Advertisement

ಸದನದಲ್ಲಿ ಬಣ್ಣ ಬಯಲು ಮಾಡಿದ ಪರ್ಜನ್ಯ ಜಪ,ತಪ ವಿವಾದ

12:14 PM Jun 08, 2017 | Team Udayavani |

ವಿಧಾನಸಭೆ: ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಲಿ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಕೃಷ್ಣ ಮತ್ತು ಕಾವೇರಿ ಉಗಮ ಸ್ಥಾನಗಳಲ್ಲಿ ನಡೆಸಿದ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ಸದನದಲ್ಲಿ ಮತ್ತೆ ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೆ, ಮೌಡ್ಯ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾದ ಸರ್ಕಾರ ಮತ್ತು ಸಚಿವರ ಪೂಜೆಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕರ ನಿಜ ಬಣ್ಣವನ್ನೂ ಬಯಲು ಮಾಡಿತು.

Advertisement

ಮೌಡ್ಯ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಸಚಿವರು ಪೂಜೆ ಮೂಲಕ ಮಳೆ ಬರಿಸಲು ಮುಂದಾಗಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ತರಾಟೆಗೆ ತೆಗೆದುಕೊಂಡಾಗ ಆಡಳಿತ ಪಕ್ಷದ ಸದಸ್ಯರು ಉತ್ತರ ನೀಡಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿದರು. ಅಲ್ಲದೆ, ಮಳೆಗಾಗಿ ಪರ್ಜನ್ಯ ಜಪ ಮಾಡಿದ ತಮ್ಮನ್ನು ಟೀಕಿಸಿದ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಪರ್ಜನ್ಯ ಹೋಮ, ವಿಶೇಷ ಪೂಜೆ ಮಾಡಿಸಿದರು ಎನ್ನುವ ಮೂಲಕ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಬಿಜೆಪಿ ನಾಯಕರ ದ್ವಂದ್ವ ನಿಲುವುಗಳನ್ನು ಎತ್ತಿಹಿಡಿದರು.

ಮಳೆಗಾಗಿ ಕೃಷ್ಣ ಮತ್ತು ಕಾವೇರಿ ನದಿಗಳ ಉಗಮ ಸ್ಥಾನದಲ್ಲಿ ತಾವು ನಡೆಸಿದ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆಗೆ ಸೋಮವಾರದ ಕಲಾಪದಲ್ಲಿ ಜಗದೀಶ್‌ ಶೆಟ್ಟರ್‌ ಅವರು ವಿರೋಧ ವ್ಯಕ್ತಪಡಿಸಿದ್ದ ಕುರಿತು ಬುಧವಾರ ಸ್ವಯಂಪ್ರೇರಿತವಾಗಿ ಸುದೀರ್ಘ‌ ಹೇಳಿಕೆ ನೀಡಿದ ಸಚಿವ ಎಂ.ಬಿ.ಪಾಟೀಲ್‌, ತಮ್ಮ ಪೂಜೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ, ತಾವು ಪರ್ಜನ್ಯ ಹೋಮ ಮಾಡಿಲ್ಲ, ಕೇವಲ ಜಪ ಮಾತ್ರ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಮಾತೃ ಸ್ವರೂಪಿ ನದಿಗಳಾದ ಕೃಷ್ಣ ಮತ್ತು ಕಾವೇರಿಯ ಪೂಜೆ ಮಾಡುವುದು ಮೌಡ್ಯ, ತಪ್ಪು ಎನ್ನುವುದಾದರೆ ಇಂತಹ ಪೂಜೆಯನ್ನು ಲಕ್ಷ ಬಾರಿ ಬೇಕಾದರೂ ಮಾಡುತ್ತೇನೆ ಎಂದರು.

