Advertisement

ಸಹೃದಯತೆ ಜಾಗೃತಿಗಾಗಿ ಮಠಾಧೀಶರ ಒಕ್ಕೂಟ

06:00 AM Nov 26, 2018 | |

ಚಿಕ್ಕಗಲಗಲಿ(ವಿಜಯಪುರ): ಮಠಾಧೀಶರು-ಮಠಗಳು ಭಕ್ತರು-ಸಮಾಜಕ್ಕೆ ಉತ್ತರದಾಯಿತ್ವ, ಮಠಾಧೀಶರಲ್ಲೇ ಮೇಲು-ಕೀಳೆಂಬ ಕಳೆ ಕೀಳುವ, ಜನರಲ್ಲಿ ಮೂಢನಂಬಿಕೆ ನಿರ್ನಾಮ ಮಾಡುವ, ವಿಷಮುಕ್ತ ಕೃಷಿಯತ್ತ ಜಾಗೃತಿಯ ಮಹತ್ವದ ಧ್ವನಿಯನ್ನು ಸಹೃದಯಿ ಮಠಾಧೀಶರ ಒಕ್ಕೂಟ ಮೊಳಗಿಸಿತು.

Advertisement

ಸಹೃದಯಿ ಮಠಾಧೀಶರ ಒಕ್ಕೂಟದ ರಾಜ್ಯದ ಮೊದಲ ಭಕ್ತ ಸಮಾವೇಶದಲ್ಲಿ ನೆರೆದಿದ್ದ ಸುಮಾರು 300ಕ್ಕೂ ಹೆಚ್ಚು ಮಠಾಧೀಶರು, ಮಹಿಳಾ ಮಠಾಧೀಶರರು ನಾವೆಲ್ಲ ಒಂದು, ನಮ್ಮಲ್ಲಿ ಭೇದ-ಭಾವವಿಲ್ಲ, ನಮ್ಮ ಧ್ಯೇಯ ಸಮಾಜ ಸುಧಾರಣೆ, ದೇಸಿ ಗೋವುಗಳ ಸಂಖ್ಯೆ ಹೆಚ್ಚಳ, ವಿವಿಧ ಕಸುಬುಗಳಲ್ಲಿ ತೊಡಗಿದ ಸಾತ್ವಿಕರನ್ನು ಗುರುತಿಸಿ ಅವರನ್ನು ಗೌರವಿಸುವ, ಪ್ರೋತ್ಸಾಹಿಸುವ ಉದ್ದೇಶವಿದೆ ಎಂಬ ಮಹತ್ವದ ಸಂದೇಶ ಸಾರಿತು.

ಮಡಿವಾಳ ಸಮಾಜ, ಹಡಪದ ಅಪ್ಪಣ್ಣ, ಬಂಜಾರ, ಪಂಚಮಸಾಲಿ, ಸಿದ್ದಾರೂಢ ಸಂಪ್ರದಾಯ, ಶಿವಾನಂದ ಸಂಪ್ರದಾಯ, ಲಚ್ಯಾಣ ಸಂಪ್ರದಾಯ, ಮುಗಳಖೋಡ ಸಂಪ್ರದಾಯ, ಇಂಚಗೇರಿ ಸಂಪ್ರದಾಯ, ವಿರಕ್ತ ಮಠಗಳು, ಹಿರೇಮಠಗಳು ಹೀಗೆ ವಿವಿಧ ಸಂಪ್ರದಾಯಗಳು ಹಾಗೂ ವಿವಿಧ ಮಠಗಳ ಮಠಾಧೀಶರು ಒಂದೇ ವೇದಿಕೆಯುಲ್ಲಿ ಪೀಠವನ್ನಲಂಕರಿಸಿದ್ದರು.

