Advertisement

ಹಾಡು ಕಟ್ಟಿದವರು ಕಂಪೆನಿ ಕಟ್ಟುತ್ತಾರೆ! ಇದು ಮ್ಯೂಸಿಕ್‌ ಬಜಾರು

02:54 PM May 12, 2017 | |

ಮ್ಯೂಸಿಕ್‌ ಬಜಾರ್‌ ಎಂಬ ಆಡಿಯೋ ಕಂಪೆನಿಯೊಂದನ್ನು ಹುಟ್ಟುಹಾಕಿದ್ದಾರೆ ಗೀತರಚನೆಕಾರ-ಸಂಗೀತ ನಿರ್ದೇಶಕ-ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್‌. ಗೀತರಚನೆಕಾರರಾಗಿ ಚಿತ್ರರಂಗಕ್ಕೆ ಬಂದ ಅವರು, ಇವತ್ತು ಆಡಿಯೋ ಕಂಪೆನಿಯೊಂದನ್ನು ಹುಟ್ಟುಹಾಕಿದ್ದರ ಹಿಂದೆ ಸಾಕಷ್ಟು ಪರಿಶ್ರಮ ಮತ್ತು ಸಾಧನೆ ಇದೆ. 

Advertisement

ನಾಗೇಂದ್ರ ಪ್ರಸಾದ್‌ ಆಡಿಯೋ ಕಂಪೆನಿಯೊಂದನ್ನು ಹುಟ್ಟುಹಾಕಿರುವುದು ಸಂತೋಷದ ವಿಷಯವಾದರೆ, ಅವರೇಕೆ ಈ ಕೆಲಸ ಮಾಡಬೇಕಾಯಿತು ಎಂಬ ಪ್ರಶ್ನೆಯೂ ಸಹಜವೇ. ಇದಕ್ಕೆ ಸಿಗುವ ಉತ್ತರ ರಾಯಲ್ಟಿ ವಾರ್‌. ರಾಯಲ್ಟಿ ವಿಷಯವಾಗಿ ಆಡಿಯೋ ಕಂಪೆನಿಗಳು ಮತ್ತು ತಂತ್ರಜ್ಞರ ನಡುವೆ ಹಲವು ವರ್ಷಗಳಿಂದ ಯುದ್ಧ ನಡೆಯುತ್ತಿರುವುದು ಗೊತ್ತೇ ಇದೆ. ಇದೇ ವಿಷಯವಾಗಿ ನಾಗೇಂದ್ರ ಪ್ರಸಾದ್‌, ತಾವೇ ಒಂದು ಆಡಿಯೋ ಕಂಪೆನಿಯನ್ನು ಹುಟ್ಟುಹಾಕುವುದಕ್ಕೆ ಮುಂದಾಗಬೇಕಾಯಿತು ಎನ್ನುವುದು ಸತ್ಯ. ಬರೀ ರಾಯಲ್ಟಿಯಷ್ಟೇ ಅಲ್ಲ, “ನಮಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ’ ಎಂಬ ಕಾರಣಕ್ಕೆ, ಕೆಲ ಸಂಗೀತ ನಿರ್ದೇಶಕರು ಹಾಗೂ ಗೀತೆರಚನೆಕಾರರು ಇದೀಗ ತಮ್ಮದೇ ಆಡಿಯೋ ಕಂಪೆನಿಗಳನ್ನು ಶುರು ಮಾಡಿದ್ದಾರೆ.

ಈ ಕುರಿತು ಮಾತನಾಡುವ ಗೀತೆರಚನೆಕಾರ ವಿ.ನಾಗೇಂದ್ರಪ್ರಸಾದ್‌, ರಾಯಲ್ಟಿ ಕುರಿತು ಕೊಟ್ಟ ಸ್ಪಷ್ಟನೆ ಇದು. “ಒಂದು ಸೈಟ್‌ ಖರೀದಿಸಿದವನೇ ಅದರ ಮಾಲೀಕ. ಆದರೆ, ಆಡಿಯೋ ಕಂಪೆನಿ ನಿರ್ಮಾಪಕನಿಂದ ಆಡಿಯೋ ಹಕ್ಕು ಪಡೆದುಬಿಟ್ಟರೆ ತನ್ನದೇ ಎಂದು ವರ್ತಿಸುತ್ತಿದೆ. ತಮಗೆ ಬೇಕಾದ್ದನ್ನು ಬರೆಸಿಕೊಂಡು ನಿರ್ಮಾಪಕನಿಗೆ ಹಕ್ಕು ಇಲ್ಲದಂತೆ ಮಾಡಿಬಿಡುತ್ತೆ. ನನ್ನ ಪ್ರಕಾರ ಸಾಂಸ್ಕೃತಿಕ ಸರಕುಗಳು ಮೂಲ ಕತೃಗೇ ಸಲ್ಲಬೇಕು. ಅದಕ್ಕೆ ಅವನೇ ಹಕ್ಕುದಾರ. ಆದರೆ, ಕೆಲ ಆಡಿಯೋ ಕಂಪೆನಿಗಳಿಂದ ತಪ್ಪುಗಳಾಗುತ್ತಿವೆ. “ಶಿವಪ್ಪ ಕಾಯೋ ತಂದೆ’ ಹಾಡನ್ನು ಯಾವುದೇ ಆಡಿಯೋ ಕಂಪೆನಿಯಲ್ಲಿ ಬಳಸಿಕೊಂಡರೆ, ಟಿವಿಯಲ್ಲಿ ಹಾಕಿದರೆ ಅದರಿಂದ ಬರುವ ಆದಾಯ ಆ ಮೂಲ ಕತೃಗೂ ಸೇರಬೇಕು. ಅದು ಸೃಜನಾತ್ಮಕ ಹಕ್ಕು.

