Advertisement

ಏ.1ಕ್ಕೆ ಮದರಂಗಿ ಕೃಷ್ಣ ಮತ್ತೂಂದು ಸಿನಿಮಾ ರಿಲೀಸ್‌

10:33 AM Mar 14, 2022 | Team Udayavani |

ಪ್ರೀತಿ ಎನ್ನುವುದು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ, ಯಾವಾಗ ಬೇಕಾದರೂ ಶುರುವಾಗಬಹುದು. ಪ್ರೀತಿ ಹುಟ್ಟಲು ಸಮಯ, ಸ್ಥಳ, ಹೊತ್ತು -ಗೊತ್ತು ಯಾವುದೂ ಇರುವುದಿಲ್ಲ. ಹಾಗೇ ಪ್ರೀತಿ ಅನ್ನೋದು ಬಸ್ಸು, ಕಾರು, ಟ್ರೈನು, ಫ್ಲೈಟಿನಲ್ಲೂ ಕೂಡ ಹುಟ್ಟಬಹುದು. ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಚಿತ್ರತಂಡ ಟ್ರೈನ್‌ನಲ್ಲಿ ಶುರುವಾದ ಪ್ರೇಮಕಥೆಯನ್ನು ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ ಆ ಚಿತ್ರದ ಹೆಸರು “ಲೋಕಲ್‌ ಟ್ರೈನ್‌’.

Advertisement

ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬರುವ ಟ್ರೈನ್‌ ಒಂದರಲ್ಲಿ ಶುರುವಾದ ಲವ್‌ ಸ್ಟೋರಿ ಮತ್ತು “ಲೋಕನ್‌ ಟ್ರೈನ್‌’ ಸುತ್ತ ಈ ಚಿತ್ರದ ಕಥೆ ನಡೆಯಲಿದೆ. ಹಾಗಾಗಿ ಚಿತ್ರಕ್ಕೆ “ಲೋಕಲ್‌ ಟ್ರೈನ್‌’ ಎಂದು ಟೈಟಲ್‌ ಇಡಲಾಗಿದೆ ಎನ್ನುತ್ತದೆ ಚಿತ್ರತಂಡ.

“ಲೋಕಲ್‌ ಟ್ರೈನ್‌’ ಚಿತ್ರದಲ್ಲಿ ಮದರಂಗಿ ಕೃಷ್ಣ ನಾಯಕನಾಗಿ ಕಾಣಿಸಿಕೊಂಡಿದ್ದು, ಎಸ್ತಾರ್‌ ನರೋನಾ, ಮೀನಾ ದೀಕ್ಷಿತ್‌ ನಾಯಕಿಯರಾಗಿ ಕಾಣಿಸಿ ಕೊಂಡಿದ್ದಾರೆ.

ಉಳಿದಂತೆ ಖಳನಾಯಕನಾಗಿ ಭಜರಂಗಿ ಲೋಕಿ, ಕಾಮಿಡಿ ಕಮಾಲ್‌ ಮಾಡಲು ಟೆನ್ನಿಸ್‌ ಕೃಷ್ಣ, ಸಾಧುಕೋಕಿಲ, ಸೆಂಟಿಮೆಂಟ್‌ಗಾಗಿ ಸುಚೇಂದ್ರಪ್ರಸಾದ್‌, ಗುರುದತ್‌ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರುದ್ರಮುನಿ ವೈ.ಎನ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಶುರುವಾದ ಈ ಚಿತ್ರ, ಕೆಲವು ತಾಂತ್ರಿಕ ಕಾರಣಗಳಿಂದ ತೆರೆಗೆ ಬರಲು ವಿಳಂಬವಾಗಿದ್ದು, ಇದೇ ಏ. 1ಕ್ಕೆ ಚಿತ್ರವನ್ನು ರಿಲೀಸ್‌ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಟ್ರೈನ್‌ ಒಂದರಲ್ಲಿ ಶುರುವಾಗಿ, ಅದರ ಸುತ್ತ ನಡೆಯುವ ಪ್ರೇಮಕಥೆಯೇ ಈ ಚಿತ್ರದ ಹೈಲೈಟ್‌. ಹಳ್ಳಿಯೊಂದರಿಂದ ಬೆಂಗಳೂರಿಗೆ ಬರುವ ಸ್ಥಳೀಯ ಟ್ರೆçನ್‌ನಲ್ಲಿ ಪ್ರತಿದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಇದೇ ವೇಳೆ ಟ್ರೈನ್‌ನಲ್ಲಿ ಹುಟ್ಟುವ ನವಿರಾದ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಇದನ್ನೆ ಆಧಾರವಾಗಿಟ್ಟುಕೊಂಡು, ಅದರಲ್ಲಿ ಬರುವ ಹಲವು ಸನ್ನಿವೇಶಗಳೊಂದಿಗೆ ಚಿತ್ರವನ್ನು ತೆರೆಗೆ ತಂದಿದ್ದೇವೆ’ ಎಂದು ವಿವರಣೆ ನೀಡುತ್ತದೆ.

ಇದನ್ನೂ ಓದಿ:ಆರ್‌ಆರ್‌ಆರ್‌ ಪ್ರೀ ರಿಲೀಸ್‌ ಇವೆಂಟ್‌ಗೆ ಸಿದ್ಧತೆ; ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಸಮಾರಂಭ

ಚಿತ್ರದ ಐದು ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆಯಿದ್ದು, ಜಯಂತ್‌ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಹಿರಿಯ ನೃತ್ಯ ನಿರ್ದೇಶಕರಾದ ಚಿನ್ನಿಪ್ರಕಾಶ್‌, ರಾಜುಸುಂದರ್‌ ಮತ್ತು ಗಣೇಶ್‌ ಈ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಈ ಪೈಕಿ ಒಂದು ಹಾಡಿನಲ್ಲಿ ಸುಮಾರು 200ಕ್ಕೂ ಹೆಚ್ಚು ನೃತ್ಯ ಕಲಾವಿದರು ಹೆಜ್ಜೆ ಹಾಕಿದು, ಅದ್ದೂರಿ ಏಳು ಸೆಟ್‌ಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆಯಂತೆ.

ಇನ್ನು “ಲೋಕಲ್‌ ಟ್ರೈನ್‌’ ಚಿತ್ರಕ್ಕೆ ರಮೇಶ ಬಾಬು ಛಾಯಾಗ್ರಹಣ, ಕೆ.ಎಂ ಸೌಂದರ್‌ ರಾಜು ಸಂಕಲನ ಕಾರ್ಯವಿದೆ. ಈಶ್ವರಿ ಕುಮಾರ್‌ ಕಲೆ, ಮಾಸ್‌ಮಾದ ಸಾಹಸ ನಿರ್ದೇಶನವಿದೆ. ಕುಮುಟ ಮೂಲದ ಸುಬ್ರಾಯ ವಾಳ್ಕೆ “ಸಂಜನಾ ಸಿನಿ ಆರ್ಟ್ಸ್’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಒಟ್ಟಾರೆ ಇತ್ತೀಚೆಗಷ್ಟೇ “ಲವ್‌ ಮಾಕ್ಟೇಲ್‌-2′ ಮೂಲಕ ವರ್ಷದ ಮೊದಲ ಹಿಟ್‌ ಸಿನಿಮಾ ಕೊಟ್ಟಿರುವ ಮದರಂಗಿ ಕೃಷ್ಣ, ಈಗ “ಲೋಕಲ್‌ ಟ್ರೈನ್‌’ ಮೂಲಕ ಮತ್ತೂಮ್ಮೆ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next