ಜತೆಗೆ ತಾವು ಪರ್ಜನ್ಯ ಜಪ ಮಾಡಿದ್ದನ್ನು ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಆಕ್ಷೇಪಿಸಿ ಇದೊಂದು ಮೂಢನಂಬಿಕೆ ಎಂಬಂತೆ ಬಿಂಬಿಸಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದಲೇ ಧಾರ್ಮಿಕ ದತ್ತಿ ಇಲಾಖೆ ಮೂಲಕ ಮಳೆಗಾಗಿ ಪರ್ಜನ್ಯ ಜಪ, ಹೋಮ, ಜಲಾಭಿಷೇಕ ಮತ್ತು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಪ್ರತಿ ದೇವಸ್ಥಾನದಲ್ಲಿ 5 ಸಾವಿರ ರೂ. ವೆಚ್ಚ ಮಾಡಲಾಗಿತ್ತು. ಹೀಗಾಗಿ ಜಗದೀಶ್‌ ಶೆಟ್ಟರ್‌ ಅವರು ರಾಜಕೀಯ ಪ್ರೇರಿತವಾಗಿ ತಮ್ಮ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.

ಪರ್ಜನ್ಯ ಜಪ ಮಾಡಿದ್ದಕ್ಕಾಗಿ ತಾವು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಜಗದೀಶ್‌ ಶೆಟ್ಟರ್‌ ಒತ್ತಾಯಿಸಿದ್ದರು. ಆದರೆ, ಇಸ್ರೋ ವಿಜ್ಞಾನಿಗಳು ಜಿಎಸ್‌ಎಲ್‌ವಿ ಉಪಗ್ರಹವನ್ನು ಇತ್ತೀಚೆಗೆ ಕಕ್ಷೆಗೆ ಬಿಡುವ ಮುನ್ನ ಅದರ ಪ್ರತಿಕ್ರತಿಯನ್ನು ಇಟ್ಟುಕೊಂಡು ತಿರುಪತಿಯಲ್ಲಿ ಪೂಜೆ ಮಾಡಿದ್ದರು. ಹಾಗಿದ್ದರೆ  ಇಸ್ರೋ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಆ ಪೂಜೆಯನ್ನು ಮೂಢನಂಬಿಕೆ ಎಂದು ಹೇಳಿ ಕೇಂದ್ರ ಸರ್ಕಾರದ ರಾಜೀನಾಮೆಗೆ ಆಗ್ರಹಿಸುತ್ತಾರೆಯೇ ಎಂದು ಪ್ರಶ್ನಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್‌ ಶೆಟ್ಟರ್‌, ಸಚಿವರನ್ನುದ್ದೇಶಿಸಿ ನಿಮ್ಮ ಸರ್ಕಾರ (ಕಾಂಗ್ರೆಸ್‌) ಮೌಡ್ಯ ನಿಷೇಧ ಕಾಯ್ದೆ ಜಾರಿಗೊಳಿಸುವ ಬಗ್ಗೆ ಪದೇ ಪದೇ ಹೇಳುತ್ತಿದೆ. ಅಂತಹ ಸರ್ಕಾರದಲ್ಲಿ ಸಚಿವರಾಗಿ ನೀವು ಹೋಮ ಮಾಡಿಸಿದ್ದೀರಿ ಎಂದರೆ ನಮ್ಮ (ಬಿಜೆಪಿ) ಸಾಲಿಗೆ ಬಂದಿದ್ದೀರಿ. ಹಿಂದೂ ಸಂಪ್ರದಾಯ, ಸಂಸ್ಕೃತಿ, ಪರಂಪರೆ, ನದಿಯನ್ನು ಪೂಜ್ಯ ಭಾವನೆಯಿಂದ ನೋಡುವ ಹಂತಕ್ಕೆ ಬಂದಿದ್ದೀರಿ ಎಂದು ಅರ್ಥ. ನಿಮ್ಮನ್ನು ನಾನು ಸ್ವಾಗತಿಸುತ್ತೇನೆ. ಪೂಜೆ ಮಾಡಿದ್ದಕ್ಕೆ ವಿರೋಧಿಸಿಲ್ಲ ಎಂದರು.