ಆದರೆ, ಈಗ ಅದೆಲ್ಲಾ ಗಾಳಿಗೆ ತೂರಲಾಗುತ್ತಿದೆ. ಐಪಿಆರ್‌ಎಸ್‌ (ಇಂಡಿಯನ್‌ ಪರ್‌ಫಾರ್ಮಿಂಗ್‌ ರೈಟ್‌ ಸೊಸೈಟಿ) ಎಂಬ ಸಂಸ್ಥೆ ಇದೆ. ಅದು ಒಂದು ಹಾಡಿನ ಹಕ್ಕು ನಾಲ್ಕು ಜನರಿಗೆ ಸಿಗಬೇಕು ಎಂಬುದನ್ನು ನೋಡಿಕೊಳ್ಳುತ್ತಿದೆ. ಆದರೆ, ಕಂಪೆನಿಗಳು ಮಾತ್ರ ಎಲ್ಲೂ ರಾಯಲ್ಟಿಯ ಚಕಾರ ಎತ್ತುತ್ತಿಲ್ಲ. ಎಲ್ಲೋ ಒಂದು ಕಡೆ ಆಗುತ್ತಿರುವ ಅನ್ಯಾಯ ತಡೆಯಲು ನಾವುಗಳೇ ಶಕ್ತಿಯನುಸಾರ ಆಡಿಯೋ ಕಂಪೆನಿಗಳನ್ನು ಹುಟ್ಟು ಹಾಕುತ್ತಿದ್ದೇವೆ. ನಮ್ಮ ಸರ್ಕಲ್‌ನಲ್ಲೇ ಸುಮಾರು 40ಕ್ಕಿಂತಲೂ ಹೆಚ್ಚು ನುರಿತ ಸಂಗೀತ ನಿರ್ದೇಶಕರಿದ್ದಾರೆ, ಗೀತರಚನೆಕಾರರಿದ್ದಾರೆ. ಎಲ್ಲರಿಗೂ ಪಾರದರ್ಶಕವಾಗಿರಬೇಕೆಂಬ ಉದ್ದೇಶ ನಮ್ಮ “ಮ್ಯೂಸಿಕ್‌ ಬಜಾರ್‌’ ಆಡಿಯೋದ್ದು. ಹಾಗಂತ, ಬೇರೆ ಆಡಿಯೋ ಕಂಪೆನಿಗಳು ಪಾರದರ್ಶಕವಾಗಿವೆಯೇ ಇಲ್ಲವೇ ಎಂಬುದು ಗೊತ್ತಿಲ್ಲ.

