Advertisement

ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್‌,ಜೆಡಿಎಸ್‌ ರಾಜ್ಯಾಧ್ಯಕ್ಷರು ಇರಬೇಕು

06:45 AM Sep 28, 2018 | |

ಬೆಂಗಳೂರು: ಸಮನ್ವಯ ಸಮಿತಿಯಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ರಾಜ್ಯಾಧ್ಯಕ್ಷರು ಇರಲೇಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ ಪ್ರತಿಪಾದಿಸಿದ್ದಾರೆ.

Advertisement

ಈ ಮೂಲಕ ಸಮನ್ವಯ ಸಮಿತಿಗೆ ತಮ್ಮನ್ನು ಸೇರಿಸಲು ಅಡ್ಡಗಾಲು ಹಾಕುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಶೀಘ್ರದಲ್ಲೇ ಸಮನ್ವಯ ಸಮಿತಿಗೆ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡೂ ಪಕ್ಷದ ಅಧ್ಯಕ್ಷರು ಇದ್ದಾಗಲೇ ಸಮನ್ವಯ ಸಮಿತಿ ಪರಿಪೂರ್ಣ. ಎರಡು ಪಕ್ಷದ ಕಾರ್ಯಕ್ರಮಗಳ ಜಾರಿಗೂ ಇದು ಅನುಕೂಲವಾಗಲಿದೆ ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿ ಸಮನ್ವಯ ಸಮಿತಿಯಲ್ಲಿ ನನಗೆ ಸ್ಥಾನ ಸಿಗಬೇಕು.  ಈ ಬಗ್ಗೆ ಬಹಿರಂಗವಾಗಿಯೂ ಹಲವಾರು ಬಾರಿ ಹೇಳಿದ್ದೇನೆ. ಶೀಘ್ರದಲ್ಲೇ ಸಮನ್ವಯ ಸಮಿತಿಗೆ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರಕ್ಕೆ ಇದ್ದ ಎಲ್ಲ ಆತಂಕ, ಕಾರ್ಮೋಡಗಳು ತೆರೆಗೆ ಸರಿದಿವೆ. ಎಲ್ಲವೂ ಬೆಳ್ಳಗೆ ಇದೆ. ಇನ್ಮುಂದೆಯೂ ಸುಸೂತ್ರವಾಗಿರಲಿದೆ. ಯಾರಿಗೂ ಯಾವುದೇ ರೀತಿಯ ಆತಂಕ ಬೇಡ ಎಂದರು.

Advertisement

ನಿಮ್ಮ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಸಂಬಂಧವೂ ಸುಧಾರಣೆಯಾಗಿದೆಯಾ ಎಂಬ ಪ್ರಶ್ನೆಗೆ ಮುಗುಳ್ನಕ್ಕು ಸುಮ್ಮನಾದರು. ಕೆಲವು ವಿಷಯಗಳು ನನಗೆ ಸರಿಯಾಗಿ ಕೇಳಿಸುವುದಿಲ್ಲ ಎಂದು ಚಟಾಕಿ ಹಾರಿಸಿದರು.

ವಿಧಾನಪರಿಷತ್‌ಗೆ ರಮೇಶ್‌ಗೌಡ ಆಯ್ಕೆ ಕುರಿತ ಪ್ರಶ್ನೆಗೆ,  ರಾಷ್ಟ್ರೀಯ ಅಧ್ಯಕ್ಷರು ಒಪ್ಪಿದ ಮೇಲೆ ಅದು ಮುಗಿದ ಅಧ್ಯಾಯ. ದೊಡ್ಡವರು ಎಲ್ಲರ ಸಹಮತ ಪಡೆದು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಆರೋಪ ಪ್ರತ್ಯಾರೋಪ ಸಹಜ.  ಒಮ್ಮೊಮ್ಮೆ ರಾಜಕೀಯದಲ್ಲಿ ಇದೆಲ್ಲ ಆಗುತ್ತದೆ. ಇದು ಎಲ್ಲ ಪಕ್ಷಗಳಲ್ಲೂ ಇರುತ್ತದೆ. ಪಂಚಾಯಿತಿ ಮಟ್ಟದಿಂದ ಪಾರ್ಲಿಮೆಂಟ್‌ವರೆಗೆ ಎಷ್ಟು ಜನ ಕ್ರಿಮಿನಲ್‌ ಹಿನ್ನೆಲೆಯವರಿಲ್ಲ ಹೇಳಿ ಎಂದು ಪ್ರಶ್ನಿಸಿದರು.

ಹಳ್ಳಿಹಕ್ಕಿಯ ಏಳನೇ ಪುಸ್ತಕ ಅಥೇನ್ಸ್‌ ರಾಜ್ಯಾಡಳಿತ
ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಬರೆದಿರುವ “ಅಥೇನ್ಸ್‌ನ ರಾಜ್ಯಾಡಳಿತ’ ಪುಸ್ತಕ ಸೆ.29  ರಂದು ಬೆಳಗ್ಗೆ 11 ಗಂಟೆಗೆ ಭಾರತೀಯ ವಿದ್ಯಾಭವನದಲ್ಲಿ ಬಿಡುಗಡೆಯಾಗಲಿದೆ. ಗ್ರೀಸ್‌ ದೇಶಕ್ಕೆ ಹೋಗಿ ಅಲ್ಲಿನ ಆಡಳಿತ ವ್ಯವಸ್ಥೆ ಅಧ್ಯಯನ ಮಾಡಿ ಬರೆದಿರುವ ಕೃತಿ ಇದಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪುಸ್ತಕ ಬಿಡುಗಡೆಮಾಡಲಿದ್ದಾರೆ. 

ಕೃತಿಯಲ್ಲಿ ಎರಡು ಸಾವಿರ ವರ್ಷಗಳ ಹಿಂದೆಯೇ ಜನಾಡಳಿತ ಇದ್ದ ಬಗ್ಗೆ ಉಲ್ಲೇಖವಿದೆ. ಗ್ರೀಸ್‌ ದೇಶದ ಪಾರ್ಲಿಮೆಂಟ್‌ಗೆ ಪುಸ್ತಕ ಸಲ್ಲಿಸುವಂತೆಯೂ ಕೇಳಿದ್ದಾರೆ. ಬಿಡುಗಡೆ ನಂತರ ಗ್ರೀಸ್‌ಗೆ ಪ್ರವಾಸ ಹೊರಡಲಿದ್ದೇನೆ ಎಂದು ವಿಶ್ವನಾಥ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next