ಮಧ್ಯಪ್ರವೇಶಿಸಿದ ಸಚಿವ ಎಂ.ಬಿ.ಪಾಟೀಲ್‌, ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ದೇವಾಲಯಗಳಲ್ಲಿ ಧಾರ್ಮಿಕ ದತ್ತಿ ಇಲಾಖೆ ಮೂಲಕ ಮಳೆಗಾಗಿ ಪರ್ಜನ್ಯ ಜಪ, ಹೋಮ, ಜಲಾಭಿಷೇಕ ಮತ್ತು ವಿಶೇಷ ಪೂಜೆ ಮಾಡಿಸಲು ಹೊರಡಿಸಿದ ಸುತ್ತೋಲೆಯನ್ನು ಪ್ರದರ್ಶಿಸಿದರಲ್ಲದೆ, ನಾನೇನೂ ಸರ್ಕಾರದ ಹಣ ವೆಚ್ಚ ಮಾಡಿಲ್ಲ. ನನ್ನ ಸ್ವಂತ ಹಣ ಮತ್ತು ಸ್ನೇಹಿತರ ಹಣದಿಂದ ಪೂಜೆ ಮಾಡಿಸಿದ್ದೇನೆ. ಆದರೆ, ನೀವು ಸರ್ಕಾರದ ಕೋಟ್ಯಂತರ ರೂ. ಅದಕ್ಕಾಗಿ ವೆಚ್ಚ ಮಾಡಿಸಿದ್ದೀರಿ ಎಂದು ಛೇಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಮತ್ತಿತರರು ಜಗದೀಶ್‌ ಶೆಟ್ಟರ್‌ ಬೆಂಬಲಕ್ಕೆ ನಿಂತರೆ, ಸಚಿವ ರಮೇಶ್‌ಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಕೆಲ ಸದಸ್ಯರು ಸಚಿವ ಎಂ.ಬಿ.ಪಾಟೀಲ್‌ ಬೆನ್ನಿಗೆ ನಿಂತಿದ್ದರಿಂದ ಗದ್ದಲ ಸೃಷ್ಟಿಯಾಯಿತು. ಜತೆಗೆ ಪ್ರತಿಯೊಬ್ಬರು ಮಾತನಾಡುವಾಗಲೂ ಸಚಿವ ಎಂ.ಬಿ.ಪಾಟೀಲ್‌ ಎದ್ದುನಿಂತು ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿದ್ದುದರಿಂದ ಗದ್ದಲ ಇನ್ನಷ್ಟು ಹೆಚ್ಚಾಯಿತು. ಸ್ಪೀಕರ್‌ ಎದ್ದುನಿಂತು ಸದನವನ್ನು ತಹಬದಿಗೆ ತಂದರು.

ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ, ಸಚಿವರು ಪೂಜೆ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ. ನಾವು ಅಧಿಕಾರದಲ್ಲಿದ್ದಾಗಲೂ ಪೂಜೆ ಮಾಡಿಸಿದ್ದೇವೆ. ಆದರೆ, ಇಂತಹ ನಂಬಿಕೆ, ಪೂಜೆಗಳು ಮೌಡ್ಯ ಎನ್ನುತ್ತಾ ಮೌಡ್ಯ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರ ಈ ಪೂಜೆಗೆ ಹೇಗೆ ಒಪ್ಪಿಕೊಂಡಿತು ಎಂಬುದು ನಮ್ಮ ಪ್ರಶ್ನೆಯಾಗಿತ್ತು. ಅದನ್ನು ನೀವು ಪ್ರತಿಷ್ಠೆಯಾಗಿ ತೆಗೆದುಕೊಂಡಿರಿ ಅಷ್ಟೇ ಎಂದು ಹೇಳಿ ಸಚಿವರನ್ನು ಸುಮ್ಮನಾಗಿಸಿದರು.

