೌಧದ ವೈಶಿಷ್ಟ್ಯಗಳು
ಎಂಜಿಎಂ ಕಾಲೇಜ್ ಕ್ಯಾಂಪಸ್ನಲ್ಲಿ ನಿರ್ಮಿಸಲಾದ ಟಿ.ಮೋಹನದಾಸ್ ಪೈ ಸ್ಮಾರಕ ಅಮೃತ ಸೌಧ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಇದು ಕೌಶಲಾಭಿವೃದ್ಧಿ ಕೇಂದ್ರವೂ ಆಗಿದೆ.
ಅಮೃತಸೌಧದ ಒಟ್ಟು ವಿಸ್ತೀರ್ಣ 33,152 ಚದರ ಅಡಿ. ನೆಲ ಅಂತಸ್ತಲ್ಲದೆ ಮೂರು ಮಹಡಿಗಳು ಮತ್ತು ಟೆರೇಸ್ನ್ನು ಹೊಂದಿದೆ. ಸಭಾಂಗಣ, ಕಂಪ್ಯೂಟರ್ ಪ್ರಯೋಗಾಲಯ, ಅಧ್ಯಕ್ಷರ ಕೊಠಡಿ, ನಿರ್ದೇಶಕರು, ಪ್ರಾಂಶುಪಾಲರ ಕಚೇರಿ, ಸಮ್ಮೇಳನ ಕೊಠಡಿ ಹೀಗೆ ವಿವಿಧ ಪ್ರಮುಖ ಕಡೆಗಳಲ್ಲಿ ಹವಾನಿಯಂತ್ರಿತ ಸೌಲಭ್ಯಗಳಿವೆ.
ನೆಲ ಅಂತಸ್ತು
ಸೌಧದ ನೆಲ ಅಂತಸ್ತು ಪ್ರವೇಶಾಂಗಣ, ಕಾಲೇಜು ಅಧ್ಯಕ್ಷರು, ಪ್ರಾಂಶುಪಾಲರು ಮತ್ತು ಕಾಲೇಜಿನ ಕಚೇರಿಯನ್ನು ಹೊಂದಿದೆ. 100 ಆಸನಗಳನ್ನು ಹೊಂದಿದ ಎರಡು ತರಗತಿ ರೂಮುಗಳಿವೆ. ತರಗತಿ ರೂಮುಗಳ ಸಂಪರ್ಕದ 46 ಆಸನ ಸಾಮರ್ಥ್ಯದ ಸಭಾಂಗಣ/ ಬೋರ್ಡ್ರೂಮ್ ಇದೆ. ಕ್ಯಾಬಿನ್, ಸ್ಟೆಯರ್ಕೇಸ್, ಲಿಫ್ಟ್ ಇದೆ.
ಮೊದಲ ಮಹಡಿ
ಮೊದಲ ಮಹಡಿಯಲ್ಲಿ 60 ಆಸನ ಸಾಮರ್ಥ್ಯದ ನಾಲ್ಕು ತರಗತಿ ರೂಮುಗಳು, 40 ಆಸನ ಸಾಮರ್ಥ್ಯದ ಕಂಪ್ಯೂಟರ್ ಪ್ರಯೋಗಾಲಯಗಳು ಇವೆ.
ಎರಡನೆಯ ಮಹಡಿ
ಎರಡನೆಯ ಮಹಡಿಯಲ್ಲಿ 60 ಆಸನ ಸಾಮರ್ಥ್ಯದ ಎರಡು ಕ್ಲಾಸ್ ರೂಮುಗಳು, ತಲಾ 40 ಆಸನ ಸಾಮರ್ಥ್ಯದ ಎರಡು ಕಂಪ್ಯೂಟರ್ ಪ್ರಯೋಗಾಲಯಗಳು, ನಿರ್ದೇಶಕರ ಕ್ಯಾಬಿನ್, 12 ಆಸನ ಸಾಮರ್ಥ್ಯದ ಸಿಬಂದಿ ರೂಮುಗಳಿವೆ.
