Advertisement

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

11:33 PM Jan 23, 2021 | Team Udayavani |

ಕೋಟ: ಬ್ರಹ್ಮಾವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿಕೊಳ್ಳಲಿರುವ ಬಾಬು ಶಿವಪೂಜಾರಿಯವರು ವೃತ್ತಿಯಿಂದ ಹೊಟೇಲ್‌ ಉದ್ಯಮಿಯಾಗಿ  ಮುಂಬಯಿಯಲ್ಲಿ ನೆಲೆಸಿದ್ದು, ಸಾಹಿತ್ಯ ಕೃಷಿಯನ್ನೂ ಮಾಡಿದವರು. ಕೃಷ್ಣದೇವರಾಯ, ಕೋಟಿ ಚೆನ್ನಯ, ತುಳು ಸಂಸ್ಕೃತಿ, ಕಾಂತಬಾರೆ ಬೂದಬಾರೆ, ಸಿರಿ,  ನಾಗಾರಾಧನೆ ಭೂತಾರಾದನೆ  ಮತ್ತು ತುಳುನಾಡಿನ ಗರೋಡಿಗಳು ಮೊದಲಾದವುಗಳ ಬಗ್ಗೆ ಅಧ್ಯಯನಾತ್ಮಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಸಮ್ಮೇಳನದ ಹಿನ್ನೆಲೆಯಲ್ಲಿ ಅಧ್ಯಕ್ಷರ ಜತೆ ಉದಯವಾಣಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Advertisement

ಸಮ್ಮೇಳನಾಧ್ಯಕ್ಷತೆಯ ಅವಕಾಶದ ಬಗ್ಗೆ  ಏನನಿಸುತ್ತದೆ ?

ನಾನು ಈ ಕ್ಷೇತ್ರಕ್ಕೆ ತುಂಬಾ ಚಿಕ್ಕವ ಹಾಗೂ ದೊಡ್ಡ ಸಾಹಿತಿ

ಯಲ್ಲ. ನನ್ನ ತಿಳಿವಳಿಕೆಗೆ ಬಂದ ಕೆಲವು ವಿಚಾರಗಳನ್ನು ಬರೆದಿದ್ದೇನೆ ಅಷ್ಟೆ. ಕನ್ನಡದ ಮೇಲಿನ ಪ್ರೀತಿ, ತಾಯಿ ನಾಡಿನ ಮೇಲಿನ ಮೋಹದಿಂದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ.

ನೀವು ಮುಂಬೈ ಕನ್ನಡಿಗರು. ಅಲ್ಲಿ ಕನ್ನಡದ ಸ್ಥಿತಿ ಹೇಗಿದೆ?

Advertisement

ಕನ್ನಡದ ವಾತಾವರಣ ಒಳ್ಳೆದಿದೆ. ಆದರೆ ಕನ್ನಡ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ. ಹಿಂದೆ 18 ರಾತ್ರಿ ಶಾಲೆ, 19ಕ್ಕೂ ಹೆಚ್ಚು ಕಾಲೇಜುಗಳಿದ್ದವು. ಆದರೆ ಈಗ ನಾಲ್ಕೈದು ರಾತ್ರಿ ಶಾಲೆಗಳು ಮಾತ್ರ ಉಳಿದುಕೊಂಡಿವೆ.  ಸಾಹಿತ್ಯಿಕವಾಗಿ ಕನ್ನಡ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಸಾಹಿತ್ಯದಲ್ಲಿ ಸಂಶೋಧನೆ ಎಷ್ಟು ಮುಖ್ಯ ?

ಸಂಶೋಧನೆ ಬಹಳ ಮುಖ್ಯ. ಇವತ್ತು ಸಂಶೋಧನೆಯ ಹಾದಿಗಳು ಸರಳಗೊಳ್ಳುತ್ತಿದೆ. ಆದರೆ ಸಮಯ, ಶ್ರಮ ವಿನಿಯೋಗಿಸಿ ಸಂಶೋಧಿಸುವ ಪ್ರವೃತ್ತಿ ಕಡಿಮೆ ಯಾಗುತ್ತಿದೆ. ದಿಢೀರ್‌ ಆಗಿ ಫಲಿತಾಂಶ ಬರಬೇಕು ಎನ್ನುವ ಮನಃಸ್ಥಿತಿಗಳು ಹೆಚ್ಚಾಗುತ್ತಿವೆ.

ಸಾಹಿತ್ಯ ಯಾವ ರೀತಿ ಮುಂದೆ ಸಾಗಬೇಕು?

ಜನಪದ ಸಾಹಿತ್ಯದ ಕುರಿತು ಹೆಚ್ಚು ಕೆಲಸಗಳಾಗಬೇಕು. ಯಾರೋ ಬರೆದಿಟ್ಟ ಪುಸ್ತಕವನ್ನು ಓದಿ ಮತ್ತೂಂದು ಪುಸ್ತಕ ಬರೆಯುವ ಬದಲು ನಾವೇ ಒಂದಷ್ಟು ವಿಚಾರಗಳನ್ನು ಅಧ್ಯಯನ ಮಾಡಿ ಬರೆಯಬೇಕು.

ಯುವ ಬರಹಗಾರರಿಗೆ ನಿಮ್ಮ ಕಿವಿಮಾತು ?

ಎಲ್ಲ ವಿಚಾರವನ್ನು ಅರೆದು ಕುಡಿಯ್ತುತೇನೆ ಎನ್ನುವ ಹುಮ್ಮಸ್ಸು  ಬೇಡ. ಯಾವುದಾದರೂ  ಒಂದು ವಿಷಯದ ಕುರಿತು ಆಳವಾಗಿ ಅರಿತು ಬರೆಯುವುದನ್ನು ಕಲಿಯಿರಿ.

ಸಮ್ಮೇಳನದಿಂದ ಏನು ನಿರೀಕ್ಷೆ ಮಾಡುತ್ತೀರಿ ?

ಕನ್ನಡದ ಮನಸ್ಸುಗಳು ಒಂದಾಗಬೇಕು. ನಮ್ಮ  ಜನಪದ ಕಲೆ, ಸಮಗ್ರ ಸಾಹಿತ್ಯ, ಕನ್ನಡ ಭಾಷೆ, ಕನ್ನಡ  ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಏನಾದರೊಂದು ಸಣ್ಣ ಕಿಡಿ ಈ ಮೂಲಕ ಹತ್ತಿಕೊಳ್ಳಬೇಕು.

 

ಕೇವಲ ಸಮ್ಮೇಳನಗಳಿಂದಲೇ ಭಾಷೆ, ಸಾಹಿತ್ಯ ಬೆಳೆಯಲು ಸಾಧ್ಯವಿಲ್ಲ. ಆದರೆ ಇದೊಂದು ಉತ್ಸವವಿದ್ದಂತೆ. ವರ್ಷಕ್ಕೊಮ್ಮೆ ಜಾತ್ರೆ, ರಥೋತ್ಸವ ಬಂದಾಗ ಮನಸ್ಸಿಗೆ ಸಂತೋಷ-ಉಲ್ಲಾಸವಾಗುವಂತೆ ಸಾಹಿತ್ಯ ಸಮ್ಮೇಳನಗಳ ಮೂಲಕ ಕನ್ನಡ ಮನಸ್ಸುಗಳು ಉಲ್ಲಾಸಗೊಳ್ಳಲು, ಒಂದಾಗಲು ಪ್ರೇರಕವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next