ಅಂತೂ ಇಂತೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸಬೇಕೋ ಬೇಡವೋ ಎಂಬ ತೀರ್ಮಾನ, ಜೂನ್ 16 ಕ್ಕೆ ಹೊರ ಬೀಳಲಿದೆ. ಈ ಕುರಿತಂತೆ ಶುಕ್ರವಾರ ನಡೆದ ಧರಣಿ ಹಾಗೂ ಸಭೆಯಲ್ಲಿ ಸ್ವತಃ ಅಧ್ಯಕ್ಷರೇ, ಜೂನ್ 16 ರಂದು ಸರ್ವಸದಸ್ಯರ ಸಭೆ ಕರೆದು, ಅಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂಬುದಾಗಿ ಹೇಳಿದ್ದಾರೆ. ಹಾಗಾದರೆ, ಧರಣಿ ಹಾಗೂ ಸಭೆಯಲ್ಲಿ ನಡೆದದ್ದೇನು ಎಂಬ ಸಣ್ಣ ವರದಿ ಇದು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದ ಆಡಳಿತ ಮಂಡಳಿಯನ್ನು, ಮುಂದಿನ ಒಂದು ವರ್ಷದ ಕಾಲ ಮುಂದುವರೆಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಮಂಡಳಿ ಎದುರು ಧರಣಿ ನಡೆಸಲಾಯಿತು. ಇದೇ ವೇಳೆ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು, ಅನೇಕ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಇನ್ನೊಂದು ಅವಧಿಗೆ ನೀವೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕು ಎಂದು ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಮನವಿ ಪತ್ರವೊಂದನ್ನೂ ಸಲ್ಲಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಡಳಿಯಲ್ಲಿ ಸಭೆಯೊಂದನ್ನು ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, “ಸಾ.ರಾ.ಗೋವಿಂದು ಅವರು ಸಮರ್ಥ ಆಡಳಿತ ನೀಡಿದ್ದಾರೆ. ಯಾವುದೇ ಸಮಯಲ್ಲೂ ಚಿತ್ರರಂಗದ ಹಲವು ಸಮಸ್ಯೆಗಳನ್ನ ಸರಿಯಾದ ರೀತಿಯಲ್ಲಿ ಪರಿಹರಿಸಿದ್ದಾರೆ. ಅವರಂತಹ ನಾಯಕರು ನಮ್ಮ ಮಂಡಳಿ ಅಧ್ಯಕ್ಷರಾಗಿ ಇನ್ನೊಂದು ಅವಧಿಗೆ ಮುಂದುವರೆಯಲೇಬೇಕು. ಹೀಗಾಗಿ ಅವರು ನಮ್ಮ ಮನವಿಯನ್ನು ಆಲಿಸಿ, ಚುನಾವಣೆ ಮುಂದೂಡಬೇಕು ಎಂದರು.
ಇದೇ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರ ಮನವಿ ಸ್ವೀಕರಿಸಿ ಮಾತನಾಡಿದ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ನನಗೆ ಅಧಿಕಾರದ ವ್ಯಾಮೋಹ ಇಲ್ಲ. ನಾನು ಕಳೆದ ಕಾರ್ಯಕಾರಿ ಸಮಿತಿಯಲ್ಲೇ ಚುನಾವಣೆ ಪ್ರಸ್ತಾಪ ಮುಂದಿಟ್ಟಿದ್ದೆ. ಆದರೆ, ಸಭೆಯಲ್ಲಿ ಎಲ್ಲರೂ ಇದನ್ನು ವಿರೋಧಿಸಿದ್ದರು. ನೀವೇ ಇನ್ನೊಂದು ಅವಧಿಗೆ ಮುಂದುವರೆಯಬೇಕು ಎಂದು ಒತ್ತಾಯಿಸಿದ್ದರು. ಅದರಂತೆ, ಜೂನ್ 16 ರಂದು ಸರ್ವ ಸದಸ್ಯರ ಸಭೆಯನ್ನು ಕರೆದಿದ್ದೇನೆ.
ಆ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದರು. ಧರಣಿಯ ನೇತೃತ್ವವನ್ನು ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಅಶೋಕ್ ವಹಿಸಿದ್ದರು. ಈ ಸಂದರ್ಭದಲ್ಲಿ ಕೆ.ಮಂಜು, ನಟ ಜಗ್ಗೇಶ್, ಡಿ.ಕೆ.ರಾಮಕೃಷ್ಣ (ಪ್ರವೀಣ್), ವಿತರಕರಾದ ಕೆ.ಮಂಜು, ಎ.ಗಣೇಶ್, ಜಯಣ್ಣ, ಎಸ್.ವಿ.ಬಾಬು, ಕೆ.ಪಿ.ಶ್ರೀಕಾಂತ್, ಕೆ.ವಿ.ವೆಂಕಟೇಶ್ ಹಾಗೂ ಪ್ರದರ್ಶಕ ಕೆ.ಸಿ.ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.