ಮೂರನೆಯ ಮಹಡಿ
ಮೂರನೆಯ ಮಹಡಿಯು ಯೋಗ ಕೇಂದ್ರ ಮತ್ತು ಪ್ರಾಜೆಕ್ಟ್ ರೂಮ್, ತಲಾ 60 ಆಸನ ಸಾಮರ್ಥ್ಯದ ಎರಡು ಕ್ಲಾಸ್ರೂಮ್, ಪೂರ್ಣ ಹವಾನಿಯಂತ್ರಣ ವ್ಯವಸ್ಥೆಯಡಿ 200 ಆಸನ ಸಾಮರ್ಥ್ಯದ, ಡಬಲ್ ಹೈಟ್ನ ಆಡಿಟೋರಿಯಂ ಇದೆ.
ಇತರ ಸೇವೆಗಳು
ತ್ಯಾಜ್ಯ ಶುದ್ಧೀಕರಣ ಘಟಕ (100 ಕೆಎಲ್ಡಿ), ಡೀಸೆಲ್ ಜನರೇಟರ್ (165 ಕೆವಿಎ), 15 ಜನರನ್ನು ಕರೆದೊಯ್ಯುವ ಲಿಫ್ಟ್, ಅಗ್ನಿಶಾಮಕ ವ್ಯವಸ್ಥೆಗಳಿವೆ. ನೆಲ ಅಂತಸ್ತು ಸೇರಿದಂತೆ ಎಲ್ಲ ಮಹಡಿಗಳಲ್ಲಿಯೂ ಶೌಚಾಲಯ ವ್ಯವಸ್ಥೆ ಇದೆ.
ಅಮೃತೋತ್ಸವ ವಸ್ತು ಪ್ರದರ್ಶನ
ಅಮೃತೋತ್ಸವದ ಅಂಗವಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಇತರ ಜ್ಞಾನಶಾಖೆಗಳ ಇತ್ತೀಚಿನ ಸಂಶೋಧನೆ, ಸುಧಾರಣೆಗಳನ್ನು ಪರಿಚಯಿಸುವ ಮಾದರಿ ಮತ್ತು ಪ್ರಾಜೆಕ್ಟ್ಗಳ ಪ್ರದರ್ಶನ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜ್ಞಾನವೃದ್ಧಿಗೆ ಇದು ಪೂರಕವಾಗಲಿದ್ದು ಮುಂದಿನ ಅಧ್ಯಯನ, ಕ್ರಿಯಾಶೀಲತೆ, ವಿಚಕ್ಷಣ ಚಿಂತನೆಗೆ ಹಾದಿ ಮಾಡಿಕೊಡಲಿದೆ.
ಪ್ರದರ್ಶನದ ಉದ್ಘಾಟನೆಯನ್ನು ನ. 29ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ನೆರವೇರಿಸುವರು. ಡಿ. 1ರವರೆಗೆ ಪ್ರದರ್ಶನವನ್ನು ಎಂಜಿಎಂ ಕಾಲೇಜಿನ ಕ್ಯಾಂಪಸ್ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ.
ವಿಶೇಷತೆಗಳು
ಫ್ಲೈಟ್ ಆಫ್ ದಿ ಫ್ಯೂಚರ್: ಬೆಂಗಳೂರಿನ ನೇಶನಲ್ ಏರೋಸ್ಪೇಸ್ ಲಿ.ನಿಂದ ಡ್ರೋನ್ ಡೆಮಾನ್ಸ್ಟ್ರೇಶನ್.
ಅನಾಟಮಿ: ಮಣಿಪಾಲದ ಮೂಲ ವೈದ್ಯಕೀಯ ವಿಜ್ಞಾನ ವಿಭಾಗದಿಂದ ಮಾನವ ಶರೀರದ ಸೂಕ್ಷ್ಮತೆಗಳ ದರ್ಶನ.