ನೋವಿನ ಪ್ರತಿಧ್ವನಿ:
ಮಠಾಧೀಶರು ಎಂದರೆ ಅದು ಸಣ್ಣ ಮಠವೇ ಇರಲಿ, ದೊಡ್ಡ ಮಠವೇ ಇರಲಿ, ಪ್ರಭಾವಿಯೇ ಆಗಿರಲಿ. ಆದರೆ, ಭಕ್ತರಿಗೆ ಮಾತ್ರ ಮಠಾಧೀಶರು, ಕಾವಿಧಾರಿಗಳೆಂದರೆ ಭಕ್ತಿ ಸಮಾನವಾಗಿರುತ್ತದೆ. ಆದರೆ, ಹಲವು ವರ್ಷಗಳಿಂದ ಮಠಾಧೀಶರಲ್ಲೇ ಮೇಲು-ಕೀಳೆಂಬ ರೀತಿಯಲ್ಲಿ ಭೇದ-ಭಾವ ಸೃಷ್ಟಿಯಾಗಿದೆ. ಅವರಂತೆ ನಾವು ಕಾವಿ ತೊಟ್ಟು, ದೀಕ್ಷೆ ಪಡೆದಿದ್ದೇವೆ. ಸಮಾನ ವೇದಿಕೆ ಇಲ್ಲದೆ ತಾರತಮ್ಯ ತೋರಿದ್ದರ ವಿರುದ್ಧ ಕುದಿಮೌನ, ಅನುಭವಿಸಿದ ನೋವನ್ನು ವ್ಯಕ್ತಪಡಿಸಲು ಸಮಾವೇಶ ವೇದಿಕೆಯಾಯಿತು.

ಸಮಾನತೆ ಹೇಳುವವರೇ ಅಸಮಾನತೆ ತೋರಿದರೆ, ಕಾವಿಧಾರಿಗಳಾದರೂ ನಮ್ಮನ್ನು ಎರಡನೇ ದರ್ಜೆ ನಾಗರಿಕರ ರೀತಿ ಕೆಳಗೆ ಕೂಡಿಸಿದರೆ ಸಹಿಸಿವುದು ಹೇಗೆ, ಭಕ್ತರಿಗೆ ಶಾಪದ ಭಯದ ಭಾÅಂತಿ ಮೂಡಿಸಿ,ಅಂಧಶ್ರದ್ಧೆಯತ್ತ ಭಕ್ತರನ್ನು ನೂಕಿ, ಇದನ್ನೇ ಭಕ್ತಿಯೆಂದು ಬಿಂಬಿಸುವುದರ ವಿರುದ್ಧ ಜಾಗೃತಿ ಮೂಡಿಲು ಸಹೃದಯಿ ಒಕ್ಕೂಟ ವೇದಿಕೆಯಲ್ಲಿ ಮಠಾಧೀಶರ ಆಶಯ ವ್ಯಕ್ತವಾಯಿತು. ಭೇದ-ಭಾವ ತೊಡೆಯುವುದು ಮಠಗಳ ಕೆಲಸ. ಇದಕ್ಕಾಗಿ ವೇದಿಕೆಯಲ್ಲಿ ಮಠಗಳ ನಡೆ, ವರ್ತನೆಗಳ ಬಗ್ಗೆ ಪ್ರಶ್ನಿಸುವ ಹಕ್ಕು ಭಕ್ತರಿಗಿದೆ ಎಂಬ ಸ್ಪಷ್ಟ ಸಂದೇಶವನ್ನು ಸಮಾವೇಶ ಸಾರಿತು.

