ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಶಿಕ್ಷಣ ಕ್ಷೇತ್ರ ಸಂಪೂರ್ಣ ವ್ಯಾಪಾರೀಕರಣವಾಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಕಲಮರಳ್ಳಿ ವಿಷಾದಿಸಿದ್ದಾರೆ.
ಜಯನಗರ ಎ ಬ್ಲಾಕ್‌ನ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಹಂತದವರೆಗೆ ದಟ್ಟ ವ್ಯಾಪಾರೀಕರಣದ ನೇರ ಪರಿಣಾಮ ಬಡವರು, ಮಧ್ಯಮ ವರ್ಗದವರ ಮೇಲೆ ಆಗುತ್ತಿದೆ. ಶಿಕ್ಷಣ ಹಣ ಇದ್ದವರಿಗೆ ಎಂಬ ಭಾವನೆ ಪ್ರಬಲವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿನ ವಾತಾವರಣದಲ್ಲಿ ಆರ್ಥಿಕ, ಸಾಮಾಜಿಕ ಶೋಷಣೆ ಇಲ್ಲದ ಸಾರ್ವಜನಿಕರು ಮತ್ತು ವಿದ್ಯಾರ್ಥಿಸ್ನೇಹಿ ವಿದ್ಯಾಸಂಸ್ಥೆ, ಶಾಲೆಗಳ ಅವಶ್ಯಕತೆ ಇದೆ. ಅಂತಹ ಆಶಯದೊಂದಿಗೆ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಪ್ರತಿಯೊಬ್ಬರಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ದೊರೆಯಬೇಕು. ಬೀದಿ ಮಕ್ಕಳು ಬೆಳದ್ವೋ… ಕೋಣೆ ಮಕ್ಕಳು ಕೊಳತ್ವೋ… ಎನ್ನುವ ನಾಣ್ಣುಡಿಯಂತೆ ಮಕ್ಕಳಿಗೆ ಸಂಸ್ಕಾರ ಕಲಿಸದೇ ಹೋದರೆ ಎಷ್ಟೇ ವಿದ್ಯೆ ಕಲಿಸಿದರೂ ವ್ಯರ್ಥ ಎಂದು ಎಚ್ಚರಿಸಿದರು.
ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಪ್ರಾಚಾರ್ಯ ಎಚ್.ಕೆ. ಲಿಂಗರಾಜ್ ಮಾತನಾಡಿ, ಹಿಂದೊಮ್ಮೆ ಮ್ಯಾಂಚೆಸ್ಟರ್ ಸಿಟಿ… ಎಂದೇ ಕರೆಯಲ್ಪಡುತ್ತಿದ್ದ ದಾವಣಗೆರೆ ಈಗಿನ ಕರ್ನಾಟಕದ ಕೇಂಬ್ರಿಡ್ಜ್… ಎಂಬ ಖ್ಯಾತಿಗೆ ಅನೇಕ ವಿದ್ಯಾಸಂಸ್ಥೆಗಳು ಕಾರಣ. ವಿದ್ಯೆ ಎನ್ನುವುದು ಸದಾ ಸಾಧಕನ ಸ್ವತ್ತು ಹೊರತು ಸೋಮಾರಿಗಳದ್ದಲ್ಲ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಸತತ ಪರಿಶ್ರಮದಿಂದ ಪ್ರತಿಭಾವಂತರಾಗಬೇಕು. ವಿದ್ಯೆಯ ಜೊತೆಗೆ ಮಾನವೀಯ ಮೌಲ್ಯ ಪಾಲಿಸುವಂತಾಗಬೇಕು ಎಂದು ಆಶಿಸಿದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ, ಪಿಯು ಶಿಕ್ಷಣ ಮಂಡಳಿ ನಿವೃತ್ತ ಉಪ ನಿರ್ದೇಶಕ ಎನ್. ರುದ್ರಮುನಿ ಅಧ್ಯಕ್ಷತೆ ವಹಿಸಿದ್ದರು. ಎ. ವೀರಭದ್ರಪ್ಪ, ಮುಖ್ಯ ಶಿಕ್ಷಕಿ ಆರ್. ಮೀನಾಕ್ಷಿ ಇತರರು ಇದ್ದರು. ಅನುಪಮ ಸ್ವಾಗತಿಸಿದರು. ದಿವ್ಯಾ ನಿರೂಪಿಸಿದರು.