Advertisement

ಸಿಎಂ ಎದುರೇ ಮೈತ್ರಿ ನಾಯಕರ ಕಿತ್ತಾಟ

06:34 AM Jun 22, 2019 | Team Udayavani |

ಚಂಡರಕಿ: ಗುರುಮಿಠಕಲ್‌ ಶಾಸಕ ನಾಗನಗೌಡ ಕಂದಕೂರ, ಶರಣಗೌಡ ಕಂದಕೂರ, ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ ನಡುವಿನ ಭಿನ್ನಮತವು ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲೇ ಸ್ಫೋಟಗೊಂಡಿತು.

Advertisement

ಶುಕ್ರವಾರ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ ವಿಧಾನಸಭಾ ಕ್ಷೇತ್ರದ ಚಂಡರಕಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಹಾಗೂ ಜನತಾದರ್ಶನ ಉದ್ಘಾಟನಾ ಸಮಾರಂಭದ ವೇದಿಕೆ ಮೇಲೆಯೇ ಶಾಸಕ ನಾಗನಗೌಡ ಕಂದಕೂರ, ಅವರ ಪುತ್ರ ಶರಣಗೌಡ ಕಂದಕೂರ ಹಾಗೂ ಸಚಿವ ರಾಜಶೇಖರ ಪಾಟೀಲ ನಡುವೆ ಜಟಾಪಟಿ ನಡೆಯಿತು.

ಸಮಾರಂಭ ಉದ್ಘಾಟನೆಗೊಂಡು ಸಚಿವ ರಾಜಶೇಖರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಲು ಮುಂದಾದರು. ಈ ಸಂದರ್ಭದಲ್ಲಿ ಶಾಸಕರ ಪುತ್ರ ಶರಣಗೌಡ ಕಂದಕೂರ ಹಾಗೂ ಅವರ ಬೆಂಬಲಿಗರು ಮೊದಲು ಶಾಸಕ ನಾಗನಗೌಡ ಕಂದಕೂರ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಬೇಕು.

ಶರಣಗೌಡ ಕಂದಕೂರ ಅವರಿಗೆ ವೇದಿಕೆ ಮೇಲೆ ಅವಕಾಶ ಕಲ್ಪಿಸಬೇಕೆಂದು ಕೂಗ ತೊಡಗಿದರು. ಎಲ್ಲ ಸಿದ್ಧತೆ ನಾವು ಮಾಡಿದ್ದೇವೆ, ನೀವೇನು ಮಾಡಿದ್ದೀರಿ ಎಂದರು. ಇದರಿಂದ ಬೇಸತ್ತ ಸಚಿವ ರಾಜಶೇಖರ ಪಾಟೀಲ ಮಾತನ್ನು ಮೊಟಕುಗೊಳಿಸಿ, ಆಸನದಲ್ಲಿ ಕುಳಿತುಕೊಳ್ಳಲು ಬಂದರು.

ಆಗ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವರಾದ ಬಂಡೆಪ್ಪ ಖಾಶೆಂಪೂರ, ಪ್ರಿಯಾಂಕ್‌ ಖರ್ಗೆ ಸಮಾಧಾನ ಪಡಿಸಲು ಮುಂದಾದರು. ಇದರ ನಡುವೆ ಶಾಸಕ ನಾಗನಗೌಡ ಕಂದಕೂರ ಅವರು ನಾನು ಎದ್ದು ಹೋಗುತ್ತೇನೆ ಎಂದು ಪ್ರತಿವಾದ ಮಾಡಿದರು.

Advertisement

ಇದರಿಂದ ಸಮಾರಂಭದಲ್ಲಿ ಕೆಲಕಾಲ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಾಗಲಿಲ್ಲ. ತಕ್ಷಣ ಕುಮಾರಸ್ವಾಮಿ ಅವರು ಶರಣಗೌಡ ಕಂದಕೂರ ಅವರನ್ನು ಕರೆದು ಕಿವಿಮಾತು ಹೇಳಿದರು. ತದನಂತರ ಪರಿಸ್ಥಿತಿ ತಿಳಿಯಾಯಿತು. ಬಳಿಕ ಸಚಿವ ರಾಜಶೇಖರ ಪಾಟೀಲ ತಮ್ಮ ಮಾತು ಮುಂದುವರಿಸಿದರು.

ಇದಕ್ಕೂ ಮುನ್ನ ವೇದಿಕೆ ಮೇಲೆ ಶಾಸಕರಿಗೆ ಆಸನ ನೀಡದ ಪ್ರಯುಕ್ತ ಬಹಿರಂಗ ತಳ್ಳಾಟವೂ ನಡೆಯಿತು. ಅಲ್ಲದೇ ಶಾಸಕರ ಪಕ್ಕ ಕುಳಿತುಕೊಳ್ಳಲು ಸಚಿವ ರಾಜಶೇಖರ ಪಾಟೀಲ ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಪರಿಸ್ಥಿತಿ ಗಂಭೀರತೆ ಅರಿತ ಮುಖ್ಯಮಂತ್ರಿಗಳು ತಾವು ಆಸೀನರಾಗಿರುವ ಹಿಂಭಾಗದಲ್ಲೇ ಶಾಸಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು.

ಸಚಿವರ ಆಕ್ಷೇಪ: ಸಚಿವ ರಾಜಶೇಖರ ಪಾಟೀಲ, “ಎಲ್ಲೆಲ್ಲೂ ಜೆಡಿಎಸ್‌ ಧ್ವಜ ಹಾಗೂ ಅವರ ಪಕ್ಷದ ನಾಯಕರ ಕಟೌಟ್‌ಗಳೇ ಕಾಣುತ್ತಿವೆ, ಕಾಂಗ್ರೆಸ್‌ ನಾಯಕರ ಭಾವಚಿತ್ರಗಳು ಪ್ರಮುಖವಾಗಿ ಕಂಡುಬರುತ್ತಿಲ್ಲ’ ಎಂದು ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ಗುರುಮಿಠಕಲ್‌ದಿಂದ ಚಂಡರಕಿಗೆ ಹೋಗುವ ನಾಲ್ಕುವರೆ ಕಿ.ಮೀ. ಜೆಡಿಎಸ್‌ ಪಕ್ಷದ ಧ್ವಜಗಳೇ ಇದ್ದವು. ಶುಕ್ರವಾರ ಸಿಎಂ ಬರುವ ವೇಳೆ ಅದರಲ್ಲಿ ಕಾಂಗ್ರೆಸ್‌ ಪಕ್ಷದ ಧ್ವಜ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next