ನಮ್ಮಲ್ಲಿ ಯಾವುದೇ ಸಿನಿಮಾ ಹಾಡುಗಳ ಹಕ್ಕು ಪಡೆದರೆ, ಹಾಡುಗಳು ಹೇಗೆ ಓಡುತ್ತಿವೆ, ಅದರಿಂದ ಎಷ್ಟು ಹಣ ಬಂದಿದೆ ಎಂಬಿತ್ಯಾದಿ ಮಾಹಿತಿ ಕೊಡುತ್ತೇವೆ. ತಂತ್ರಜ್ಞರ ಜತೆ ಸೇರಿ ನಾನೂ ಒಬ್ಬ ತಂತ್ರಜ್ಞನಾಗಿ ಆಡಿಯೋ ಕಂಪೆನಿ ಮಾಡಿದ್ದೇನೆ. ಇಲ್ಲಿ ನನ್ನ ಗೆಳೆಯರ ಗೀತೆಗಳಷ್ಟೇ ಅಲ್ಲ, ಬೇರೆ ಸಂಗೀತ ನಿರ್ದೇಶಕರ ಹಾಡುಗಳ ಹಕ್ಕು ಪಡೆದು, ಅವರಿಗೆ ಇಂಚಿಂಚು ಮಾಹಿತಿ ಕೊಡುವ ಕೆಲಸ ಇಲ್ಲಾಗಲಿದೆ. ಇದು ಹೊಸಬರಿಗೆ ಹಾಡುಗಳಿಂದ ಬರುವ ಲಾಭ, ನಷ್ಟದ ಕುರಿತು ತಿಳಿಸುವ ಹೊಸ ಪ್ರಯತ್ನವಷ್ಟೇ’ ಎಂಬುದು ನಾಗೇಂದ್ರ ಪ್ರಸಾದ್‌ ಮಾತು.

Advertisement

ಮ್ಯೂಸಿಕ್‌ ಬಜಾರ್‌ ಕಂಪೆನಿಯ ಅಜೆಂಡಾ ಕೂಡಾ ಇದೇಯಂತೆ. “ಯಾವುದೇ ಗೀತರಚನೆಕಾರ ಇರಲಿ, ಸಂಗೀತ ನಿರ್ದೇಶಕರೇ ಇರಲಿ ಅವರ ರಾಯಲ್ಟಿಯನ್ನು ಖಂಡಿತವಾಗಿ ಬರೆಸಿಕೊಳ್ಳುವುದಿಲ್ಲ. ಸೃಜನಶೀಲ ಬರಹಗಾರರು, ಸಂಗೀತ ನಿರ್ದೇಶಕರು ಮತ್ತು ನಿರ್ಮಾಪಕರಿಗೊಂದು ಹೊಸ ವೇದಿಕೆ ಇದು. ಅವರೆಲ್ಲರಿಗೂ ರಾಯಲ್ಟಿ ಸಿಗುವಂತೆ ಮಾಡುವುದು ನನ್ನ ಉದ್ದೇಶ. ಇದು ಹೆಗ್ಗಳಿಕೆ ಅಂತಲ್ಲ, ಅವರ ಹಣ ಪಡೆಯೋಕೆ ನಾನ್ಯಾರು? ಒಂದೆರೆಡು ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ನಿರ್ಮಾಪಕನಿಗೆ ಕೇವಲ ಇಪ್ಪತ್ತೋ, ಮುವತ್ತೋ ಸಾವಿರ ಕೊಟ್ಟು, ಆಡಿಯೋ ಹಕ್ಕು ಬರೆಸಿಕೊಳ್ಳುವ ಆಡಿಯೋ ಕಂಪೆನಿಗಳಿಂದ ಅವರಿಗೇನು ಲಾಭ? ಆ ಕಡೆ ರಾಯಲ್ಟಿಯೂ ಇಲ್ಲ, ಹಾಡುಗಳ ಹಕ್ಕೂ ಕೇಳಂಗಿಲ್ಲವೆಂದರೆ ಹೇಗೆ? ನಮ್ಮ ಕಂಪೆನಿ ಹಾಗಲ್ಲ, ಇಲ್ಲಿ ನೂರು ರುಪಾಯಿ ಬಂದರೆ, ನನಗೆ ಐವತ್ತು ರುಪಾಯಿ ಕೊಡಿ, ಉಳಿದರ್ಧ ನೀವಿಟ್ಟುಕೊಳ್ಳಿ ಎನ್ನುತ್ತೇನೆ. ಎಲ್ಲವೂ ನನಗೆ ಬೇಕಿಲ್ಲ. ರಾಯಲ್ಟಿಯನ್ನು ಯಾವುದೇ ಕಾರಣಕ್ಕೆ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ರಾಯಲ್ಟಿ ಕೇಳಿದರೆ, ನಿರ್ಮಾಪಕರು ನಿಮಗೆ ಸಂಭಾವನೆ ಕೊಟ್ಟಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತೆ. ನಿಜ, ರಾಯಲ್ಟಿಯನ್ನು ನಿರ್ಮಾಪಕರಿಗೆ ಕೊಡಿ. ಪಬ್ಲಿಸಿಟಿ ಮಾಡುವ ಸಂದರ್ಭದಲ್ಲಿ ಆ ಚಿತ್ರದ ಹಾಡಿನ ರಾಯಲ್ಟಿ ನಮಗೆ ಬೇಡ. 

