Advertisement

ಪಾಕ್‌ಗೆ ತಲೆಬಾಗಲೂ ಕಾಂಗ್ರೆಸ್‌ ಹಿಂಜರಿಯದು

06:16 AM Feb 11, 2019 | |

ಬೆಂಗಳೂರು: ಕಾಂಗ್ರೆಸ್‌ ನಾಯಕರು ಅಧಿಕಾರದ ಆಸೆಗಾಗಿ “ಏನಾದರೂ ಮಾಡಿ ಮೋದಿಯನ್ನು ತೊಲಗಿಸು’ವಂತೆ (ಕುಛ್ ಭಿ ಕರೋ ಮೋದಿ ಕೊ ಹಠಾವೊ) ಬದ್ಧವೈರಿ ಪಾಕಿಸ್ತಾನದ ಮುಂದೆ ಗೋಗರೆಯಲಿಕ್ಕೂ ಹಿಂಜರಿಯುವುದಿಲ್ಲ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಬಿಜೆಪಿ ಬೆಂಗಳೂರು ಘಟಕ ಹಮ್ಮಿಕೊಂಡಿದ್ದ “ಪ್ರಬುದ್ಧರ ಗೋಷ್ಠಿ’ಯಲ್ಲಿ ಮಾತನಾಡಿದ ಅವರು, “ಅಧಿಕಾರದಿಂದ ವಂಚಿತರಾಗಿದ್ದಕ್ಕೆ ಕಾಂಗ್ರೆಸ್‌ ನಾಯಕರು ಲಂಡನ್‌ನಲ್ಲಿ ಸುದ್ದಿಗೋಷ್ಠಿ ಕರೆದು, ದೇಶದ ಚುನಾವಣಾ ಆಯೋಗದ ವಿರುದ್ಧ ದೂರಿದರು. ಈ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಪ್ರತಿಷ್ಠೆ ಹರಾಜು ಹಾಕಿದರು. ಸೇನಾ ಮುಖ್ಯಸ್ಥರನ್ನು ಗೂಂಡಾ ಎಂದು ಜರಿದರು.

ಈಗ ಎಷ್ಟರಮಟ್ಟಿಗೆ ಹತಾಶರಾಗಿದ್ದಾರೆಂದರೆ, ಪಾಕಿಸ್ತಾನಕ್ಕೆ ತೆರಳಿ ಏನಾದರೂ ಮಾಡಿ ಮೋದಿಯನ್ನು ತೊಲಗಿಸಿ ಎಂದು ಮನವಿ ಮಾಡಲಿಕ್ಕೂ ಹಿಂಜರಿಯುವುದಿಲ್ಲ’ ಎಂದು ಆರೋಪಿಸಿದರು. ತನ್ನ ಗುರಿ ಸಾಧನೆಗಾಗಿ ದೇಶದ ಯಾವುದೇ ಸಂಸ್ಥೆಯನ್ನು ನಾಶಗೊಳಿಸಲು ಕಾಂಗ್ರೆಸ್‌ ತಯಾರಾಗಿದೆ. ಈ ಮಧ್ಯೆ 2019ರ ಲೋಕಸಭಾ ಚುನಾವಣೆಗೆ “ಮಹಾ ಕಲಬೆರಕೆ’ ಮತ್ತೆ ಒಟ್ಟಾಗಿ ಜನರ ಬಳಿ ಬರಲು ಸಜ್ಜಾಗಿದೆ.

ಅದರ ಮುಖ್ಯಗುರಿ ಜನರನ್ನು ನ್ಯಾಯವಂಚಿತರನ್ನಾಗಿ ಮಾಡುವುದು ಹಾಗೂ ಅದರ ಕಣ್ಣು ನಿಮ್ಮ ಜೇಬಿನ ಮೇಲೆಯೇ ಇರುತ್ತದೆ. ಈ ಮಹಾ ಕಲಬೆರಕೆ ಒಂದೆಡೆಯಾದರೆ, 55 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಲಾಗದ ಸಾಧನೆಯನ್ನು ಕೇವಲ 55 ತಿಂಗಳಲ್ಲಿ ಮಾಡಿತೋರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೂಂದೆಡೆ ಇದ್ದಾರೆ. ಆಯ್ಕೆ ನಿಮ್ಮ ಮುಂದಿದೆ ಎಂದು ಹೇಳಿದರು. 

2014ರಲ್ಲಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅವರು, ಸಂಸತ್‌ ಎಂಬ ದೇವಾಲಯಕ್ಕೆ ಸಾಷ್ಟಾಂಗ ನಮನ ಸಲ್ಲಿಸಿ ಒಳಪ್ರವೇಶಿಸಿದರು. ದೇವಸ್ಥಾನದ ಒಳಗೆ ಹೋದ ನಂತರ ಮೊದಲು ಮಾಡಬೇಕಾದ ಕೆಲಸ ಸ್ವತ್ಛಗೊಳಿಸುವುದು. ನಿಮ್ಮ ಪ್ರಧಾನ ಸೇವಕ (ಪ್ರಧಾನಿ) ಮಾಡಿದ್ದೂ ಇದನ್ನೇ ಎಂದು ವಿಶ್ಲೇಷಿಸಿದ ಸ್ಮತಿ ಇರಾನಿ, ಗಾಂಧೀಜಿಯವರ ಕನಸು ಸ್ವತ್ಛ ಭಾರತಕ್ಕೆ ಚಾಲನೆ ನೀಡಿದರು.

Advertisement

ಇದರ ಪರಿಣಾಮ ಬಯಲು ಬಹಿರ್ದೆಸೆ ವೇಳೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಕಡಿಮೆಯಾಯಿತು. ಮೂರು ಲಕ್ಷ ಜನ ಈ ಬಯಲು ಬಹಿರ್ದೆಸೆಯಿಂದ ಹಲವು ರೋಗಗಳಿಗೆ ತುತ್ತಾಗುವುದು ತಪ್ಪಿತು. ಕೇವಲ 55 ತಿಂಗಳಲ್ಲಿ 13 ಕೋಟಿ ಜನರಿಗೆ ಎಲ್‌ಪಿಜಿ ಸಂಪರ್ಕ ನೀಡಲಾಯಿತು. ಈ ಪೈಕಿ ಪ್ರಧಾನಿ ಕರೆಗೆ ಓಗೊಟ್ಟು ಒಂದು ಕೋಟಿ ಗ್ರಾಹಕರು ತಮ್ಮ ಸಬ್ಸಿಡಿ ಹಿಂತಿರುಗಿಸಿದ್ದಾರೆ.

ಇಂತಹ ಸಣ್ಣ-ಸಣ್ಣ ಬದಲಾವಣೆಗಳು ದೊಡ್ಡವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಾರಿಗೂ ಈ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲ ಎಂದು ಟೀಕಿಸಿದರು. ಇದಕ್ಕೂ ಮುನ್ನ ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಅತಿ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ ಹಗರಣಗಳನ್ನು ಹೊರತುಪಡಿಸಿ ಬೇರೇನೂ ಮಾಡಲಿಲ್ಲ. ರಾಜ್ಯ ಸರ್ಕಾರವಂತೂ ಸಂಪೂರ್ಣ ಮಲಗಿಬಿಟ್ಟಿದೆ.

ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದರೂ, ರಾಜ್ಯ ಸರ್ಕಾರ ಹತ್ತಾರು ಷರತ್ತುಗಳ ಮೂಲಕ ಅದಕ್ಕೆ ಕೊಕ್ಕೆಹಾಕಿದೆ. ಷರತ್ತುಗಳನ್ನು ಸಡಿಲಗೊಳಿಸದಿದ್ದರೆ, ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ, ಮಾಧ್ಯಮ ಸಹ ಸಂಚಾಲಕ ಪ್ರಕಾಶ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next