Advertisement

ಪ್ಲಾಸ್ಟಿಕ್‌ ವಿರುದ್ಧ ಶ್ರೀಸಾಮಾನ್ಯನ ಹೋರಾಟ

06:00 AM May 04, 2018 | |

ಹಂಸಲೇಖರ ಅನೇಕಲವ್ಯರ ಪೈಕಿ ಸಂಗೀತ ನಿರ್ದೇಶಕ ಇಂದ್ರಸೇನ ಅವರೂ ಒಬ್ಬರಂತೆ. ಹಾಗಾಗಿ ತಾವು ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಹಂಸಲೇಖ ಅವರಿಂದ ಬಿಡುಗಡೆ ಮಾಡಿಸಬೇಕು ಎಂಬುದು ಇಂದ್ರಸೇನರ 17 ವರ್ಷಗಳ ಕನಸಾಗಿತ್ತಂತೆ. ಆ ಕನಸು ನನಸಾಗಿದೆ. ಇಂದ್ರಸೇನ ಸಂಗೀತ ಸಂಯೋಜಿಸಿರುವ “ಶ್ರೀಸಾಮಾನ್ಯ’ ಚಿತ್ರದ ಹಾಡುಗಳನ್ನು ಹಂಸಲೇಖ ಬಿಡುಗಡೆ ಮಾಡುವ ಮೂಲಕ ಅವರ ಕನಸು ನನಸು ಮಾಡಿದ್ದಾರೆ.

Advertisement

ಅಂದಹಾಗೆ, “ಶ್ರೀಸಾಮಾನ್ಯ’ ಹಾಡುಗಳನ್ನು ಬಿಡುಗಡೆಯಾಗಿದ್ದು ಕಲಾವಿದರ ಸಂಘದ ನೂತನ ಕಟ್ಟಡದಲ್ಲಿ. ಹಂಸಲೇಖ ಬಿಟ್ಟರೆ ಇದ್ದ ಇನ್ನೊಬ್ಬ ಮುಖ್ಯ ಅತಿಥಿ ಎಂದರೆ ಅದು ಲಹರಿ ವೇಲು. ಮಿಕ್ಕಂತೆ ನಿರ್ದೇಶಕ ಗುಣವಂತ ಮಂಜು, ನಾಯಕಿ ಶಕ್ತಿ ಶೆಟ್ಟಿ, ನಿರ್ಮಾಪಕರಾದ ಭಾರತಿ ಎಂ ಸುರೇಶ್‌ ಮತ್ತು ಸುರೇಶ್‌, ಇಂದ್ರಸೇನ ಮುಂತಾದವರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆ ಮಾಡಲಾಯಿತು.

ನಿರ್ಮಾಪಕ ಸುರೇಶ್‌ಗೆ ಚಿತ್ರ ಮಾಡುವ ಯೋಚನೆ ಇರಲಿಲ್ಲವಂತೆ. ಆದರೆ, ಗುಣವಂತ ಮಂಜು ಹೇಳಿದ ಕಥೆ ಕೇಳಿ ಚಿತ್ರ ಮಾಡಬೇಕಂತನಿಸಿತಂತೆ. ಅಂತದ್ದೇನಿದೆ ಈ ಚಿತ್ರದಲ್ಲಿ ಎಂದರೆ, ಪರಿಸರ ಕಾಳಜಿ ಎಂಬ ಉತ್ತರ ಬರುತ್ತದೆ. “ಚಿತ್ರದಲ್ಲಿ ಪ್ಲಾಸ್ಟಿಕ್‌ ಮತ್ತು ಪರಿಸರದ ಬಗ್ಗೆ ಸಂದೇಶವಿದೆ. ಇವತ್ತು ಪ್ಲಾಸ್ಟಿಕ್‌ನಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿವೆ. ಅದೇ ರೀತಿ ಸಮಾರಂಭಗಳಲ್ಲಿ ಗಿಫ್ಟ್ ಕೊಡುವ ಬದಲು, ಹಾರ-ತುರಾಯಿ ಹಾಕುವ ಬದಲು ಒಂದು ಗಿಡ ಕೊಡಿ. ಸುಮ್ಮನೆ ದುಡ್ಡು ಖರ್ಚು ಮಾಡುವ ಬದಲು, ದಾನ-ಧರ್ಮ ಮಾಡಿದರೆ, ಆಗ ಪುಣ್ಯ ಸಿಗುತ್ತದೆ. ಇದು ನನ್ನ ಕಾಳಜಿ. ನನಗೆ ವೈಯಕ್ತಿವಾಗಿ ಎಲ್ಲರಿಗೂ ಸಂದೇಶ ಹೇಳುವುದು ಕಷ್ಟ. ಅದೇ ಕಾರಣಕ್ಕೆ “ಶ್ರೀಸಾಮಾನ್ಯ’ ಚಿತ್ರದ ಮೂಲಕ ಅಂಥದ್ದೊಂದು ಪ್ರಯತ್ನ ಮಾಡುತ್ತಿದ್ದೇನೆ. ಶ್ರೀಸಾಮಾನ್ಯ, ಅಸಮಾನ್ಯರಾದರೆ ಬದಲಾವಣೆ ಕಾಣಬಹುದು’ ಎಂದು ಹೇಳಿದರು. ನಿರ್ಮಾಪಕರು ಹೇಳಿದಂತೆ, ಅಂದು ಗಣ್ಯರಿಗೆ ಹಾರ-ತುರಾಯಿ ಯಾವುದೂ ಹಾಕಲಿಲ್ಲ. ಅದರ ಬದಲು ಗಿಡಗಳನ್ನು ಕೊಡಲಾಯ್ತು. ಅಷ್ಟೇ ಅಲ್ಲ, ಚಿತ್ರದ ಹಾಡುಗಳ ಸಿಡಿಗಳನ್ನು ಬಾಳೆಎಲೆಗಳಲ್ಲಿ ಪೊಟ್ಟಣ ಕಟ್ಟಲಾಗಿತ್ತು. ಬಾಳೆ ಎಲೆ ತೆಗೆಯುವ ಮೂಲಕ ಸಿಡಿಗಳನ್ನು ಬಿಡುಗಡೆ ಮಾಡಲಾಯಿತು. ಇನ್ನು ಹಂಸಲೇಖ ಅವರು ಶಿಳ್ಳೆ ಹೊಡೆಯುವುದರ ಮೂಲಕ ಟ್ರೇಲರ್‌ ತೋರಿಸುವುದಕ್ಕೆ ಅನುಮತಿ ಕೊಟ್ಟರು.