ಆದರೆ, ಸಿನಿಮಾ ರಿಲೀಸ್‌ ಆದ ನಂತರ ಬರುವ ರಾಯಲ್ಟಿ ಕೊಡದಿದ್ದರೆ ಹೇಗೆ? ಈಗ ಡಿಜಿಟಲ್‌ ಮಾರ್ಕೆಟ್‌ ದೊಡ್ಡದಾಗಿ ಬೆಳೆದಿದೆಯಾದರೂ, ಅದರಿಂದಲೂ ಸಂಗೀತ ನಿರ್ದೇಶಕರಿಗಾಗಲಿ, ಗೀತೆರಚನೆಕಾರರಿಗಾಗಲಿ ರಾಯಲ್ಟಿ ಸಿಗುತ್ತಿಲ್ಲ. ಜುಟ್ಟು, ಜನಿವಾರ ಹಿಡಿದುಕೊಂಡು ನಿರ್ಮಾಪಕರಿಂದ ಎಲ್ಲವನ್ನೂ ಬರೆಸಿಕೊಂಡರೆ, ಅವರು ಯಾರ ಬಳಿ ಕೇಳಬೇಕು? ಅದು ಯಾವಾಗ ಸರಿ ಹೋಗುತ್ತೋ ಗೊತ್ತಿಲ್ಲ’ ಎನ್ನುತ್ತಾರೆ ನಾಗೇಂದ್ರ ಪ್ರಸಾದ್‌.

ಕಡೆಲೆಕಾಯಿ ಕಾಸು ಕೊಟ್ಟು ರೈಟ್ಸ್‌ ಪಡೆಯಬೇಡಿ!: ಗೀತೆರಚನೆಕಾರ ಕವಿರಾಜ್‌ ಹೇಳುವ ಪ್ರಕಾರ, “ಸದ್ಯದ ಮಟ್ಟಿಗೆ ಕಾಪಿರೈಟ್‌ ಆ್ಯಕ್ಟ್ ಕುರಿತ ಚರ್ಚೆಗೆ ಅವಕಾಶ ಇಲ್ಲ. ಯಾವುದು ಸರಿ, ಯಾವುದು ತಪ್ಪು ಅನ್ನೋದು ಎರಡನೇ ವಿಷಯ. ಈಗಾಗಲೇ ಸರ್ಕಾರ ಕಾನೂನು ಮಾಡಿದೆ. ಒಂದು ಹಾಡಿಗೆ ಬರುವ ರಾಯಲ್ಟಿ ನಾಲ್ಕು ಮಂದಿಗೆ ಸೇರಬೇಕು. ಆಡಿಯೋ ಕಂಪೆನಿ, ಸಂಗೀತ ನಿರ್ದೇಶಕ, ನಿರ್ಮಾಪಕ, ಗೀತೆರಚನೆಕಾರ ಈ ನಾಲ್ವರಿಗೆ ಸೇರಬೇಕೆಂಬ ಕಾನೂನೇ ಇದೆ. ಆದರೆ, ಕೆಲ ಆಡಿಯೋ ಕಂಪೆನಿಗಳು ಕಾನೂನಿಗೆ ಮಣ್ಣೆರೆಚಲು ಏನೇನೋ ತಂತ್ರ ರೂಪಿಸುತ್ತಿವೆ. ನಾವು ಅವರನ್ನು ಭಿಕ್ಷೆ ಬೇಡುತ್ತಿಲ್ಲ. ಕಾನೂನು ಪ್ರಕಾರ ಕೊಡಿ ಅಂತ ಕೇಳುತ್ತಿದ್ದೇವೆ. ಹೋಗಲಿ ಕಾನೂನು ಪಾಲಿಸಬೇಕಲ್ಲವೇ? ಆಡಿಯೋ ಕಂಪೆನಿಗಳು ಬುದ್ಧಿವಂತಿಕೆ ಪ್ರದರ್ಶಿಸುತ್ತವೆ. 

