Advertisement

ಯೋಧರ ಮೇಲೆ ಉಗ್ರರ ಪೈಶಾಚಿಕ ಕೃತ್ಯಕ್ಕೆ ಖಂಡನೆ 

07:29 AM Feb 16, 2019 | Team Udayavani |

ಚಿಕ್ಕಬಳ್ಳಾಪುರ: ಜಮ್ಮುಕಾಶ್ಮೀರದ‌ ಅವಂತಿಪೋರಾದಲ್ಲಿ ಕೇಂದ್ರೀಯ ಅರೆಸೇನಾ ಪಡೆಯ ಯೋಧರ ಮೇಲೆ ಜೈಶ್‌ ಎ ಮೊಹಮ್ಮದ್‌ ಉಗ್ರರು ಆತ್ಮಾಹುತಿ ದಾಳಿ ನಡೆಸಿ 43 ಯೋಧರನ್ನು ಬಲಿ ಪಡೆದ ಘಟನೆ ಜಿಲ್ಲಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹುತಾತ್ಮ ಯೋಧರರಿಗೆ ನಿಜವಾದ ಶ್ರದ್ಧಾಂಜಲಿ ಸಿಗಬೇಕಾದರೆ ಕೇಂದ್ರ ಸರ್ಕಾರ ಉಗ್ರರನ್ನು ಸೆದೆ ಬಡಿಯಬೇಕೆಂಬ ಹಕ್ಕೋತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. 

Advertisement

ಸಾರ್ವಜನಿಕರ ಕಂಬನಿ: ಉಗ್ರರರ ಕೃತ್ಯಕ್ಕೆ ರಾಜ್ಯದ ಮಂಡ್ಯದ ಯೋಧ ಗುರು ಸೇರಿ ಬರೋಬ್ಬರಿ 43 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿರುವುದಕ್ಕೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ದಿಗ್ಬ†ಮೆ ಹಾಗೂ ಖಂಡನೆ ವ್ಯಕ್ತವಾಯಿತು. ಇದು ಸೇನೆಯ ಇತಿಹಾಸದಲ್ಲಿ ಅತ್ಯಂತ ಘನ ಘೋರವಾದ ಕೃತ್ಯವಾಗಿದ್ದು, ಉಗ್ರರರ ವಿರುದ್ಧ ಇಡೀ ದೇಶದ ಜನತೆ ಒಂದಾಗಿ ಹೋರಾಡಬೇಕಿದೆ ಎಂಬ ಮಾತು ವ್ಯಕ್ತವಾಯಿತು.

ಶ್ರದ್ಧಾಂಜಲಿ: 43 ಯೋಧರು ಹುತಾತ್ಮರಾಗಿದ್ದಕ್ಕೆ ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಯೋಧರ ಗೌರವಾರ್ಥ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಕೆಲವು ಶಾಲಾ, ಕಾಲೇಜುಗಳಲ್ಲಿ ಘಟನೆಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಹೆಸರನ್ನು ಓದಿ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ವಿದ್ಯಾರ್ಥಿಗಳು ಪ್ರಾರ್ಥಿಸಿದರಲ್ಲದೇ ಜೈ ಜವಾನ್‌, ಜೈ ಕಿಸಾನ್‌ ಘೋಷಣೆಗಳು ಮೊಳಗಿದವು.

ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ: ನಗರದ ಹೊರ ವಲಯದ ಶ್ರೀ ಚಂದ್ರಶೇಖರನಾಥಸ್ವಾಮೀಜಿ ತಾಂತ್ರಿಕ ಶಿಕ್ಷಣ ಮಹಾ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಬಿಜಿಎಸ್‌ ಸಮ್ಮೇಳನ ಸಭಾಂಗಣದಲ್ಲಿ ಜಮಾಯಿಸಿ ಮೊಂಬತ್ತಿ ಬೆಳಗಿಸಿ ತೀವ್ರ ಕಂಬನಿ ಮಿಡಿದರು. ಅಲ್ಲದೇ ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಾಂಶುಪಾಲರು, ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. 

ಭಾರತಿ ಶಾಲೆ: ನಗರದ ಭಾರತಿ ಶಾಲೆಯಲ್ಲಿ ಕೂಡ ಹುತಾತ್ಮ ಯೋಧರ ಗೌರವಾರ್ಥವಾಗಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಸೈನಿಕರ ಮಹತ್ವದ ಬಗ್ಗೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕುಮಾರ್‌, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಏಕಾಂಬರ್‌ ಮಾತನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

ಜಿಲ್ಲಾದ್ಯಂತ ಶ್ರದ್ಧಾಂಜಲಿ, ಮೌನ ಮೆರವಣಿಗೆ: ಉಗ್ರರು ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿರುವ ಕೃತ್ಯಕ್ಕೆ ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ ಗುಡಿಬಂಡೆ, ಶಿಡ್ಲಘಟ್ಟ, ಚಿಂತಾಮಣಿ ತಾಲೂಕುಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹುತಾತ್ಮ ಯೋಧರಿಗೆ ಗೌರವ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದರು. ದೇಶದ ಸೈನಿಕರಿಗೆ ಆತ್ಮಸ್ಥೆರ್ಯವನ್ನು ತುಂಬವ ನಿಟ್ಟಿನಲ್ಲಿ ಹಿಂದೂಪರ ಸಂಘಟನೆಗಳ  ಕಾರ್ಯಕರ್ತರು ಹಾಗೂ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿ ಉಗ್ರರರ ದಾಳಿಯನ್ನು ಖಂಡಿಸಿ ಘೋಷಣೆ ಕೂಗಿದರು.

ಆರ್‌ಎಸ್‌ಎಸ್‌ನಿಂದ ಮೊಂಬತ್ತಿ ಮೆರವಣಿಗೆ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಸಂಜೆ ಉಗ್ರರ ದಾಳಿ ಖಂಡಿಸಿ ಶ್ರದ್ಧಾಂಜಲಿ ಸಲ್ಲಿಸಲು ನಗರದ ಟೌನ್‌ಹಾಲ್‌ ವೃತ್ತದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮೊಂಬತ್ತಿ ಬೆಳಗಿಸಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಗರದ ಬಜಾರ್‌ ರಸ್ತೆ, ಬಿಬಿ ರಸ್ತೆ, ಎಂಜಿ ರಸ್ತೆ, ಗಂಗಮ್ಮ ಗುಡಿ ರಸ್ತೆಯ ಮುಖಾಂತರ ಮೆರವಣಿಗೆ ನಡೆಸಲಾಯಿತು.
 
ಭಾರತ ನಕ್ಷೆಯಂತೆ ನಿಂತು ಶ್ರದ್ಧಾಂಜಲಿ: ನಗರದ ಹೊರ ವಲಯದ ಅಗಲಗುರ್ಕಿ ಬಿಜಿಎಸ್‌ ಶಾಲೆಯಲ್ಲಿ ಸಂಜೆ ಶಾಲೆಯ ನೂರಾರು ವಿದ್ಯಾರ್ಥಿಗಳು ಭಾರತದ ನಕ್ಷೆಯಂತೆ ನಿಂತು ಮೊಂಬತ್ತಿ ಬೆಳಗಿಸುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ನೂರಾರು ವಿದ್ಯಾರ್ಥಿಗಳು ಯೋಧರ ಸೇವೆಯನ್ನು ಸ್ಮರಿಸಿ ಘೋಷಣೆ ಕೂಗಿದರು. ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ.ಮೋಹನ್‌ ಕುಮಾರ್‌ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next