ಅಜೆಕಾರು: ಸರಕಾರವು ಅಜಲು ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದರೂ ಸಹ ಕೆಲ ಧಾರ್ಮಿಕ ಕೇಂದ್ರಗಳಲ್ಲಿ ಇಂದಿಗೂ ದಲಿತರನ್ನು ಬಳಸಿ ಅಜಲು ಪದ್ಧತಿ ಜೀವಂತಯಿರಿಸಿಕೊಳ್ಳಲಾಗಿದೆ. ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣ ತೊಡೆದುಹಾಕುವಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಜನರು ಮನವಿ ಮಾಡಿದರು.
ಮರ್ಣೆ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸರಕಾರದ ಸವಲತ್ತುಗಳ ಮಾಹಿತಿ ಬಗ್ಗೆ ವಿಶೇಷ ಗ್ರಾಮಸಭೆಯು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಕುಮಾರ್ ವಹಿಸಿದ್ದರು. ಪ.ಜಾತಿ, ಪ.ಪಂಗಡದವರು ಹೈನುಗಾರಿಕೆ ಮಾಡಲು ಬ್ಯಾಂಕ್‌ನವರು ಸುಲಭ ರೀತಿಯಲ್ಲಿ ಹೈನುಗಾರಿಕಾ ಸಾಲ ಸಿಗುವಲ್ಲಿ ಸಹಕರಿಸಬೇಕು ಎಂದು ಸಮುದಾಯದವರು ಆಗ್ರಹಿಸಿದರು. ದಲಿತ ದೌರ್ಜನ್ಯವಾದಾಗ ಸಮುದಾಯದವರು ದೂರು ನೀಡಿದ ಸಂದರ್ಭ ಪೊಲೀಸ್ ಇಲಾಖೆ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತಹ ಕೇಸು ದಾಖಲಿಸುವಂತೆ ಆಗ್ರಹಿಸಿದರು.
ಸಮುದಾಯದ ಪರವಾಗಿ ಡಿ.ಕೆ. ರಮೇಶ್, ಶ್ಯಾಮ್ ನಾಯ್ಕ, ಕೃಷ್ಣ ನಾಯ್ಕ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿ ವಿಜಯ ಕುಮಾರ್, ನ್ಯಾಯವಾದಿ ಮಮತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಕಾರ್ತಿಕೇಶ್, ಎ.ಎಸ್.ಐ. ಬಾಲಕೃಷ್ಣ ಹೆಗ್ಡೆ, ತಾಲೂಕು ಪಂಚಾಯತ್ ಸದಸ್ಯ ಹರೀಶ್ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರಂದರ, ಪಂಚಾಯತ್ ಉಪಾಧ್ಯಕ್ಷೆ ಜ್ಯೋತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರಂದರ ಸ್ವಾಗತಿಸಿ, ವಂದಿಸಿದರು.