ಗುಳೇದಗುಡ್ಡ: ಸ್ವಾಮಿಗಳು ಅಂದರೆ ಮಠದ ಮಾಲೀಕ ಅಲ್ಲ ಮಠದ ನಿಷ್ಠಾವಂತ ಸೇವಕ ಎಂದು ಗಿರಿಸಾಗರದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಶ್ರೀ ಅಮರೇಶ್ವರ ಮಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಶ್ರೀ ಅಮರೇಶ್ವರ ಮಹಾಸ್ವಾಮಿಗಳ 54ನೇ ಪುಣ್ಮಸ್ಮರಣೆ, ಕಾಶಿ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ಅಮೃತ ಮಹೋತ್ಸವ ಕಾರ್ಯಕ್ರಮ, ಶ್ರೀ ಮಠದ ಡಾ| ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ, ನೂತನ ಶ್ರೀಮಠದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮನ್ನು ಸರಿಯಾಗಿ ದಾರಿಗೆ ನಡೆಸುವ, ನಮ್ಮ ಬುದ್ಧಿ ಬೆಳೆಸುವ, ಸಂಸ್ಕರಿಸುವ ಶ್ರೇಷ್ಠ ಗುರುಗಳು ಇಂದು ಅವಶ್ಯವಿದೆ ಎಂದು ಹೇಳಿದರು.
ಸಿದ್ಧಾಂತ ಶಿಖಾಮಣಿ ವ್ಯಕ್ತಿಯ ಬದುಕು ಬೆಳಗುವ ಗ್ರಂಥವಾಗಿದೆ. ಹಿಂದಿ, ಅರಬ್ಬಿ ಭಾಷೆ ಸೇರಿದಂತೆ 18 ಭಾಷೆಗಳಲ್ಲಿ ಸಿದ್ಧಾಂತ ಶಿಖಾಮಣಿ ರಚಿಸಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು. ಬಿಲ್‌ಕೆರೂರ ಬಿಲ್ವಾಶ್ರಮದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂ| ಅಮರೇಶ್ವರ ಮಹಾಸ್ವಾಮಿಗಳು ಭವರೋಗ ನಿವಾರಕರಾಗಿದ್ದರು. ಕಾಶಿ ಪೀಠಕ್ಕೆ ಜ್ಞಾನದ
ಸಂಪತ್ತು ಡಾ|ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರನ್ನು ಕೊಟ್ಟು ಮಠದ ಹೆಸರನ್ನು ಜಗತ್ತಿಗೆ ತಿಳಿಸಿಕೊಟ್ಟಿದೆ ಎಂದರು.
ಜೆಎಸ್‌ಎಸ್ ಕಾಲೇಜಿನ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೊರಬದ ಮಾತನಾಡಿ, ಕಾಶಿ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅನರ್ಘ ರತ್ನವಾಗಿದ್ದಾರೆ. ಅಪಾರ ಜ್ಞಾನ ಸಂಪತ್ತು ಹೊಂದಿದ್ದಾರೆ. ಕಾಶಿ ಪೀಠಕ್ಕೆ ಜಗದ್ಗುರುಗಳಾಗಿ ನಮ್ಮ ಊರು, ನಮ್ಮ ಜಿಲ್ಲೆಯನ್ನು ವಿಶ್ವಮಠಕ್ಕೆ ಪರಿಚಯಿಸಿದ್ದಾರೆ ಎಂದರು.
Related Articles
ಕೋಟೆಕಲ್-ಕಮತಗಿ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶ್ರೀಮಠದ ಡಾ| ನೀಲಕಂಠ ಶಿವಾಚಾರ್ಯ ಮಹಾ ಸ್ವಾಮಿಗಳು, ಮಸ್ಕಿ ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ಧಲಿಂಗ ದೇವರು, ಶಿವಾನಂದ ದೇವರು ಸಾನಿಧ್ಯ ವಹಿಸಿದ್ದರು.
ಡಾ|ಪರಮೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ಶಿಕ್ಷಕ ಶಂಕರ ಮುಂದಿನಮನಿ, ಬಸವರಾಜ ಸಿಂದಗಿಮಠ,
ಚಿದಾನಂದ ಕಾಟವಾ ಅವರಿಂದ ಸಂಗೀತ ಸುಧೆ ನಡೆಯಿತು. ಎಸ್.ಎಮ್.ಪಾಟೀಲ, ಘನಶ್ಯಾಮದಾಸ ರಾಠಿ, ಮಾಗುಂಡಪ್ಪ ಸುಂಕದ, ಮಲ್ಲಿಕಾರ್ಜುನ ತಾಂಡೂರ, ಪ್ರಭು ಮೊರಬದ, ರಂಗಪ್ಪ ಜಾನಮಟ್ಟಿ, ಬಸವರಾಜ ತಾಂಡೂರ ಸೇರಿದಂತೆ ಇತರರು ಇದ್ದರು. ವಿ.ಎಸ್.ಹಿರೇಮಠ, ದ್ರಾಕ್ಷಾಯಿಣಿ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.
ನೀಲಕಂಠ ಶ್ರೀ ಕ್ರಿಯಾಶೀಲರು ಅಮರೇಶ್ವರ ಮಠದ ಶ್ರೀ ನೀಲಕಂಠ ಸ್ವಾಮಿಗಳು ಕ್ರಿಯಾಶೀಲರಾಗಿದ್ದಾರೆ. ಈ ಮಠಕ್ಕೆ ಆದಾಯವಿಲ್ಲ. ಆದರೂ ಹೋರಾಟ ಮಾಡಿ, ಬಹಳ ಶ್ರಮಪಟ್ಟು ಸುಂದರವಾದ ಮಠ ನಿರ್ಮಿಸಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಕೆರೂರು ಚರಂತಿಮಠದ ಡಾ| ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.