ಕ್ಯೂರಿಯಾಸಿಟಿ ಕಾರ್ನರ್: ವಿಜ್ಞಾನದ ಅಚ್ಚರಿಯ ದರ್ಶನ.
ಪಾತ್ವೇ ಟು ಸ್ಮಾರ್ಟರ್ ಜನರೇಶನ್: ಪ್ರೋಗ್ರಾಮಿಂಗ್ ದಿ ರಿಯಾಲಿಟಿ.
ಸೋಲಾರ್ ಸರ್ಜ್: ನವೀಕರಿಸಬಹುದಾದ ಶಕ್ತಿಮೂಲಗಳ ಕ್ರಾಂತಿ.
ಸ್ಟಾಟ್ ಕಾಮ್: ವೇರ್ ನಂಬರ್ ಮೀಟ್ ಅಪೊರ್ಚುನಿಟಿ
ಹ್ಯುಮ್ಯಾನಿಟಾಸ್: ವೇರ್ ಐಡಿಯಾಸ್ ಟೇಕ್ ಸೆಂಟರ್ ಸ್ಟೇಜ್
ಲಿಂಗ್ವಾ ಫ್ಯೂಶನ್: ಸಾಹಿತ್ಯ ಮತ್ತು ಸಂಸ್ಕೃತಿ ಪ್ರದರ್ಶನ
ಆರ್ಟಿಸ್ಟ್ ಹಬ್: ಬೌಂಡ್ಲೆಸ್ ಕ್ರಿಯೇಟಿವಿಟಿ
ತುಳುನಾಡು ಪರಂಪರೆ: ಫ್ರಾಮ್ ಶೋರ್ ಟು ಸಕ್ಸಸ್
ಕಮ್ಯೂಸಿಯಂ: ಭೂತಕಾಲದ ಪ್ರತಿಧ್ವನಿ ಮತ್ತು ಭವಿಷ್ಯತ್ ಕಾಲದ ಧ್ವನಿ.
29.11.2024 :- ಬೆಳಗ್ಗೆ 10 ರಿಂದ ಸಂಜೆ 4 ಗಂಟೆ
30.11.2024 :- 12 ರಿಂದ ಸಂಜೆ 4 ಗಂಟೆ
01.12.2024 :- 9.30 ರಿಂದ ಸಂಜೆ 4 ಗಂಟೆ
ಹೆಚ್ಚಿನ ಮಾಹಿತಿಗೆ ಪ್ರೊ| ಶೈಲಜಾ ಎಚ್. – 9880779820, ಸ್ವಾತಿ- 9731754578, ಮಮತಾ- 8088701355, ಜಯಂತಿ ಆರ್. ಪ್ರಭು- 7353254091, ಲತಾ ನಾಯಕ್- 9741967477 ಸಂಪರ್ಕಿಸಬಹುದು.
