Advertisement

ಪೂರ್ವದಲ್ಲಷ್ಟೇ ಉದಯಿಸಿದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ

11:00 AM May 24, 2019 | Team Udayavani |

ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರು ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಎದುರಾಳಿ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಇಡೀ ಕ್ಷೇತ್ರದಲ್ಲಿ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ ಮಾತ್ರ ಲೀಡ್‌ ನೀಡಿದ್ದು, ಉಳಿದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಈ ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದ ಮೂರನೇ ಸಂಸದರು ಎಂಬ ಕೀರ್ತಿ ಜೋಶಿ ಅವರದ್ದಾಗಿದೆ. ಸರೋಜಿನಿ ಮಹಿಷಿ ಹಾಗೂ ಡಿ.ಕೆ. ನಾಯ್ಕರ್‌ ಅವರು ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು.

Advertisement

ನಿರೀಕ್ಷೆ ಹುಸಿ: ಗ್ರಾಮೀಣ ಭಾಗದಲ್ಲಿ ತಮಗೆ ಉತ್ತಮ ಬೆಂಬಲವಿದೆ, ಲಿಂಗಾಯತ ಸಮಾಜ ಬೆಂಬಲಿಸಲಿದೆ ಎಂಬ ಮೈತ್ರಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. ಬಿಜೆಪಿ ಅಭ್ಯರ್ಥಿಗೆ ಮೈತ್ರಿ ಅಭ್ಯರ್ಥಿ ಯಾವುದೇ ಹಂತದಲ್ಲೂ ಪೈಪೋಟಿ ನೀಡಲು ಸಾಧ್ಯವಾಗಿಲ್ಲ.

ಧಾರವಾಡ ಜಿಲ್ಲೆಯ 7 ಹಾಗೂ ಹಾವೇರಿ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರಗಳಲ್ಲಿ ಏಳರಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದ್ದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಹೆಚ್ಚಿನ ಮತಗಳನ್ನು ಪಡೆದಿದೆ.

ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 70,648 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ 70,365 ಮತಗಳನ್ನು ಪಡೆದು 283 ಮತಗಳ ಅಲ್ಪ ಹಿನ್ನಡೆ ಅನುಭವಿಸಿದ್ದಾರೆ. ಈ ಕ್ಷೇತ್ರ ವಿನಯ ಕುಲಕರ್ಣಿಯವರ ತವರು ನೆಲವಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯ ಫ‌ಲಿತಾಂಶದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಉತ್ತಮ ಮತ ಗಳಿಕೆ ಮಾಡಿದ್ದವು. ಆದರೂ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಅಲ್ಪ ಹಿನ್ನಡೆ ಅನುಭವಿಸಿದ್ದಾರೆ.

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಗೆ 75,580, ಮೈತ್ರಿ ಅಭ್ಯರ್ಥಿಗೆ 55,530 ಮತ ಬಂದಿದ್ದು, ಸುಮಾರು 20 ಸಾವಿರದಷ್ಟು ಮತಗಳು ಬಿಜೆಪಿಗೆ ಲೀಡ್‌ ನೀಡಿದೆ. ಧಾರವಾಡ ಕ್ಷೇತ್ರವನ್ನು ವಿನಯ ಕುಲಕರ್ಣಿ ಈ ಹಿಂದೆ ಪ್ರತಿನಿಧಿಸಿದ್ದರೂ ಅಲ್ಲಿ ಬಿಜೆಪಿಗೆ 85,517, ಮೈತ್ರಿ ಅಭ್ಯರ್ಥಿಗೆ 60,604 ಮತಗಳು ಬಂದಿದ್ದು, ಮೈತ್ರಿ ಅಭ್ಯರ್ಥಿ ಸುಮಾರು 24,913 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

Advertisement

ಹು-ಧಾ ಪೂರ್ವ ್ಷೇತ್ರದಲ್ಲಿ ಬಿಜೆಪಿ 65,870 ಮತ ಪಡೆದರೆ, ಮೈತ್ರಿ ಅಭ್ಯರ್ಥಿ 72,166 ಮತ ಪಡೆದಿದ್ದು, 6,296 ಮತಗಳ ಅಲ್ಪ ಮುನ್ನಡೆ ದೊರೆತಿದೆ. ಹು-ಧಾ ಕೇಂದ್ರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ 1,05,145 ಮತ ಪಡೆದರೆ, ಮೈತ್ರಿಕೂಟ 51,546 ಮತ ಪಡೆದಿದ್ದು, 53,599 ಮತಗಳ ಹಿನ್ನಡೆ ಅನುಭವಿಸಿದೆ. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 1,06,978 ಮತ ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ 54,754 ಮತ ಪಡೆದಿದ್ದು, 52, 224 ಮತಗಳ ಭಾರಿ ಹಿನ್ನಡೆ ಅನುಭವಿಸಿದ್ದಾರೆ.

ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 89,923, ಮೈತ್ರಿ ಅಭ್ಯರ್ಥಿ 49,470 ಮತಗಳನ್ನು ಪಡೆದಿದ್ದು, 40,450 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ 82,896, ಮೈತ್ರಿ ಅಭ್ಯರ್ಥಿ 64,684 ಮತ ಪಡೆದಿದ್ದು, ಮೈತ್ರಿ ಅಭ್ಯರ್ಥಿ ಸುಮಾರು 18,662 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

ಕೃಷಿ ವಿವಿಗೆ ಭೇಟಿ ಕೊಟ್ಟ ವಿನಯ್‌-ಜೋಶಿ
ಕೃಷಿ ವಿವಿಯ ಮತ ಏಣಿಕೆ ಕೇಂದ್ರದಲ್ಲಿ ಮತ ಏಣಿಕೆ ಆರಂಭಗೊಂಡು ಒಂದು ತಾಸಿನ ಬಳಿಕ ಶಾಂತಚಿತ್ತದಿಂದ ಆಗಮಿಸಿದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಮತ ಏಣಿಕೆ ಕಾರ್ಯ ವೀಕ್ಷಿಸಿದರು. ಪ್ರತಿ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದು ಖಚಿತವಾಗುತ್ತಿದ್ದಂತೆಯೇ ಭಾರವಾದ ಮನಸ್ಸಿನಿಂದ ಅಲ್ಲಿಂದ ತೆರಳಿದರು.

•ಜೋಶಿ ಜೋಶ್‌: ಗೆಲುವಿನ ನಿರೀಕ್ಷೆಯಿದ್ದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಆ ಬಳಿಕ ಆಗಮಿಸಿದರು. ಬಿಳಿ ಪ್ಯಾಂಟ್, ಪಿಂಕ್‌ ಜುಬ್ಟಾ ಜೊತೆಗೆ ಹಣೆ ಮೇಲೆ ತಿಲಕ ಇಟ್ಟುಕೊಂಡು ಭಾರೀ ಜೋಶ್‌ನಿಂದಲೇ ಮತ ಕೇಂದ್ರಕ್ಕೆ ಆಗಮಿಸಿದ್ದ ಅವರು, ಮನೆಯಲ್ಲಿ ಮಾವಿನ ಹಣ್ಣು ತಿನ್ನುತ್ತಿದ್ದೆವು. ಕಾರ್ಯಕರ್ತರ ವಿಜಯೋತ್ಸವ ಕಂಡು ಬಂದಿರುವುದಾಗಿ ಹೇಳಿದರು. ಕಾರ್ಯಕರ್ತರಿಂದ ಮತ ಗಳಿಕೆ ಮಾಹಿತಿ ಪಡೆದರು. ವಿಜಯ ಖಚಿತಗೊಂಡ ಬಳಿಕ ಡಿಸಿ ಅವರಿಂದ ಗೆಲುವಿನ ಪ್ರಮಾಣಪತ್ರ ಪಡೆದು ಬೆಂಬಲಿಗರೊಂದಿಗೆ ವಿಜಯೋತ್ಸವ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next