ಒಮ್ಮೆ ನಿನ್ನನ್ನು ತಬ್ಬಿಕೊಳ್ಳಬೇಕು, ಪ್ರೀತಿಯಿಂದ ಮುದ್ದಾಡಬೇಕೆನಿಸಿತು. ನೀನು ಆಕಾಶ, ನಾನು ಭೂಮಿ. ಅದು ಹೇಗೆ ತಬ್ಬಿಕೊಳ್ಳಲು ಸಾಧ್ಯ? ಎಷ್ಟು ಉದ್ದ ಕೈ ಚಾಚಿದರೂ ನೀನು ಸಿಗಲಾರೆ. ಆಗ ಒಂದು ಉಪಾಯ ಹೊಳೆಯಿತು…
ಬಾನಂಗಳದ ತಾರೆಯ ಚುಕ್ಕಿಗಳ ಸಾಲಿನಲಿ, ಅಂದು ನಾನೂ ಕೂಡ ಮಿನುಗು ನಕ್ಷತ್ರವಾಗಿದ್ದೆ. ಹುಣ್ಣಿಮೆಯ ಚಂದ್ರಮನಲ್ಲಿ ನಾನು ನಿನ್ನನ್ನು ಕಂಡೆ. ಆ ಕಲ್ಪನೆಯಲ್ಲೇ, ಚಂದಿರನೊಂದಿಗೆ ಮಾತಾಡುತ್ತಾ ಕುಳಿತೆ. ಅದರೊಡನೆಯೇ ಮನಸಿನ ಭಾವನೆಗಳನ್ನು ಹಂಚಿಕೊಂಡೆ.
ಆದರೆ, ಈ ಕಣ್ಣುಗಳಿಗೆ ಅಷ್ಟು ಮಾತ್ರ ಸಾಲಲಿಲ್ಲ. ಒಮ್ಮೆ ನಿನ್ನನ್ನು ತಬ್ಬಿಕೊಳ್ಳಬೇಕು, ಪ್ರೀತಿಯಿಂದ ಮುದ್ದಾಡಬೇಕೆನಿಸಿತು. ನೀನು ಆಕಾಶ, ನಾನು ಭೂಮಿ. ಅದು ಹೇಗೆ ತಬ್ಬಿಕೊಳ್ಳಲು ಸಾಧ್ಯ? ಎಷ್ಟು ಉದ್ದ ಕೈ ಚಾಚಿದರೂ ನೀನು ಸಿಗಲಾರೆ. ಆಗ ಒಂದು ಉಪಾಯ ಹೊಳೆಯಿತು. ಒಂದು ಕ್ಷಣ ಕಣ್ಣುಗಳೆರಡನ್ನೂ ಮುಚ್ಚಿಕೊಂಡು ನಾನು ನೀನಿದ್ದಲ್ಲಿಗೇ ಬಂದುಬಿಟ್ಟೆ. ನಿನ್ನನ್ನು ಬಿಗಿಯಾಗಿ ಅಪ್ಪಿಕೊಂಡು ಮುದ್ದಾಡಿದೆ. ಅಷ್ಟೆ: ನನ್ನ ಆಸೆಗಳೆಲ್ಲಾ ಈಡೇರಿದಂತಾಯಿತು. ಕಣ್ಣು ಬಿಟ್ಟಾಗ, ನಾನು ಮೊದಲಿದ್ದ ಜಾಗದಲ್ಲೇ ಇದ್ದೆ.
ಒಂದೇ ಒಂದು ಕ್ಷಣ, ಅದೂ ಕಲ್ಪನೆಯಲ್ಲಿ ನಿನ್ನೊಟ್ಟಿಗಿರುವುದೇ ಎಷ್ಟು ಖುಷಿ ಕೊಡುತ್ತದೆ. ಇನ್ನು ಜೀವನಪೂರ್ತಿ ನಿನ್ನೊಂದಿಗೆ ಕಾಲ ಕಳೆಯುವುದನ್ನು ನೆನೆಸಿಕೊಂಡರೆ, ಮನಸಿಗಾಗುವ ಖುಷಿ ಅಷ್ಟಿಷ್ಟಲ್ಲ. ಈ ಜೀವಕ್ಕೆ ಬೇರೇನು ಬೇಕು ಹೇಳು? ಅಂದಹಾಗೆ, ನೀನು ಬರುವುದು ಯಾವಾಗ? ನಿನ್ನನ್ನು ನೋಡದೆ, ಮಾತನಾಡಿಸದೆ, ತುಂಬಾ ದಿನಗಳಾಯಿತು.
ನನಗನಿಸುತ್ತೆ: ನಿನಗೂ ಚಂದ್ರಮನಿಗೂ ಅದೇನೋ ನಂಟಿದೆ. ನಾನು ನಿನ್ನಿಂದ ಅದೆಷ್ಟೇ ದೂರವಿದ್ದರೂ, ಅವನಲ್ಲೇ ನಿನ್ನನ್ನು ಕಾಣುತ್ತೇನೆ. ನಿನ್ನನ್ನು ಮೊದಲ ಬಾರಿ ಕಂಡದ್ದು, ಹುಣ್ಣಿಮೆಯ ದಿನದಂದೇ. ನೆನಪಿದೆಯಾ? ಅಂದು ಹೋಳಿ ಹುಣ್ಣಿಮೆ. ಅಪರಿಚಿತಳಾದ ನನ್ನ ಮೇಲೆ, ನೀನು ಒಲವಿನ ಬಣ್ಣ ಚೆಲ್ಲಿ, ಹೃದಯವನ್ನು ಚಿತ್ತಾರಗೊಳಿಸಿದೆ. ಎಷ್ಟೇ ಅಳಿಸಿ, ತೊಳೆದರೂ ಆ ಬಣ್ಣ ನನ್ನಿಂದ ದೂರಾಗಲಿಲ್ಲ. ಯಾಕೆಂದರೆ, ಆ ಬಣ್ಣ ನಾಟಿರುವುದು ನನ್ನೀ ಹೃದಯಕ್ಕೆ. ನಮ್ಮ ಮಧ್ಯೆ ಪ್ರೀತಿಯ ಹೂ ಅರಳಲು ಕಾರಣವಾದ ಆ ಒಲವಿನ ಬಣ್ಣ ಎಂದೆಂದಿಗೂ ಮಾಸುವುದೇ ಬೇಡ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
– ಗೀತಾ ಕೆ. ಬೈಲಕೊಪ್ಪ