Advertisement

ಹೆಚ್ಚುವರಿ ಪ್ರವೇಶ ರದ್ದತಿಗೆ ಖಂಡನೆ

12:20 PM Sep 28, 2018 | |

ರಾಯಚೂರು: ವಸತಿ ನಿಲಯಗಳಿಗೆ ಪ್ರವೇಶ ಬಯಸಿ ಸಲ್ಲಿಕೆಯಾಗುವ ಹೆಚ್ಚುವರಿ ಅರ್ಜಿಗಳನ್ನು ತಿರಸ್ಕರಿಸುವಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಿಗೆ
ಪ್ರವೇಶ ಬಯಸಿ ಅರ್ಜಿ ಹಾಕುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು. ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶ ರದ್ದುಪಡಿಸಿರುವ ಸರ್ಕಾರದ ಆದೇಶ ಕೈಬಿಡಬೇಕು, ವಸತಿ ನಿಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ಸರ್ಕಾರ ಹೊರಡಿಸಿದ ಆದೇಶದಿಂದ ದುರ್ಬಲ ವರ್ಗಗಳಿಗೆ ಅನ್ಯಾಯವಾಗಲಿದೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಮಾರಕವಾದ ಸರ್ಕಾರದ ಈ ಸುತ್ತೋಲೆಯನ್ನು ಕೂಡಲೇ ರದ್ದುಪಡಿಸಬೇಕು. ಅಗತ್ಯಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಯಾದಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದಾದರೂ ವಸತಿ ವ್ಯವಸ್ಥೆ ಕಲ್ಪಿಸಬೇಕು. ವಸತಿ ನಿಲಯಗಳಿಗೆ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಬೇಕು. ಎಲ್ಲ ಯೋಜನೆಗಳನ್ನು ಜಾರಿಗೊಳಿಸುವ ಏಕಗವಾಕ್ಷಿ ಯೋಜನೆ ಜಾರಿಗೊಳಿಸಬೇಕು. ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿ ರದ್ದುಪಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಎಲ್ಲ ನಿಗಮ ಮಂಡಳಿಗಳಿಗೆ ಸಕಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ಸಾಲ ಮಂಜೂರು ಮಾಡಬೇಕು. ವಸತಿ ನಿಲಯಗಳ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು. ಕನಿಷ್ಠ ವೇತನ ಪಾವತಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಪರಶುರಾಮ ಅರೋಲಿ, ಚನ್ನಬಸವ ಯಕ್ಲಾಸಪುರು, ಬಸವರಾಜ ಸಂಕೇಶ್ವರ, ಚಿದಾನಂದ ಆರೋಲಿ, ವಿದ್ಯಾರ್ಥಿಗಳಾದ ಪ್ರಭುಲಿಂಗ ಮೇಗಳಮನಿ, ಶಿವಗೇನಿ ಕಪಗಲ್‌, ರಮೇಶ ಯರಮರಸ್‌, ಲಕ್ಷ್ಮಣ ಕುರ್ಡಿ, ಶಿವಾನಂದ ತಲೆಕಟ್ಟು, ಹುಚ್ಚಪ್ಪ ಹುಲಗುಂಚಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

