ಬೆಂಗಳೂರು: ಲಾಕ್‌ಡೌನ್ ಸೃಷ್ಟಿಸಿದ ಆರ್ಥಿಕ ಸಂಕಷ್ಟದಿಂದ ನಗರದಲ್ಲಿ ದುಬಾರಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಕೈಗೆಟಕುವ ಕಡಿಮೆ ಬಾಡಿಗೆ ಮನೆಗಳತ್ತ ಜನ ಮುಖಮಾಡುತ್ತಿದ್ದಾರೆ. ಹೌದು, ಕೋವಿಡ್ 19 ವೈರಸ್‌ನಿಂದ ಅನೇಕರ ಜೀವನ ಕ್ರಮ ಬದಲಾಗಿದೆ. ಕೋವಿಡ್ 19 ಪೂರ್ವದಲ್ಲಿದ್ದ ಕೆಲವೊಂದು ಬದ್ಧತೆ (ಕಮಿಟ್ಮೆಂಟ್)ಗಳನ್ನು ಜನ ಬದಲಾವಣೆ ಮಾಡಿಕೊಂಡಿದ್ದಾರೆ.
ವೇತನ ಕಡಿತ, ಕೆಲಸಕ್ಕೆ ಕತ್ತರಿ ಹಾಗೂ ಕತ್ತರಿಯ ಮುನ್ಸೂಚನೆಯಂತಹ ಸಮಸ್ಯೆಗಳು, ಈಗಾಗಲೇ ಇರುವ ಸಾಲದ ಹೊಣೆಗಾರಿಕೆಗಳಿಂದಾಗಿ ಕೆಲವರು ದುಬಾರಿ ವೆಚ್ಚಕ್ಕೆ ಸ್ವಯಂಪ್ರೇರಿತವಾಗಿ ಕಡಿವಾಣ ಹಾಕಿಕೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಚೆಗೆ ದುಬಾರಿ ಬಾಡಿಗೆ ಮನೆಗಳಿಂದ ಕಡಿಮೆ ಅಥವಾ ಸಾಮಾನ್ಯ ಬಾಡಿಗೆ ಮನೆಗಳಿಗೆ ಸದ್ದಿಲ್ಲದೆ ಶಿಫ್ಟ್ ಆಗುತ್ತಿರುವುದು ಕಂಡುಬರುತ್ತಿದೆ. ಮನೆ ಖಾಲಿ ಮಾಡುವುದರ ಜತೆಗೆ ಹೊಸ ಮನೆಯ ಹುಡುಕಾಟದಲ್ಲೂ ಅನೇಕರು ನಿರತರಾಗಿದ್ದಾರೆ.
ತಿಂಗಳಿಗೆ 10ರಿಂದ 20 ಸಾವಿರ ಮನೆ ಬಾಡಿಗೆ, ನೀರು ಮತ್ತು ವಿದ್ಯುತ್ ಬಿಲ್ ಪ್ರತ್ಯೇಕ ಪಾವತಿ ಹೀಗೆ 15ರಿಂದ 25 ಸಾವಿರ ರೂ.ವರೆಗೂ ಖರ್ಚು ಮಾಡುತ್ತಿದ್ದವರಲ್ಲಿ ಬಹುತೇಕರು 10-15 ಸಾವಿರ ರೂ.ಗಳಲ್ಲಿನ ಬಾಡಿಗೆಯ ಮನೆಗಳನ್ನು ಹುಡುಕುತ್ತಿದ್ದಾರೆ. ಎರಡು ಮೂರು ಕೊಠಡಿಗಳ ಸೌಲಭ್ಯವಿದ್ದ ಮನೆಯಿಂದ ಒಂದು ಅಥವಾ ಎರಡು ಕೊಠಡಿಗಳಿರುವ ಮನೆಗಳಿಗೆ ಬೇಡಿಕೆ ಕಂಡುಬರುತ್ತಿದೆ. ಅದೇ ರೀತಿ, ಪ್ರತಿಷ್ಠಿತ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದವರು, ಮಧ್ಯಮವರ್ಗ ಹೆಚ್ಚಿರುವ ಬಡಾವಣೆಗಳತ್ತ ಮುಖಮಾಡುತ್ತಿದ್ದಾರೆ.
ಬಾಡಿಗೆ ನೀಡಿಲ್ಲ: ಮಾರ್ಚ್‌ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಅನೇಕರು ರಾಜಧಾನಿ ಬಿಟ್ಟು ಸ್ವಂತ ಊರಿಗೆ ತೆರಳಿದ್ದರು. ಬಹುತೇಕರು ಇನ್ನೂ ವಾಪಸ್ ಆಗಿಲ್ಲ. ಏಪ್ರಿಲ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ ಮನೆ ಬಾಡಿಗೆ ಕೂಡ ಬಂದಿಲ್ಲ. ಅನೇಕ ಬಾರಿ ಕರೆ ಮಾಡಿ ಕೇಳಿದ್ದರೂ ವಾಪಸ್ ಆದ ನಂತರ ನೀಡುತ್ತೇವೆ ಎನ್ನುತ್ತಿದ್ದಾರೆ. ಮನೆ ಬಾಡಿಗೆಯನ್ನೇ ಆಧರಿಸಿ ಜೀವನ ನಡೆಸುತ್ತಿದ್ದೆವು. 11 ಮನೆ ಬಾಡಿಗೆ ಬಂದಿಲ್ಲ, 6 ಮನೆ ಅರ್ಧ ಬಾಡಿಗೆ ಬಂದಿದೆ. ಹೀಗಾಗಿ ಯಾರಿಗೆ ಹೇಳಬೇಕು ಅಥವಾ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಮಲ್ಲೇಶ್ಚರದ ಮನೆ ಮಾಲೀಕರಾದ ಉಮಾಮಹೇಶ್ ಹೇಳಿದರು.
ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳ ವೇತನ ಕಡಿತ ಮಾಡಿದ್ದಾರೆ. ಹೀಗಾಗಿ ಮನೆ ಬಾಡಿಗೆಯನ್ನು ಕಡಿಮೆ ಮಾಡಿ ಎಂದರೆ ಮಾಲೀಕರು ಕೇಳುವುದಿಲ್ಲ. ಆದ್ದರಿಂದ ನಾವೇ ನಮ್ಮ ಈಗಿನ ಬಜೆಟ್ ಗೆ ಹೊಂದಿಕೊಳ್ಳುವ ಬಾಡಿಗೆ ಮನೆ ಹುಡುಕಲು ಆರಂಭಿಸಿದ್ದೇವೆ. ಆದರೆ, ಮನೆ ಬಾಡಿಗೆಗೆ ಸೇರುವಾಗ ನೀಡಿದ್ದ ಭದ್ರತಾ ಠೇವಣಿ ಹಣವನ್ನು ನೀಡಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಈಗ ಪರಿಸ್ಥಿತಿ ಸರಿಯಿಲ್ಲ ಏಕಾಏಕಿ ಮನೆ ಖಾಲಿ ಮಾಡಿದರೆ ಪಾವತಿ ಮಾಡುವುದು ಹೇಗೆ ಎನ್ನುತ್ತಿದ್ದಾರೆ. “ಆದರೆ, ದುಬಾರಿ ಮನೆ ಬಾಡಿಗೆ ನೀಡುವುದು ನಮಗೆ ಈಗಿರುವ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ’ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ಕಿರಣ್ ಮಾಹಿತಿ ನೀಡಿದರು.
ಆನ್‌ಲೈನ್‌ನಲ್ಲಿ ಮನೆ ಹುಡುಕಾಟ: ನೋ ಬ್ರೋಕರ್ ಡಾಟ್‌ಕಾಮ್, 99 ಎಕರ್ ಮೊದಲಾದ ಆನ್‌ಲೈನ್ ತಾಣಗಳ ಮೂಲಕ ಮನೆ ಹುಡುಕಾಟ ಕಾರ್ಯವನ್ನು ಅನೇಕರು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣ ಗಳಲ್ಲಿ ಈ ವೆಬ್‌ಸೈಟ್‌ಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ತಮಗೆ ಬೇಕಾದ ಮನೆಗಳನ್ನು ಆನ್‌ಲೈನ್ ಮೂಲಕ ಆಯ್ಕೆ ಮಾಡಿಕೊಂಡು, ನಂತರ ಅದನ್ನು ಖುದ್ದು ಪರಿಶೀಲಿಸಿ, ಮೆಚ್ಚುಗೆಯಾದರೆ ಮನೆ ಬದಲಾವಣೆ ಮಾಡುವ ಮನಃಸ್ಥಿತಿಯಲ್ಲಿ ಅನೇಕರಿದ್ದಾರೆ. ಆದರೆ, ಸದ್ಯದ ಸ್ಥಿತಿಯಲ್ಲಿ ಮನೆ ಬದಲಾವಣೆಗೆ ಹಣಕಾಸಿನ ಸಮಸ್ಯೆಯೂ ಎದುರಾಗುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ.
ಊರಿಂದಲೇ ವರ್ಕ್ ಫ್ರಂ ಹೋಂ: ಅನೇಕರು ರಾಜಧಾನಿ ಬಿಟ್ಟು ಊರಿಗೆ ಹೋಗಿದ್ದಾರೆ. ಐಟಿ-ಬಿಟಿ ಸೇರಿದಂತೆ ಹಲವಾರು ಕಂಪೆನಿಗಳು ವರ್ಕ್ ಫ್ರಂ ಹೋಂಗೆ ಒಪ್ಪಿಗೆ ನೀಡಿವೆ. ಕೆಲವೊಂದು ಸಂಸ್ಥೆಗಳು ಶೇಕಡಾವಾರು ಪ್ರಮಾಣ ಆಧರಿಸಿ ಮನೆಯಿಂದಲೇ ಕೆಲಸ ಮಾಡಲು ಅನುಮತಿ ಕಲ್ಪಿಸಿವೆ. ಹೀಗಾಗಿ, ಹಳ್ಳಿಗೆ ಹೋಗಿರುವ ಅನೇಕರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದವರಲ್ಲಿ ಹಲವರು ತಾತ್ಕಾಲಿಕವಾಗಿ ಊರಿಂದಲೇ ಕೆಲಸ ಮಾಡುವ ಒಪ್ಪಿಗೆಯನ್ನು ಪಡೆದು, ಬಾಡಿಗೆ ಮನೆ ಖಾಲಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
* ರಾಜು ಖಾರ್ವಿ ಕೊಡೇರಿ