Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಬಹುತೇಕ ಖಚಿತ

11:28 AM Sep 05, 2018 | Team Udayavani |

ಮೈಸೂರು: ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ಮೈಸೂರು ಮಹಾನಗರ ಪಾಲಿಕೆ ಅತಂತ್ರವಾದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರ ಹಿಡಿಯಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರ ನಡುವೆಯೇ ಪಾಲಿಕೆ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕೇರಲು ಉಭಯ ಪಕ್ಷಗಳಲ್ಲೂ ತೆರೆಮರೆಯಲ್ಲಿ ಕಸರತ್ತು ಆರಂಭವಾಗಿದೆ. 

Advertisement

ಪಾಲಿಕೆ ಚುನಾವಣಾ ಫ‌ಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್‌ ಸ್ಥಾನ ಹಿಂದುಳಿದ “ಎ’ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ದೋಸ್ತಿ ಪಕ್ಷದಲ್ಲಿ ಗೆದ್ದಿರುವ ಮಹಿಳಾ ಅಭ್ಯರ್ಥಿಗಳು ಇದೀಗ ಮೇಯರ್‌ ಹುದ್ದೆಗೇರುವ ಲೆಕ್ಕಾಚಾರದಲ್ಲಿದ್ದಾರೆ.

ಅದರಂತೆ ಕಾಂಗ್ರೆಸ್‌ನಲ್ಲಿ 7 ಹಾಗೂ ಜೆಡಿಎಸ್‌ನಲ್ಲಿ 11 ಮಹಿಳೆಯರು ಮೇಯರ್‌ ಸ್ಥಾನಕ್ಕೆ ಅರ್ಹರಾಗಿದ್ದು, ಉಪಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಓರ್ವ ಮಹಿಳೆ ಸೇರಿ 6 ಮಂದಿ ಹಾಗೂ ಜೆಡಿಎಸ್‌ನಲ್ಲಿ ಇಬ್ಬರು ಮಹಿಳೆಯರು ಸೇರಿ 5 ಮಂದಿ ಅರ್ಹರಾಗಿದ್ದಾರೆ. ಹೀಗಾಗಿ ಮೇಯರ್‌-ಉಪ ಮೇಯರ್‌ ಸ್ಥಾನಕ್ಕೇರುವ ಅರ್ಹತೆ ಹೊಂದಿರುವ ನೂತನ ಸದಸ್ಯರು ಚುನಾವಣೆ ಗೆಲುವಿನ ಸಂಭ್ರಮದ ಜತೆಗೆ ಅಧಿಕಾರದ ಗದ್ದುಗೆಗೇರುವ ತವಕದಲ್ಲಿದ್ದಾರೆ. 

ಕಾಂಗ್ರೆಸ್‌ ಆಕಾಂಕ್ಷಿಗಳು: ಈ ಬಾರಿ ಪಾಲಿಕೆಯಲ್ಲಿ ಮಹಿಳಾ ಮಣಿಗಳ ದರ್ಬಾರ್‌ ಜೋರಾಗಿರಲಿದೆ ಎಂಬ ನಿರೀಕ್ಷೆ ಚುನಾವಣೆಗೂ ಮೊದಲಿನಿಂದಲೇ ಹುಟ್ಟಿಕೊಂಡಿತ್ತು. ಅದರಂತೆ ಪಾಲಿಕೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದು ಉಭಯ ಪಕ್ಷದಲ್ಲಿರುವ ಸಾಮಾನ್ಯ ವರ್ಗದ ಮಹಿಳಾ ಮಣಿಗಳಿಗೆ ಸಂತಸ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಮೇಯರ್‌ ಸ್ಥಾನಕ್ಕೇರಲು ಕಾಂಗ್ರೆಸ್‌ನಿಂದ ಉಷಾ(5ನೇ ವಾರ್ಡ್‌), ಪುಷ್ಪಲತಾ ಜಗನ್ನಾಥ್‌(11ನೇ ವಾರ್ಡ್‌), ಎಚ್‌.ಎಂ. ಶಾಂತಕುಮಾರಿ(32ನೇ ವಾರ್ಡ್‌), ಹಾಜೀರಾ ಸೀಮಾ(34ನೇ ವಾರ್ಡ್‌), ಪುಟ್ಟನಿಂಗಮ್ಮ(54ನೇ ವಾರ್ಡ್‌), ಬಿ.ಭುವನೇಶ್ವರಿ(60ನೇ ವಾರ್ಡ್‌), ಶೋಭಾ(61ನೇ ವಾರ್ಡ್‌) ಅರ್ಹರಾಗಿದ್ದಾರೆ. 

Advertisement

ಜೆಡಿಎಸ್‌ ಆಕಾಂಕ್ಷಿಗಳು: ಜೆಡಿಎಸ್‌ನಿಂದ ಲಕ್ಷ್ಮಿ(1ನೇ ವಾರ್ಡ್‌), ಪ್ರೇಮಾಶಂಕರೇಗೌಡ(2ನೇ ವಾರ್ಡ್‌), ರೇಷ್ಮಾ ಭಾನು(17ನೇ ವಾರ್ಡ್‌), ಭಾಗ್ಯ ಮಾದೇಶ್‌(19ನೇ ವಾರ್ಡ್‌), ನಮ್ರತಾ ರಮೇಶ್‌(22ನೇ ವಾರ್ಡ್‌), ತಸ್ಲಿಂ 26ನೇ ವಾರ್ಡ್‌), ರುಕ್ಮಿಣಿ ಮಾದೇಗೌಡ(36ನೇ ವಾರ್ಡ್‌), ಅಶ್ವಿ‌ನಿ ಅನಂತ್‌(37ನೇ ವಾರ್ಡ್‌), ಶೋಭಾ(44ನೇ ವಾರ್ಡ್‌), ಕೆ.ನಿರ್ಮಲಾ(45ನೇ ವಾರ್ಡ್‌), ಎಂ.ಎಸ್‌.ಶೋಭಾ(48ನೇ ವಾರ್ಡ್‌) ಅರ್ಹರಾಗಿದ್ದಾರೆ.

