Advertisement

ಗೊಂದಲ ನಿವಾರಣೆಗೆ ಕರೆದಿದ್ದ ಸಭೆಯೇ ಗೊಂದಲದ ಗೂಡು!

12:27 AM Apr 16, 2019 | Lakshmi GovindaRaju |

ಬೆಂಗಳೂರು: ಮತದಾನಕ್ಕೆ 48 ಗಂಟೆಗಳು ಬಾಕಿ ಇರುವಾಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪದ್ಮನಾಭ ನಗರದಲ್ಲಿ ಸೋಮವಾರ ಗೊಂದಲ ನಿವಾರಣೆಗಾಗಿ ಕರೆದಿದ್ದ ಬ್ರಾಹ್ಮಣ ಸಮುದಾಯದ ಸಭೆ ಕಾಂಗ್ರೆಸ್‌-ಬಿಜೆಪಿ ನಡುವಿನ ವಾಗ್ವಾದಕ್ಕೆ ವೇದಿಕೆಯಾಗಿ ಪರಿವರ್ತನೆ ಆಯಿತು.

Advertisement

ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಟಿಕೆಟ್‌ ಹಂಚಿಕೆಯಲ್ಲಿ ಕೆಲವು ಗೊಂದಲಗಳಾಗಿವೆ. ಅವುಗಳ ನಿವಾರಣೆ ಹಾಗೂ ಚುನಾವಣೆಯಲ್ಲಿ ಸಮುದಾಯ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು.

ಆದರೆ, ಸಭೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಬೆಂಬಲಿಗರು ಪರ-ವಿರೋಧದ ಘೋಷಣೆ ಕೂಗಿದರು. ಒಂದು ಹಂತದಲ್ಲಿ ತಾರಕಕ್ಕೇರಿ ತೀವ್ರ ವಾಗ್ವಾದ ನಡೆಯಿತು. ಪದ್ಮನಾಭನಗರದ ಬನಗಿರಿ ವರಸಿದ್ಧಿ ವಿನಾಯಕ ದೇವಸ್ಥಾನದ ಬಳಿ ಕಾಂಗ್ರೆಸ್‌ ಮುಖಂಡ ಎಸ್‌.ಮುರಳಿ ಅವರ ನೇತೃತ್ವದಲ್ಲಿ ನರೆದಿದ್ದ ಸಭೆಯಲ್ಲಿ ಅರ್ಚಕರು, ಪುರೋಹಿತರು ಮತ್ತು ಅಡುಗೆ ತಯಾರಕರು ಭಾಗವಹಿಸಿದ್ದರು.

ಈ ಸಭೆಯಲ್ಲಿ ನರೇಂದ್ರ ಮೋದಿ ಪರ ಘೋಷಣೆಗಳು ತೂರಿಬಂದವು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕಾರ್ಯಕರ್ತರು, “ಮಾತಿಗೆ ತಪ್ಪಿದ ಮೋದಿಗೆ ಮತ ನೀಡದಿರಿ’, “ಸರ್ವಧರ್ಮ ಸಹಬಾಳ್ವೆಗೆ ಕಾಂಗ್ರೆಸ್‌ನ ಜತೆಯಾಗಿ’ ಎಂದು ಫ‌ಲಕಗಳನ್ನು ಹಿಡಿದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಗೊಂದಲ ನಿವಾರಣೆಗೆ ಸೇರಿದ್ದ ಸಭೆಯೇ ಗೊಂದಲದ ಗೂಡಾಯಿತು! ಸಭೆ ಆರಂಭವಾಗುತ್ತಿದ್ದಂತೆ ಅರ್ಚಕ ಬಾಲು ಎಂಬವರು, “ತಮಗೆ ಹುಷಾರಿಲ್ಲದ ವೇಳೆ ಕಾಂಗ್ರೆಸ್‌ ನಾಯಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಉಚಿತ ಚಿಕಿತ್ಸೆ ಕೊಡಿಸಿದ್ದಾರೆ. ಆ ಮೂಲಕ ನಮ್ಮ ಸಹಾಯಕ್ಕೆ ಬಂದಿದ್ದಾರೆ.

Advertisement

ಈ ನೆರವು ಉಳಿದವರಿಗೂ ಸಿಗಬೇಕು. ಅದಕ್ಕಾಗಿ ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಮುರಳಿ, “ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿರುವುದು ಸರಿ ಅಲ್ಲ. ಮೋದಿಗಿಂತ ಮೊದಲು ಬಿಜೆಪಿಯಲ್ಲಿದ್ದವರು ಅನಂತಕುಮಾರ್‌. ಅವರ ಪತ್ನಿ ಹಾಗೂ ಬ್ರಾಹ್ಮಣ ಮಹಿಳೆಗೆ ಅವಮಾನ ಮಾಡಲಾಗಿದೆ. ಇದು ಖಂಡನೀಯ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್‌ ಅವರಿಗೆ ಬೆಂಬಲ ನೀಡಬೇಕು ಎನ್ನುವುದು ನಮ್ಮೆಲ್ಲರ ಆಶಯ’ ಎಂದರು. ಈ ಮಧ್ಯೆ ಸಭೆಯಲ್ಲಿ “ಬೋಲೋ ಭಾರತ್‌ ಮಾತಾ ಕಿ ಜೈ’, “ಮೋದಿ… ಮೋದಿ…’ ಘೋಷಣೆಗಳು ಮೊಳಗಿದವು. ಈ ಗದ್ದಲದ ನಡುವೆ ಸಭೆ ಅಂತ್ಯಗೊಂಡಿತು.

ಈ ಮಧ್ಯೆ “ಬನಗಿರಿ ವರಸಿದ್ಧಿ ವಿನಾಯಕ ದೇವಸ್ಥಾನ ಬಳಿ ಕರೆದಿದ್ದ ಸಭೆಗೂ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಂ.ಆರ್‌. ಶಿವಶಂಕರ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

“ಮಹಾಸಭಾ ಕೇವಲ ಮತದಾನ ಜಾಗೃತಿ ಅಭಿಯಾನಕ್ಕೆ ಸೀಮಿತವಾಗಿದೆ. ವಿಪ್ರ ಸಮಾಜದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಒಬ್ಬರಿಗಿಂತ ಹೆಚ್ಚು ಸಮಾಜದ ಅಭ್ಯರ್ಥಿಗಳಿದ್ದರೆ, ಯಾರು ಸಮಾಜದ ಕಾರ್ಯಗಳಿಗೆ ಸ್ಪಂದಿಸಿ, ಭಾಗವಹಿಸಿ ಸಹಕರಿಸುವುದಾಗಿ ಭರವಸೆ ನೀಡುತ್ತಾರೋ ಅವರಿಗೆ ಮತ ಹಾಕಬೇಕು ಎಂದು ಪ್ರಕಟಣೆ ಮೂಲಕ ಮನವಿ ಮಾಡಲಾಗಿದೆ. ಯಾವುದೇ ಸಭೆ ಕರೆದಿಲ್ಲ ಮತ್ತು ನಮ್ಮವರು ಯಾರೂ ಹೋಗಿಯೂ ಇಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next