29-11-2024 ಶುಕ್ರವಾರ
ಬೆಳಿಗ್ಗೆ ಗಂ. 9.00:
ಶ್ರೀ ಟಿ. ಮೋಹನದಾಸ ಪೈ ಮೆಮೋರಿಯಲ್ “ಅಮೃತ ಸೌಧ‘ ಉದ್ಘಾಟನೆ
ಶ್ರೀ ಟಿ. ಸತೀಶ್ ಯು. ಪೈ, ಅಧ್ಯಕ್ಷರು, ಎಂ.ಜಿ.ಎಂ. ಕಾಲೇಜು ಟ್ರಸ್ಟ್
ದಿವ್ಯ ಉಪಸ್ಥಿತಿ: ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠ
ಗಂ. 9.30 :
ವಸ್ತು ಪ್ರದರ್ಶನ ಉದ್ಘಾಟನೆ
ಡಾ. ಕೆ. ವಿದ್ಯಾಕುಮಾರಿ, ಐಎಎಸ್
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು, ಉಡುಪಿ ಜಿಲ್ಲೆ
ಸಭಾ ಕಾರ್ಯಕ್ರಮ
ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನ : ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠ
ಮುಖ್ಯ ಅತಿಥಿಗಳು: ಶ್ರೀ ಯಶಪಾಲ್ ಸುವರ್ಣ, ಶಾಸಕರು, ಉಡುಪಿ
ಡಾ. ರಂಜನ್ ಆರ್. ಪೈ. ರಿಜಿಸ್ಟಾರ್, ಎಜಿಇ ಮಣಿಪಾಲ
ಶ್ರೀ ಅಶೋಕ ಪೈ, ಅಧ್ಯಕ್ಷರು, ಟಿ.ಎಂ.ಎ. ಪೈ ಫೌಂಡೇಶನ್
ಶ್ರೀಮತಿ ವಸಂತಿ ಆರ್. ಪೈ , ಟ್ರಸ್ಟೀ, ಎಂ.ಜಿ.ಎಂ. ಕಾಲೇಜು
ಡಾ. ಎಚ್.ಎಸ್. ಬಲ್ಲಾಳ್, ಸಹಕುಲಾಧಿಪತಿಗಳು, ಮಾಹೆ ಮಣಿಪಾಲ, ಅಧ್ಯಕ್ಷರು, ಎಜಿಇ ಮಣಿಪಾಲ
ಲೇ.ಜ. (ಡಾ.) ಎಂ.ಡಿ. ವೆಂಕಟೇಶ್, ಉಪಕುಲಪತಿಗಳು, ಮಾಹೆ ಮಣಿಪಾಲ
ಡಾ. ನಾರಾಯಣ ಸಭಾಹಿತ್, ಸಹ ಉಪಕುಲಪತಿಗಳು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
ಅದ್ಯಕ್ಷತೆ : ಶ್ರೀ ಟಿ. ಸತೀಶ್ ಯು ಪೈ, ಅಧ್ಯಕ್ಷರು, ಎಂ.ಜಿ.ಎಂ. ಕಾಲೇಜು ಟ್ರಸ್ಟ್
ಉಪಸ್ಥಿತಿ : ಸಿ.ಎ. ಬಿ.ಪಿ. ವರದರಾಯ ಪೈ, ಕಾರ್ಯದರ್ಶಿ, ಎಜಿಇ
ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು
ಶ್ರೀಮತಿ ಮಾಲತಿ ದೇವಿ, ಪ್ರಾಂಶುಪಾಲರು, ಎಂ.ಜಿ.ಎಂ. ಪದವಿಪೂರ್ವ ಕಾಲೇಜು
ಡಾ. ದೇವಿದಾಸ ಎಸ್. ನಾಯ್ಕ, ಪ್ರಾಂಶುಪಾಲರು, ಎಂ.ಜಿ.ಎಂ. ಸಂಧ್ಯಾ ಕಾಲೇಜು
ಶ್ರೀ ಟಿ. ರಂಗ ಪೈ, ನಿರ್ದೇಶಕರು, ಶ್ರೀ ಟಿ. ಮೋಹನದಾಸ ಪೈ ಕೌಶಲ್ಯಾಭಿವೃದ್ಧಿ ಕೇಂದ್ರ
ಅಂಚೆ ಲಕೋಟೆ ಬಿಡುಗಡೆ: ಡಾ.ಚಂದ್ರಶೇಖರ ಕಾಕುಮನು, ಐಪಿಒಎಸ್, ಪೋಸ್ಟ್ ಮಾಸ್ಟರ್ ಜನರಲ್, ಸೌತ್ ಕರ್ನಾಟಕ ರೀಜನ್,ಬೆಂಗಳೂರು