ಹಾಡುಗಳನ್ನು ಬಹಳ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಎಂದ ಹಂಸಲೇಖ, “ರೈತನಿಗೆ ಯೋಗಿ, ಸಾಮಾನ್ಯನಿಗೆ ಶ್ರೀಸಾಮಾನ್ಯ, ಕನ್ನಡಕ್ಕೆ ಕಲ್ಪವೃಕ್ಷ ಅಂತ ಹೇಳಿದವರು ಕುವೆಂಪು. ಶ್ರೀಸಾಮಾನ್ಯ ಎಂದರೆ ಸಾಮಾನ್ಯರಲ್ಲಿ ಮಾನ್ಯರಾದವರು ಅಂತ. ಸಿನಿಮಾ ಮಾಡಿ ಸಂದೇಶ ಕೊಡುವುದು ಹುಚ್ಚು ಸಾಹಸವೇ ಸರಿ. ಎಲ್ಲರೂ ದುಡ್ಡಿಗೆ ಸಿನಿಮಾ ಮಾಡಿದರೆ, ಆದರ್ಶಕ್ಕೆ ಸಿನಿಮಾ ಮಾಡೋರು ಯಾರು ಎಂಬ ಪ್ರಶ್ನೆ ಬರುವುದು ಸಹಜ. ಆದರ್ಶಕ್ಕೂ ಸಿನಿಮಾ ಮಾಡುವ ಜನರಿದ್ದಾರೆ. ಈ ಚಿತ್ರದಲ್ಲಿ ಪ್ಲಾಸ್ಟಿಕ್‌ ಬಿಡಿ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಬರೀ ಹೇಳಿದ್ದಷ್ಟೇ ಅಲ್ಲ, ಇಲ್ಲಿಂದಲೇ ಶುರು ಮಾಡಿದ್ದಾರೆ’ ಎಂದು ಹೇಳಿದರು.

ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಳ್ಳುವುದರ ಜೊತೆಗೆ ಗುಣವಂತ ನಿರ್ದೇಶಕ ಮತ್ತು ಹೃದಯವಂತ ನಿರ್ಮಾಪಕರು ಜೊತೆಯಾದಾಗ ಇದೊಂದು ಶ್ರೀಮಂತ ಚಿತ್ರವಾಗಿದೆ ಎಂದು ಹೇಳಿದರು. “ಈ ಕಾರ್ಯಕ್ರಮಕ್ಕೆ ಪ್ರಮುಖವಾಗಿ ಲತಾ ಹಂಸಲೇಖ ಅವರು ಬರಬೇಕಿತ್ತು. ಏಕೆಂದರೆ, ಈ ಚಿತ್ರದಲ್ಲಿ ಅವರು ಹಾಡಿರುವ 500ನೇ ಹಾಡು ಇದೆ. ಈ ಚಿತ್ರಕ್ಕಾಗಿ “ಗಿಡ ನೆಡಿ’ ಎಂಬ ಹಾಡನ್ನು ಹಾಡಿದ್ದಾರೆ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next