ನಿರ್ಮಾಪಕರ ಮೂಲಕ ಸಹಿ ಹಾಕಿಸಿಕೊಳ್ಳುತ್ತವೆ. ನಾಳೆ ಕೋರ್ಟ್‌ಗೆ ಹೋದರೆ, ಅಪರಾಧಿ ಸ್ಥಾನದಲ್ಲಿ ನಿರ್ಮಾಪಕ ನಿಲ್ಲಬೇಕೇ ಹೊರತು, ಆಡಿಯೋ ಕಂಪೆನಿಗಳಲ್ಲ. ನಿರ್ಮಾಪಕನಿಗೆ ಎಲ್ಲಾ ಕಡೆಯಿಂದಲೂ ಮೋಸ ಆಗುತ್ತಿದೆ. ಆಡಿಯೋ ಕಂಪೆನಿ ಸರಿಯಾದ ಹಣ ಕೊಟ್ಟು ಆಡಿಯೋ ಹಕ್ಕು ಪಡೆಯೋದಿಲ್ಲ. ಲಾಭ ಇಲ್ಲ, ನಷ್ಟ ಅನ್ನುವ ಅವರೇ ಮೇಲೆ ಬಿದ್ದು ಆಡಿಯೋ ಹಕ್ಕು ಪಡೆಯುತ್ತಿದ್ದಾರೆ. ಈಗ ಎಲ್ಲವೂ ಡಿಜಿಟಲ್‌ವುಯವಾಗಿದೆ. ಹೀಗಾಗಿ ಮಾರ್ಕೆಟ್‌ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. 

ಯು ಟ್ಯೂಬ್‌, ಕಾಲರ್‌ ಟ್ಯೂನ್‌ ಹೀಗೆ ಇನ್ನಿತರೆ ಮೂಲಗಳಿಂದ ಒಳ್ಳೇ ಆದಾಯವಿದೆ. ಆದರೆ, ನಿರ್ಮಾಪಕರಿಗೆ ಮಾತ್ರ, ಆಡಿಯೋದಿಂದ ಲಾಭವಿಲ್ಲ, ಅಂತ ಸಹಿ ಹಾಕಿಸಿಕೊಂಡು ಅವರ ಜುಟ್ಟು, ಜನಿವಾರ ಹಿಡಿದುಕೊಳ್ಳುತ್ತಾರೆ. ನಿರ್ಮಾಪಕರು ಕೊನೇ ಘಳಿಗೆಯಲ್ಲಿ ಹಣ ಖಾಲಿ ಮಾಡಿಕೊಂಡು, ಆಡಿಯೋ ರಿಲೀಸ್‌ ಆಗಿಬಟ್ಟರೆ ಸಾಕು ಎಂಬಂತೆ ನಮ್ಮ ಬಳಿ ಬಂದು ಸಹಿ ಮಾಡಿ ಅಂತ ಕೇಳಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮವರೇ ಆಡಿಯೋ ಕಂಪೆನಿ ಹುಟ್ಟುಹಾಕುತ್ತಿರುವುದು ಸ್ವಾಗತಾರ್ಹ. ಕೆಲ ಆಡಿಯೋ ಕಂಪೆನಿಗಳು ನಿಜ ಚಿತ್ರಣವನ್ನು ಬಿಟ್ಟುಕೊಡುತ್ತಿಲ್ಲ. ಮೊದಲು ಕಡೆಲೆಕಾಯಿ ಕಾಸು ಕೊಟ್ಟು ಆಡಿಯೋ ಹಕ್ಕು ಪಡೆಯುವುದು ನಿಲ್ಲಬೇಕು. ಇಲ್ಲವೇ, ಹಂಚಿಕೊಳ್ಳುವ ವ್ಯವಸ್ಥೆಯನ್ನು ತಂದು ಆ ಮೂಲಕ ವ್ಯಾಪಾರ ನಡೆಸಬೇಕು. ಈಗ ಡಿಜಿಟಲ್‌ ಮಾರ್ಕೆಟ್‌ ಬಂದ ಮೇಲೆ ವ್ಯಾಪಾರ ದುಪ್ಪಟ್ಟಾಗಿದೆ. ಮೊದಲು ಒಂದು ಕ್ಯಾಸೆಟ್‌ ಅಥವಾ ಸಿಡಿಗೆ 50 ರೂ. ಕೊಟ್ಟು ಖರೀದಿಸಿದರೆ ಆಡಿಯೋ ಕಂಪೆನಿಗೆ ಉಳಿಯೋದು ಕೇವಲ 10 ರೂ. ಮಾತ್ರ. ಆದರೆ, ಕಾಲರ್‌ಟ್ಯೂನ್‌ವೊಂದರಿಂದಲೇ ಸಾಕಷ್ಟು ಹಣ ಸಿಗುತ್ತೆ. ಇಲ್ಲಿ ಪಾರದರ್ಶಕತೆ ಇಲ್ಲ, ಹಂಚಿ ತಿನ್ನುವ ಗುಣವೂ ಇಲ್ಲ. ಸರ್ಕಾರ ಮಾಡಿರುವ ಕಾನೂನು ಪಾಲಿಸೋಕೆ ಹೊಟ್ಟೆ ನೋವೇಕೆ?’ ಎನ್ನುತ್ತಾರೆ ಕವಿರಾಜ್‌.

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next