ಮಧ್ಯಾಹ್ನ ಗಂ.12.00 : ಗೌರವಾರ್ಪಣೆ ಆಡಳಿತ ಮಂಡಳಿ ಸದಸ್ಯರಿಗೆ
ಗಂ. 2.00 : ವಿಶ್ರಾಂತ ಪ್ರಾಂಶುಪಾಲರುಗಳು, ಬೋಧಕರು ಮತ್ತು ಬೋಧಕೇತರರು
ಗಂ. 3.00 ರಿಂದ 5.30 : ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಗಂ. 5.30: ಯಕ್ಷಗಾನ “”ವೀರ ವೃಷಸೇನ ಕಾಳಗ’ ಯಕ್ಷಗಾನ ಕೇಂದ್ರ , ಇಂದ್ರಾಳಿ, ಉಡುಪಿ
== ==
30-11-2024: ಶನಿವಾರ
ಬೆಳಿಗ್ಗೆ ಗಂ. 8.15:
ಜ್ಯೋತಿ ಹಸ್ತಾಂತರ
ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ
ಗಂ. 9.00
ಶೋಭಾಯಾತ್ರೆ ಮತ್ತು ವಿದ್ಯುಕ್ತ ಚಾಲನೆ : ಡಾ. ರಂಜನ್ ಆರ್. ಪೈ, ರಿಜಿಸ್ಟ್ರಾರ್, ಎಜಿಇ ಮಣಿಪಾಲ
ಗಾಂಧಿ ಮೈನ್ ಸ್ಕೂಲ್ ಉಡುಪಿ ಇಲ್ಲಿಂದ ಎಂ.ಜಿ.ಎಂ. ಕಾಲೇಜು ತನಕ
ಗಂ. 11.30:
ಎಂ.ಜಿ.ಎಂ. “ನೆನಪು‘
ಪ್ರೊ| ಎಂ.ಎಲ್. ಸಾಮಗ, ವಿಶ್ರಾಂತ ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು
ಶ್ರೀ ಸಿಎ. ಗುಜ್ಜಾಡಿ ಪ್ರಭಾಕರ ನಾಯಕ್, ಉಡುಪಿ
==
ಮಧ್ಯಾಹ್ನ ಗಂ. 12.30:
ಎಂ.ಜಿ.ಎಂ. ಕಾಲೇಜು ನಡೆದು ಬಂದ ದಾರಿ – ಸಾಕ್ಷ್ಯ ಚಿತ್ರ ಪ್ರದರ್ಶನ
= =
ಗಂ. 1.30ರಿಂದ 5.00 : ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಗಂ. 5.30 : ಊರ್ಜಾ – ವಾದ್ಯ ವೃಂದ ಮುಂಬೈ, ಅವರಿಂದ ವಾದ್ಯ ಮೇಳ
= ==
01-12-2024 – ಆದಿತ್ಯವಾರ
ಬೆಳಿಗ್ಗೆ ಗಂ. 9.30ರಿಂದ 11.00: ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಗಂ. 11.00 : ಹಳೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ
ಮುಖ್ಯ ಅತಿಥಿ : ಪ್ರೊ. ಪ್ರಸನ್ನ ತಂತ್ರಿ
ಸಹಪ್ರಾಧ್ಯಾಪಕರು, ಪವರ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್, ಹೈದರಾಬಾದ್ ಮತ್ತು ಸದಸ್ಯರು, ನೀತಿ ಅಯೋಗ
ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಮಧ್ಯಾಹ್ನ ಗಂ. 12.30 : ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಗಂ. 2.30ರಿಂದ 3.30 : ಅಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮ
==
ಗಂ. 3.30ರಿಂದ 5.30 : ಸಮಾರೋಪ ಸಮಾರಂಭ
ದಿವ್ಯ ಉಪಸ್ಥಿತಿ : ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ
ಮುಖ್ಯ ಅತಿಥಿಗಳು : ಶ್ರೀಮತಿ ಲಕ್ಷ್ಮೀ ಹೆಬ್ಟಾಳ್ಕರ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಕರ್ನಾಟಕ ಸರಕಾರ
ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಲೋಕಸಭಾ ಸದಸ್ಯರು, ಉಡುಪಿ
ಶ್ರೀ ಯಶಪಾಲ್ ಸುವರ್ಣ, ಶಾಸಕರು, ಉಡುಪಿ
ಪ್ರೊ. ಪಿ. ಎಲ್. ಧರ್ಮಾ, ಉಪಕುಲಪತಿಗಳು, ಮಂಗಳೂರು ವಿಶ್ವವಿದ್ಯಾಲಕ
ಪ್ರೊ. ರಾಮೇಗೌಡ, ಜಂಟಿ ನಿರ್ದೇಶಕರು, ಪ್ರಾದೇಶಿಕ ಶಿಕ್ಷಣ ಇಲಾಖೆ, ಮಂಗಳೂರು
ಶ್ರೀ ಮಾರುತಿ, ಡಿಡಿಪಿಯು, ಉಡುಪಿ
ಅಧ್ಯಕ್ಷತೆ : ಶ್ರೀ ಟಿ. ಸತೀಶ್ ಯು. ಪೈ, ಅಧ್ಯಕ್ಷರು, ಎಂ.ಜಿ.ಎಂ. ಕಾಲೇಜು ಟ್ರಸ್ಟ್
ಗೌರವಾರ್ಪಣೆ : ಡಾ. ರಂಜನ್ ಆರ್. ಪೈ, ರಿಜಿಸ್ಟಾರ್, ಎಜಿಇ ಮಣಿಪಾಲ
ಶ್ರೀ ಅಶೋಕ ಪೈ, ಅಧ್ಯಕ್ಷರು, ಟಿ.ಎಂ.ಎ. ಪೈ ಫೌಂಡೇಶನ್
ಡಾ. ಎಚ್.ಎಸ್. ಬಲ್ಲಾ ಳ್, ಸಹಕುಲಾಧಿಪತಿಗಳು, ಮಾಹೆ ಮಣಿಪಾಲ, ಅಧ್ಯಕ್ಷರು, ಎಜಿಇ ಮಣಿಪಾಲ
ಲೆ.ಜ. (ಡಾ.) ಎಂ.ಡಿ. ವೆಂಕಟೇಶ್, ಉಪಕುಲಪತಿಗಳು, ಮಾಹೆ ಮಣಿಪಾಲ
ಡಾ. ನಾರಾಯಣ ಸಭಾಹಿತ್, ಸಹ ಉಪಕುಲಪತಿಗಳು, ಮಾಹೆ ಮಣಿಪಾಲ
ಉಪಸ್ಥಿತಿ: ಸಿ.ಎ. ಬಿ.ಸಿ. ವರದರಾಯ ಪೈ, ಕಾರ್ಯದರ್ಶಿ, ಇಜಿಇ
ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು
ಶ್ರೀಮತಿ ಮಾಲತಿ ದೇವಿ, ಪ್ರಾಂಶುಪಾಲರು, ಎಂ.ಜಿ.ಎಂ. ಪದವಿಪೂರ್ವ ಕಾಲೇಜು
ಡಾ. ದೇವಿದಾಸ ಎಸ್. ನಾಯ್ಕ , ಪ್ರಾಂಶುಪಾಲರು, ಎಂ.ಜಿ.ಎಂ. ಸಂಧ್ಯಾ ಕಾಲೇಜು
ಶ್ರೀ ಟಿ. ರಂಗ ಪೈ, ನಿರ್ದೇಶಕರು, ಶ್ರೀ ಟಿ. ಮೋಹನದಾಸ ಪೈ ಕೌಶಲಾಭಿವೃದ್ಧಿ ಕೇಂದ್ರ
ಸಂಜೆ ಗಂ. 5.30 : ಸಂಗೀತ ಕಾರ್ಯಕ್ರಮ
ಶ್ರೀ ವಿದ್ಯಾಭೂಷಣ, ಬೆಂಗಳೂರು
ಮತ್ತು ಕುಮಾರಿ ಮೇಧಾ ಹಿರಣ್ಮಯಿ, ಬೆಂಗಳೂರು
ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿಗಳು.