Advertisement
ಇದರಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರಕಾರ ಪತನಕ್ಕೆ ಕಾರಣ ರಾದ ಮುಖಂಡರು ಈಗ ಅತಂತ್ರಕ್ಕೆ ಸಿಲುಕಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆ ಅನರ್ಹ ಶಾಸಕರನ್ನು ಆತಂಕಕ್ಕೆ ದೂಡಿರುವ ನಡುವೆಯೇ, ಶಿಕಾರಿಪುರದಲ್ಲಿ ಸೋಮವಾರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ವಾಗ್ಧಾನ ಮಾಡಿದ್ದಾರೆ. “ಯಾರ ಹೇಳಿಕೆಗೂ ತಲೆಕೆಡಿಸಿಕೊಳ್ಳಬೇಡಿ. ಅವರಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ’ ಎಂದರು.
Related Articles
ಬಿಜೆಪಿ ನಾಯಕರ ಹೇಳಿಕೆಗಳಿಂದ ಗೊಂದಲಕ್ಕೆ ಸಿಲುಕಿರುವ ಅನರ್ಹ ಶಾಸಕರು ಸೋಮವಾರ ರಮೇಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಸಭೆ ಸೇರಿದರು. ಅಲ್ಲಿ ಉಪ ಮುಖ್ಯಮಂತ್ರಿ ಡಾ| ಅಶ್ವತ್ಥ್ ನಾರಾಯಣ ಅವರೂ ಭಾಗವಹಿಸಿದ್ದರು. ತಮ್ಮ ಬಗ್ಗೆ ಬಿಜೆಪಿ ನಾಯಕರು ಆಡುತ್ತಿರುವ ಮಾತುಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗೆ ತಿಳಿಸಲು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಅನರ್ಹರ ಶಾಸಕರ ಪ್ರಕಾರ ಮಹೇಶ್ ಕುಮಠಳ್ಳಿ, ಬೈರತಿ ಬಸವರಾಜ್ ಹಾಗೂ ಎಚ್. ವಿಶ್ವನಾಥ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿಯಲ್ಲಿ ಅಪಸ್ವರ ಇದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕಾಗಿ ಎಲ್ಲರಿಗೂ ಟಿಕೆಟ್ ನೀಡುವ ಬಗ್ಗೆ ಮೊದಲೇ ಖಚಿತ ಪಡಿಸಬೇಕು ಎನ್ನುವ ಬೇಡಿಕೆಯನ್ನೂ ಅನರ್ಹರು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅನರ್ಹರ ವಾದವನ್ನು ಸಿಎಂ ಗಮನಕ್ಕೆ ತಂದು ಸರಿಪಡಿಸುವುದಾಗಿ ಉಪ ಮುಖ್ಯಮಂತ್ರಿ ಡಾ| ಅಶ್ವತ್ಥ್ ನಾರಾಯಣ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ಸೇರುವುದು ಕಷ್ಟ: ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅನರ್ಹತೆ ಪ್ರಕರಣ ಇತ್ಯರ್ಥವಾಗದೆ ಬಿಜೆಪಿ ಸೇರಲು ತಾಂತ್ರಿಕ ವಾಗಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಗೊಂದಲದಲ್ಲಿದ್ದಾರೆ. ತಾವು ಬಿಜೆಪಿ ಜತೆಗೆ ಕೈ ಜೋಡಿಸಿ ಮೈತ್ರಿ ಸರಕಾರ ಉರುಳಿಸಿಲ್ಲ. ಸರಕಾರದ ನಡವಳಿಕೆಯಿಂದ ಬೇಸತ್ತು ರಾಜೀನಾಮೆ ನೀಡಿ ದ್ದೇವೆ ಎಂದು ತಮ್ಮ ರಾಜೀನಾಮೆಗೆ ಕಾರಣ ನೀಡುತ್ತಿರುವ ಅನರ್ಹರು, ಒಂದು ವೇಳೆ ಪ್ರಕರಣ ಇತ್ಯರ್ಥ ವಾಗುವ ಮೊದಲೇ ಬಿಜೆಪಿ ಜತೆಗೆ ಅಧಿಕೃತವಾಗಿ ಗುರುತಿಸಿಕೊಂಡರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಅದನ್ನೇ ಕೋರ್ಟ್ ಮುಂದೆ ಪ್ರಮುಖ ದಾಖಲೆಯಾಗಿ ಸಲ್ಲಿಸಿ ಸ್ಪೀಕರ್ ತೀರ್ಪಿಗೆ ಬಲವಾದ ಕಾರಣ ನೀಡುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಅನರ್ಹರು ಬಹಿರಂಗವಾಗಿ ಬಿಜೆಪಿ ಜತೆಗೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಅದೇ ಕಾರಣಕ್ಕೆ ತಾವು ಬಿಜೆಪಿ ಟಿಕೆಟ್ ಕೇಳಿಲ್ಲ. ಬಿಜೆಪಿ ಸೇರುವ ಬಗ್ಗೆ ನಿರ್ಧರಿಸಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಅವರ ಈ ನಡೆಯೇ ಅವರಿಗೆ ಮೂಲ ಬಿಜೆಪಿಯವರ ತಿರಸ್ಕಾರಕ್ಕೆ ಕಾರಣವಾಗುತ್ತಿದ್ದು, ಈ ಗೊಂದಲ ನಿವಾರಣೆಗಾಗಿ ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಬಗ್ಗೆ ಚರ್ಚೆ ಇಲ್ಲ : ಬಿ.ಸಿ. ಪಾಟೀಲ್ಅ.22ರಂದು ನಮ್ಮ ಅನರ್ಹತೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವುದರಿಂದ ಆ ಕುರಿತು ವಕೀಲರ ಜತೆ ಚರ್ಚಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ನಾವು ಬಿಜೆಪಿಯವರ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅನರ್ಹ ಶಾಸಕರ ಸಭೆಯ ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವೀಗ ಅನರ್ಹರು. ಅರ್ಹರಾಗುವ ಬಗ್ಗೆ ಗಮನ ಹರಿಸುತ್ತೇವೆ. ನಮ್ಮ ಪ್ರಕರಣ ಇತ್ಯರ್ಥವಾಗುವವರೆಗೂ ಬಿಜೆಪಿ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅನರ್ಹಗೊಂಡ ಶಾಸಕರ ಪರ ನಾವಿದ್ದೇವೆ. ಅನರ್ಹಗೊಂಡ ಶಾಸಕರ ಜತೆ ನಾವಿದ್ದೇವೆ. ಉಮೇಶ್ ಕತ್ತಿ ಅವರು ಯಾವ ಅರ್ಥದಲ್ಲಿ ಯಾಕೆ ಹೇಳಿದರೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ ಅನರ್ಹಗೊಂಡ ಶಾಸಕರಿಗೆ ಒಳ್ಳೆಯದಾಗುತ್ತದೆ.
– ಆರ್. ಅಶೋಕ್, ಸಚಿವ