Advertisement
ಬುಧವಾರ ಬಿಜೆಪಿ ಸದಸ್ಯರು ಅವಿಶ್ವಾಸಮಂಡನೆ ನಿರ್ಣಯ ಕೈಗೊಂಡಿದ್ದರು. ಬಳಿಕ ಗುರುವಾರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ ತಾವೇ ನಗರಸಭೆ ಅಧ್ಯಕ್ಷೆ; ಬಿಜೆಪಿಯವರು ಮಂಡಿಸಿರುವ ಅವಿಶ್ವಾಸ ಮಂಡನೆ ಸಭೆಯೇ ಅಸಿಂಧು ಎಂದು ಅಧ್ಯಕ್ಷ ಕುರ್ಚಿಯಲ್ಲಿ ಆಸೀನರಾಗಿದ್ದರು. ಶುಕ್ರವಾರ ಮಧ್ಯಾಹ್ನ ದಿಢೀರನೇ ಬಿಜೆಪಿಯವರು ನಿರ್ಣಯ ಕೈಗೊಂಡು ಆಯ್ಕೆಯಾಗಿದ್ದ ಹಂಗಾಮಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ ನಗರಸಭೆ ಅಧ್ಯಕ್ಷರ ಕಚೇರಿಗೆ ಬಂದು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ನಂತರ ಬಂದ ಪಾರ್ವತಮ್ಮ ಹಲಗಣ್ಣನವರ ಕುರ್ಚಿ ಬಿಟ್ಟು ಕೊಡುವಂತೆ ವಾಗ್ವಾದ ನಡೆಸಿದರು.
ಅಧ್ಯಕ್ಷ ಕುರ್ಚಿ ಕಚ್ಚಾಟ ಶುಕ್ರವಾರ ಸಂಜೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪಾರ್ವತಮ್ಮ ಹಲಗಣ್ಣನವರ ನಾನು ಕಚೇರಿಗೆ ಹೋದಾಗ ಇರ್ಫಾನ್‌ಖಾನ್ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ಇದ್ದನ್ನು ಪ್ರಶ್ನಿಸಿದಾಗ ತಮ್ಮ ಸೊಂಟಕ್ಕೆ ಕೈ ಹಾಕಿ ದೂಡಿ ಅವಮಾನ ಮಾಡಿದ್ದಾರೆ. ಸದಸ್ಯ ನಿರಂಜನ ಹೇರೂರು ಹಾಗೂ ಲಲಿತಾ ಗುಂಡೇನಹಳ್ಳಿ ನಗರಸಭೆಯಲ್ಲಿ ಕೆಲಸ ಮಾಡಬಾರದು. ಇತ್ತ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರ್ಫಾನ್‌ಖಾನ್ ಪಾರ್ವತಮ್ಮನವರು ಹಾಗೂ ಕಾಂಗ್ರೆಸ್‌ನ ಕೆಲ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಯಿಂದ ಹೊರಹೋಗದಿದ್ದರೆ ಹೆಣ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಮಹಿಳಾ ಸದಸ್ಯೆಗೆ ಹೊಡೆದಿದ್ದಾರೆ ಎಂದು ದೂರು ನೀಡಿದ್ದು, ಅಧ್ಯಕ್ಷ ಕುರ್ಚಿ ಕಚ್ಚಾಟ ಅತಿರೇಕಕ್ಕೆ ತಿರುಗಿದೆ.