 ಬಿಸಿಎಂ ಹಾಸ್ಟೆಲ್‌ ವಾರ್ಡನ್‌ವಿರುದ್ಧ ಕ್ರಮಕ್ಕೆ ಆಗ್ರಹ  
 ರಾಯಚೂರು: ನಗರದ ಸ್ಟೇಶನ್‌ ರಸ್ತೆಯ ಮೆಟ್ರಿಕ್‌ ನಂತರದ ಬಿಸಿಎಂ ಬಾಲಕರ ವಸತಿ ನಿಲಯದಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದನ್ನು ಪ್ರಶ್ನಿಸಿದರೆ ಮೇಲ್ವಿಚಾರಕರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವಸತಿ ನಿಲಯದ ವಿದ್ಯಾರ್ಥಿ ಮುಖಂಡ ಅಂಬರೀಶ ದೂರಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಸತಿ ನಿಲಯದಲ್ಲಿ ಶೌಚಾಲಯ, ಸ್ನಾನಗೃಹ, ವಿದ್ಯುತ್‌ ಸೌಲಭ್ಯಗಳಿಲ್ಲ. ಗ್ರಂಥಾಲಯ, ದಿನಪತ್ರಿಕೆ ಸೌಲಭ್ಯವಿಲ್ಲ. ಅಡುಗೆ ಕೂಡ ಅಶುದ್ಧ ನೀರಿನಿಂದಲೇ ತಯಾರಿಸುತ್ತಿದ್ದಾರೆ. ಸೂಕ್ತ ಬೆಡ್‌ಗಳ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಕಂಡ ಕಂಡಲ್ಲಿ ಮಲಗುತ್ತಾರೆ. ಈ ಕುರಿತು ವಸತಿ ನಿಲಯದ ಮೇಲ್ವಿಚಾರಕ ನರಸಿಂಹರರೆಡ್ಡಿಯನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಎಂ ವಸತಿ ನಿಲಯವು ಸಮಸ್ಯೆಗಳ ಆಗರವಾಗಿದೆ. ಕೇವಲ 100 ವಿದ್ಯಾರ್ಥಿಗಳಿಗೆ ಮಾತ್ರ ವಸತಿ ಕಲ್ಪಿಸಲು ಸಾಧ್ಯವಿದೆ. ಆದರೆ, ಇಲ್ಲಿ ಹೆಚ್ಚುವರಿಯಾಗಿ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಸತಿ ನೀಡಿದ್ದು, ಅಕ್ಷರಶಃ ಕುರಿ ದೊಡ್ಡಿಯಂತಾಗಿದೆ. ಒಂದೇ ಸ್ನಾನದ ಕೋಣೆಯಿದ್ದು, ಅಷ್ಟು ವಿದ್ಯಾರ್ಥಿಗಳು ಹೇಗೆ ಸ್ನಾನ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದು, ಮೂಲ ಸೌಲಭ್ಯ ಕಲ್ಪಿಸುವಂತೆ ಕೇಳಿದರೆ ನಮ್ಮ ಮೇಲೆಯೇ ಮೇಲ್ವಿಚಾರಕರು ದೌರ್ಜನ್ಯಕ್ಕೆ ಮುಂದಾಗುತ್ತಿದ್ದಾರೆ. ಈ ಬಗ್ಗೆ ಗೊತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಪಂಕಜಾ ಯಾವುದೇ ಕ್ರಮ ಕೈಗೊಳ್ಳದೇ ವಾರ್ಡನ್‌ ಗಳಿಗೆ ಸಹಕರಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ವಸತಿ ನಿಲಯದ ಒಳಗೆ ಮತ್ತು ಹೊರಗೆ ತ್ಯಾಜ್ಯ ಸಂಗ್ರಹಗೊಂಡಿದೆ. ಅದನ್ನು ಸ್ವತ್ಛಗೊಳಿಸದೆ ಮೇಲ್ವಿಚಾರಕರು ನಿರ್ಲಕ್ಷé ಧೋರಣೆ ಅನುಸರಿಸುತ್ತಿದ್ದಾರೆ. ಏನಾದರೂ ಪ್ರಶ್ನಿಸಿದರೆ ನೀನು ಜಾಸ್ತಿ ಮಾತನಾಡಿದರೆ, ಮುಂದೆ ಪರಿಣಾಮ ಚನ್ನಾಗಿರಲ್ಲ ಎಂದು ಬೆದರಿಕೆ ಹಾಕುತ್ತಾರೆ. ಅದರ ಜತೆಗೆ ದಿನಗೂಲಿ ಆಧಾರದಡಿ ದುಡಿಯುವ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಬಾಕಿ ವೇತನ ಪಾವತಿಸಬೇಕು. ಅವರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು. ಮೇಲ್ವಿಚಾರಕ ಹಾಗೂ ಇಲಾಖೆ ತಾಲೂಕು ಅಧಿಕಾರಿ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಅಂಬರೀಶ, ಚನ್ನಪ್ಪ, ಶ್ರೀಕಾಂತ ಸೇರಿ ವಸತಿ ನಿಲಯದ ವಿದ್ಯಾರ್ಥಿಗಳು,
ಅಡುಗೆ ಸಹಾಯಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next