Advertisement

ಸ್ವಾವಲಂಬಿ ಗ್ರಾಮಕ್ಕೆ ಒತ್ತು:
ಸಹೃದಯಿ ಮಠಾಧೀಶರ ಒಕ್ಕೂಟ ಸ್ವಾವಲಂಬಿ ಗ್ರಾಮ, ವಿಷಮುಕ್ತ ಕೃಷಿ, ದೇಸಿ ಗೋವುಗಳ ಸಾಕಣೆ, ಮಕ್ಕಳಿಗೆ ಭಾರತೀಯ ಪರಂಪರೆ, ಸಂಪ್ರದಾಯ ಪರಿಚಯ, ವಿವಿಧತೆಯ ನಡುವೆಯೂ ಇಂದಿಗೂ ಸೃದೃಢವಾಗಿದೆ. ಏಕತೆಯನ್ನು ಸಾರುವ, ಅಂಧಶ್ರದ್ಧೆಯನ್ನು ನಿವಾರಿಸುವ ಬದ್ಧತೆ ಒಕ್ಕೂಟದ್ದಾಗಿದೆ ಎಂದು ಸಾರಲಾಯಿತು.

ಬಹುತೇಕ ಮಠಗಳು ಒಕ್ಕಲುತನ ಹಿನ್ನೆಲೆ ಮಠಗಳಾಗಿದ್ದು, ವಿಷಮುಕ್ತ ಕೃಷಿ ನಿಟ್ಟಿನಲ್ಲಿ ರೈತರಿಗೆ ಮಾದರಿ ಪ್ರಯೋಗ ಮಾಡುವ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ವಿಫ‌ಲವಾಗಿವೆ. ಹೀಗಾಗಿ, ವಿಷಮುಕ್ತ ಕೃಷಿ ಪುನರುತ್ಥಾನ, ದೇಸಿ ಗೋವುಗಳ ಬಗ್ಗೆ ಜಾಗೃತಿ, ಪಾರಂಪರಿಕ ಕುಲಕಸುಬುದಾರರು, ರೈತರನ್ನು ಕೀಳಾಗಿ ಕಾಣುವುದನ್ನು ನಿಲ್ಲುವಂತೆ ಮಾಡುವ ಯತ್ನ ಮಾಡಲಾಗುವುದು. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸುವ ಮೂಲಕ ಮಠಾಧೀಶರ ಒಕ್ಕೂಟ ಉತ್ತಮ ಸಮಾಜ ನಿರ್ಮಿಸಲಿದೆ. ಭಕ್ತರ ಹಿತ ದೃಷ್ಟಿಯಿಂದ ಮಠಗಳೇ ಭಕ್ತರು-ಸಮಾಜದ ಸಮೀಪಕ್ಕೆ ಹೋಗುವ ಕಾರ್ಯ ಮಾಡಲಿದೆ ಎಂಬ ಘೊಷಣೆಯನ್ನು ಸಮಾವೇಶ ಸ್ಪಷ್ಟ ಧ್ವನಿಯಲ್ಲಿ ಮೊಳಗಿಸಿತು.

ಮಠಗಳ ಆಸ್ತಿ, ಅಲ್ಲಿನ ಪ್ರತಿಯೊಂದು ಸ್ವತ್ತು ಭಕ್ತರ ಶ್ರಮದ ಫಲದ ರೂಪ. ಮಠಾಧೀಶರು, ಮಠಗಳು, ಭಕ್ತರ-ಸಮಾಜದ ಋಣ ತೀರಿಸುವ ಕಾಯಕದಲ್ಲಿ ತೊಡಗಬೇಕೆ ವಿನಃ ಸ್ವಾರ್ಥಕ್ಕೆ ಎಡೆ ಕೊಡಬಾರದು. ಸ್ವಾವಲಂಬಿ ಗ್ರಾಮಗಳನ್ನು ಸೃಷ್ಟಿಸಿ, ವಿಷಮುಕ್ತ ಕೃಷಿ ಜಾಗೃತಿ ಮೂಡಿಸಬೇಕು. ಭಕ್ತರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಿ ಭಕ್ತರಿರಲಿ, ಮಠಾಧೀಶರಿರಲಿ ಅವರನ್ನು ಸರಿದಾರಿಗೆ ತರಬೇಕಿದೆ.
– ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಸಿದ್ಧಗಿರಿ

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next