ಉಪ ಮೇಯರ್‌: ಉಪಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 10ನೇ ವಾರ್ಡ್‌ನ ಅನ್ವರ್‌ ಬೇಗ್‌, 12ನೇ ವಾರ್ಡ್‌ನ ಅಯಾಜ್‌ ಪಾಷಾ(ಪಂಡು), 13ನೇ ವಾರ್ಡ್‌ನ ಅಯೂಬ್‌ ಖಾನ್‌, 16ನೇ ವಾರ್ಡ್‌ನ ಆರೀಫ್ ಹುಸೇನ್‌, 29ನೇ ವಾರ್ಡ್‌ನ ಸಯ್ಯದ್‌ ಹಸ್ರತ್‌ವುಲ್ಲಾ, 5ನೇ ವಾರ್ಡ್‌ನ ಉಷಾ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ 14ನೇ ವಾರ್ಡ್‌ನ ಸವೋದ್‌ಖಾನ್‌, 27ನೇ ವಾರ್ಡ್‌ನ ಮಹಮದ್‌ ರಫಿ, 31ನೇ ವಾರ್ಡ್‌ನ ಶಫಿ ಅಹಮದ್‌, 22ನೇ ವಾರ್ಡ್‌ನ ನಮ್ರತಾ ರಮೇಶ್‌ ಹಾಗೂ 26ನೇ ವಾರ್ಡ್‌ನ ತಸ್ಲಿಂ ಅರ್ಹರಾಗಿದ್ದಾರೆ.

ಆದರೆ ಉಪಮೇಯರ್‌ ಸ್ಥಾನಕ್ಕೆ ಅರ್ಹತೆ ಹೊಂದಿರುವ ಉಭಯ ಪಕ್ಷಗಳ ಪುರುಷರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿರುವುದು ವಿಶೇಷ. ಈ ನಡುವೆ ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ರೇಸ್‌ನಲ್ಲಿದ್ದಾರೆ. ಆದರೆ ಮೇಯರ್‌ ಸ್ಥಾನ ಮಹಿಳೆಯರಿಗೆ ಮೀಸಲಾದ ಕಾರಣಕ್ಕೆ ಉಪಮೇಯರ್‌ ಸ್ಥಾನವನ್ನು ಪುರುಷ ಅಭ್ಯರ್ಥಿಗೆ ನೀಡಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ತೆರೆಮರೆ ಕಸರತ್ತು ಆರಂಭ: ಪಾಲಿಕೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ಪಕ್ಷದಲ್ಲಿ ಹೆಚ್ಚು ಮಂದಿ ರೇಸ್‌ ನಲ್ಲಿದ್ದಾರೆ. ಒಂದೆಡೆ ಉಭಯ ಪಕ್ಷಗಳು ಮೈತ್ರಿಯೊಂದಿಗೆ ಪಾಲಿಕೆ ಆಡಳಿತ ನಡೆಸುವ ಲೆಕ್ಕಾಚಾರದಲ್ಲಿದ್ದರೆ, ಮತ್ತೂಂದೆಡೆ ಮೇಯರ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಮೇಯರ್‌ ಹುದ್ದೆಗೇರಲು ತೆರೆಮರೆ ಕಸರತ್ತು ಆರಂಭಿಸಿದ್ದಾರೆ. 

ಪ್ರಮುಖವಾಗಿ ಜೆಡಿಎಸ್‌ನಿಂದ ಎರಡನೇ ಬಾರಿ ಗೆದ್ದಿರುವ ಅಶ್ವಿ‌ನಿ ಅನಂತು ಅವರಿಗೆ ಹೆಚ್ಚು ಅವಕಾಶವಿದೆ ಎನ್ನಲಾಗುತ್ತಿದೆ. ಇನ್ನು ಮೊದಲ ಬಾರಿಗೆ ಗೆದ್ದಿರುವ ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್‌, ನಿರ್ಮಲಾ ಹರೀಶ್‌ ಸಹ ಮೇಯರ್‌ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜತೆಗೆ ಕಾಂಗ್ರೆಸ್‌ನಲ್ಲಿ 2ನೇ ಬಾರಿಗೆ ಪಾಲಿಕೆ ಪ್ರವೇಶಿಸಿರುವ ಎಚ್‌.ಎಂ.ಶಾಂತಕುಮಾರಿ, ಪುಷ್ಪಲತಾ ಜಗನ್ನಾಥ್‌ ಮೇಯರ್‌ ಸ್ಥಾನಕ್ಕೇರುವ ತವಕದಲ್ಲಿದ್ದಾರೆ. ಉಳಿದಂತೆ ನೂತನವಾಗಿ ಗೆದ್ದಿರುವ ಪುಟ್ಟನಿಂಗಮ್ಮ, ಭುವನೇಶ್ವರಿ, ಶೋಭಾ, ಹಾಜಿರಾ ಸೀಮಾ ಕೂಡ ರೇಸ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next