ಹೊಸದಿಲ್ಲಿ: ಜಿಡಿಪಿ ದರ ಕಳೆದ 6 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕಿಳಿಯಲು “ಮೋದಿ ನಿರ್ಮಿತ ವಿಪತ್ತು’ ಕಾರಣವೇ ಹೊರತು ಜಾಗತಿಕ ಸ್ಥಿತಿಗತಿಗಳಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಶುಕ್ರವಾರ ಜಿಡಿಪಿ ಪ್ರಗತಿ ದರ ಬಿಡುಗಡೆಯಾಗುತ್ತಲೇ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಕಾಂಗ್ರೆಸ್, “ಜಿಡಿಪಿ ಪ್ರಗತಿ ದರ ಶೇ.5ಕ್ಕಿಳಿದಿದೆ. ನೋಟು ಅಮಾನ್ಯ, ಅಸಮರ್ಪಕ ಜಿಎಸ್ ಟಿ ಮತ್ತು ಸರಕಾರದ ಅಸಮರ್ಥತೆ ಈಗ ಫಲ ಕೊಡಲಾರಂಭಿಸಿದೆ. ಈ ಆರ್ಥಿಕ ಬಿಕ್ಕಟ್ಟು ಜಾಗತಿಕ ಪರಿಸ್ಥಿತಿಯಿಂದ ಆಗಿರು ವಂಥದ್ದಲ್ಲ. ಬದಲಿಗೆ ಇದು ಮೋದಿ ನಿರ್ಮಿತ ವಿಪತ್ತು. ಯಾವುದಕ್ಕೂ ನಿಮ್ಮ ಸೀಟು ಬೆಲ್ಟ್‌ಗಳನ್ನು ಹಾಕಿಕೊಂಡಿರಿ’ ಎಂದು ಟೀಕಿಸಿದೆ. ಜತೆಗೆ, “ನೀವೆಷ್ಟೇ ಹೆಡ್‌ಲೈನ್ ನಿರ್ವಹಣೆ ಮಾಡಿದರೂ, ಸತ್ಯವನ್ನು ಮುಚ್ಚಿಡಲಾಗುವುದಿಲ್ಲ’ ಎಂದು ಹೇಳಿದೆ.
ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿ: ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಕೇಂದ್ರ ಸರಕಾರ ಘೋಷಿಸಬೇಕಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕುಸಿಯುತ್ತಿರುವ ಆರ್ಥಿಕತೆ ಮತ್ತು ಹೆಚ್ಚುತ್ತಿರುವ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಸರಕಾರವು ಶ್ವೇತಪತ್ರ ಹೊರಡಿಸಬೇಕು ಎಂದೂ ಕಾಂಗ್ರೆಸ್ ವಕ್ತಾರರಾದ ಜೈವೀರ್ ಶೆರ್ಗಿಲ್ ಮತ್ತು ಗೌರವ್ ವಲ್ಲಭ್ ಒತ್ತಾಯಿಸಿದ್ದಾರೆ.
ಬಿಜೆಪಿ ಸರಕಾರವು ದೇಶದ ಆರ್ಥಿ ಕತೆಯ ವಿಶ್ವಾಸಾರ್ಹತೆಯನ್ನೇ ನಾಶ ಮಾಡುತ್ತಿದೆ. ಕೂಡಲೇ ಸರಕಾರವು ಉದ್ದೇಶಪೂರ್ವಕ ಸುಸ್ತಿದಾರರು ಹೆಸರು ಗಳು ಮತ್ತು ಅವರ ಅನುತ್ಪಾದಕ ಸಾಲಗಳ ವಿವರವನ್ನು ಬಹಿರಂಗಪಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
2018-19ರಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ಶೇ.15ರಷ್ಟು ಹೆಚ್ಚಳವಾಗಿದೆ ಎಂದು ಸ್ವತಃ ಆರ್‌ಬಿಐ ವರದಿ ನೀಡಿದೆ. ಇಷ್ಟೊಂದು ದೊಡ್ಡ ಮಟ್ಟದ ಬ್ಯಾಂಕ್ ವಂಚನೆ ಗಳಿಗೆ ಅವಕಾಶ ಕೊಡುತ್ತಿರುವ ಖಾತ್ರಿದಾರರು ಯಾರೆಂದು ಜನರಿಗೆ ಗೊತ್ತಾಗಬೇಕು.
– ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ನಾಯಕಿ