ಸಚಿವರು ಮಳೆಗಾಗಿ ಪೂಜೆ ಮಾಡಿಸಿದ ಬಳಿಕ ಮಳೆಯೇ ಬರಲಿಲ್ಲ
ಮಳೆಗಾಗಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಮಾಡಿಸಿದ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ಗಂಭೀರ ಚರ್ಚೆ ಜತೆಗೆ ಕೆಲವು ಸ್ವಾರಸ್ಯಕರ ಮಾತಿನ ವಿನಿಮಯಕ್ಕೂ ಕಾರಣವಾಯಿತು.

ಪರ್ಜನ್ಯ ಜಪ ಮಾಡಿದ್ದನ್ನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ, ನಮ್ಮಲ್ಲಿ ಮಳೆ ಬರುವ ಲಕ್ಷಣ ಕಾಣಿಸಿಕೊಂಡಿತ್ತು. ಆದರೆ, ನೀವು (ಸಚಿವರು) ಭಾಗಮಂಡಲಕ್ಕೆ ಬಂದು ಪೂಜೆ ಮಾಡಿಸಿದ ಮೇಲೆ ಮಳೆಯೇ ಬರಲಿಲ್ಲ ಎಂದು ಛೇಡಿಸಿದರು. ಸಚಿವರು ಒಳ್ಳೇ ಮನಸ್ಸಿನಿಂದ ಪೂಜೆ ಮಾಡಿಸಿದರೆ ಮಳೆ ಬರುತ್ತಿತ್ತು ಎಂದು ಬಿಜೆಪಿಯ ಲಕ್ಷ್ಮಣ ಸವದಿ ಮತ್ತು ಬಸವರಾಜ ಬೊಮ್ಮಾಯಿ ಕಾಲೆಳೆದರು.

ಅಲ್ಲದೆ, ಹಿಂದೆ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಭಾಗಮಂಡಲಕ್ಕೆ ಹೋಗಿ ಮಳೆಗಾಗಿ ವಿಶೇಷ ಪೂಜೆ ಮಾಡಿಸಿದೆ. ಆಗ ಒಳ್ಳೆಯ ಮಳೆಯಾಗಿದೆ. ಆದರೆ, ನೀವು (ಎಂ.ಬಿ.ಪಾಟೀಲ್‌) ಪೂಜೆ ಮಾಡಿಸಿದ ಮೇಲೆ ಮಳೆಯೇ ಆಗಿಲ್ಲ ಅಂದರೆ ನಿಮ್ಮ ಮನಸ್ಸು ಸರಿ ಇರಲಿಲ್ಲ ಎಂದು ಭಾವಿಸಬೇಕೇ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಚರ್ಚೆ ವೇಳೆ ಪದೇ ಪದೇ ಎದ್ದುನಿಂತು ಆಕ್ರೋಶಭರಿತರಾಗಿ ಮಾತನಾಡುತ್ತಿದ್ದ ಸಚಿವ ಎಂ.ಬಿ.ಪಾಟೀಲರನ್ನು ಕೆಣಕಿದ ಬಿಜೆಪಿ ಶಾಸಕರು, ಪೂಜೆ ಮಾಡಿಸಿದ ಮೇಲೆ ಮಳೆ ಬಾರದೇ ಇದ್ದರೂ ಪರವಾಗಿಲ್ಲ, ಕನಿಷ್ಠ ಮನಸ್ಸಾದರೂ ಶಾಂತವಾಗಬೇಕಿತ್ತು. ಆದರೆ, ನೀವೇಕೆ ರಕ್ತದೊತ್ತಡ (ಬಿಪಿ) ಜಾಸ್ತಿ ಮಾಡಿಕೊಳ್ಳುತ್ತೀರಿ. ಪೂಜೆ ಮಾಡಿಸಿದರೂ ಶಾಂತಮೂರ್ತಿಯಾಗಲಿಲ್ಲ. ಪೂಜೆ ಸರಿಯಾಗಿಲ್ಲವೇ ಅಥವಾ ಪೂಜೆ ಮಾಡಿದಾಗ ಮನಸ್ಸು ಸರಿ ಇರಲಿಲ್ಲವೇ ಎಂದು ಛೇಡಿಸಿದರು. ಆದರೂ ಸಚಿವರು ಮಾತ್ರ ಸಿಟ್ಟಿನಿಂದಲೇ ಪ್ರತಿಕ್ರಿಯಿಸುತ್ತಿದ್ದರು.

ಲಿಂಗಾಯತರು ಹೋಮ ಮಾಡುವಂತಿಲ್ಲ:
ಈ ಮಧ್ಯೆ ಹೋಮ-ಹವನಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಗೋವಿಂದ ಕಾರಜೋಳ ಅವರು ಬಸವಣ್ಣನವರ ಮಾತುಗಳನ್ನು ಪ್ರಸ್ತಾಪಿಸಿ ಲಿಂಗಾಯತ ಸಮುದಾಯದ ಬಗ್ಗೆ ಹೇಳಿದಾಗ ಸಚಿವ ಆರ್‌.ವಿ.ದೇಶಪಾಂಡೆ ಅವರು ಏನೋ ಹೇಳಲು ಮುಂದಾದರು. ಆಗ ಕಾರಜೋಳ ಅವರು, ಇದು ನಿಮಗೆ (ಬ್ರಾಹ್ಮಣರಿಗೆ) ಸಂಬಂಧಿಸಿದ್ದಲ್ಲ, ಲಿಂಗಾಯತರಿಗೆ ಹೇಳುತ್ತಿದ್ದೇನೆ. ಹೋಮ ಮಾಡುವವರು ಲಿಂಗಾಯತರೇ ಅಲ್ಲ ಎಂದು ಬಸವಣ್ಣ ಹೇಳುತ್ತಿದ್ದರು ಎಂದಾಗ, ಬಸವಣ್ಣನನ್ನು ಲಿಂಗಾಯತರಿಗೆ ಕೊಟ್ಟಿದ್ದು ನಾವೇ (ಬಸವಣ್ಣ ಮೂಲತಃ ಬ್ರಾಹ್ಮಣರಾಗಿದ್ದುದನ್ನು ಪ್ರಸ್ತಾಪಿಸಿ) ಎಂದು ದೇಶಪಾಂಡೆ ಹೇಳಿದರು. ಸಚಿವ ಎಂ.ಬಿ.ಪಾಟೀಲ್‌ ಪ್ರತಿಕ್ರಿಯಿಸಿ, ನಾನು ಹೋಮ ಮಾಡಿಸಿಯೇ ಇಲ್ಲ. ಹೀಗಾಗಿ ಈ ಮಾತು ನಿಮ್ಮ ಪಕ್ಷದ (ಬಿಜೆಪಿ) ಲಿಂಗಾಯತರಿಗೆ ಅನ್ವಯವಾಗುತ್ತದೆ ಎಂದರು.

ಪರ್ಜನ್ಯ ಹೋಮ ವಿರೋಧಿಸುವಶೆಟ್ಟರ್‌ ಬಿಜೆಪಿ ಬಿಡಲಿ: ಯತ್ನಾಳ್‌
ವಿಧಾನಪರಿಷತ್ತು:
ಪರ್ಜನ್ಯ ಹೋಮ ವಿರೋಧಿಸುವ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಮೊದಲು ಬಿಜೆಪಿ ಬಿಡಬೇಕು ಎಂದು ವಿಧಾನಪರಿಷತ್ತಿನ ಪಕ್ಷೇತರ ಸದಸ್ಯ ಬಸವನಗೌಡ ಪಾಟೀಲ್‌ ಯತ್ನಾಳ್‌ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಉತ್ತಮ ಮಳೆಗಾಗಿ ಕಾವೇರಿ ಮತ್ತು ಕೃಷ್ಣೆಯ ಉಗಮ ಸ್ಥಾನದಲ್ಲಿ ಸಚಿವ ಎಂ.ಬಿ. ಪಾಟೀಲ್‌ ನಡೆಸಿದ ಪರ್ಜನ್ಯ ಹೋಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಸ್ವಾಗತಿಸಿದ್ದಾರೆ. ಆದರೆ, ಜಗದೀಶ್‌ ಶೆಟ್ಟರ್‌ ವಿರೋಧಿಸಿದ್ದು ಯಾಕೆ ಎಂದು ಅರ್ಥವಾಗಿಲ್ಲ. ಪ್ರಕೃತಿಯ ಪೂಜೆ ಭಾರತೀಯ ಪರಂಪರೆ ಮತ್ತು ಸಂಸ್ಕೃತಿ. ಈ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟ ಪಕ್ಷ ಬಿಜೆಪಿ. ಹಿಂದೂ ಸಂಸ್ಕೃತಿಯ ರಕ್ಷಣೆ, ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಹೊಂದಿರುವ ಪಕ್ಷದಲ್ಲಿ (ಬಿಜೆಪಿ) ಉನ್ನತ ಸ್ಥಾನದಲ್ಲಿರುವ ಜಗದೀಶ್‌ ಶೆಟ್ಟರ್‌ ಪರ್ಜನ್ಯ ಹೋಮಕ್ಕೆ ವಿರೋಧಿಸುತ್ತಾರೆ ಎನ್ನುವುದಾದರೆ ಮೊದಲು ಅವರು ಬಿಜೆಪಿಯಿಂದ ಹೊರಬರಬೇಕು ಎಂದು ಕಿಡಿ ಕಾರಿದರು.

ನಾನು ಮಾಡಿದ್ದು ಪೂಜೆ: ಮಧ್ಯಪ್ರವೇಶಿಸಿದ ಸಚಿವ ಎಂ.ಬಿ.ಪಾಟೀಲ್‌, ನಾನು ಮಾಡಿದ್ದು ಪರ್ಜನ್ಯ ಯಾಗ ಅಥವಾ ಹೋಮ ಅಲ್ಲ. ಉತ್ತಮ ಮಳೆ ಬರಲಿ ಎಂದು ಸ್ವಂತ ಖರ್ಚಿನಲ್ಲಿ ಪರ್ಜನ್ಯ ಪೂಜೆ ಮತ್ತು ಪ್ರಾರ್ಥನೆ ಮಾಡಿದ್ದೇನೆ. ನನ್ನ ಪರ್ಜನ್ಯ ಪೂಜೆ ವಿರೋಧಿಸುತ್ತಿರುವ ಜಗದೀಶ್‌ ಶೆಟ್ಟರ್‌ ತಾವು ಮುಖ್ಯಮಂತ್ರಿ ಆಗಿದ್ದಾಗ ಮಳೆಗಾಗಿ ವಿಶೇಷ ಪೂಜೆ ಮಾಡುವಂತೆ ಎಲ್ಲ ಮುಜರಾಯಿ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದ್ದರು. ಇದಕ್ಕೆ 17 ಕೋಟಿ ರೂ. ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿತ್ತು ಎಂದರು. ಇದಕ್ಕೆ ಆಕ್ಷೇಪಿಸಿದ ಕೋಟ ಶ್ರೀನಿವಾಸ ಪೂಜಾರಿ ಆಗ ಸರ್ಕಾರದಿಂದ ಒಂದು ನಯಾ ಪೈಸೆ ಕೊಟ್ಟಿರಲಿಲ್ಲ. ದೇವಾಲಯಗಳ ಆದಾಯದಲ್ಲೇ ಖರ್ಚು ಮಾಡುವಂತೆ ಹೇಳಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದರು.

ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದಲೇ ಧಾರ್ಮಿಕ ದತ್ತಿ ಇಲಾಖೆ ಮೂಲಕ ಮಳೆಗಾಗಿ ಪರ್ಜನ್ಯ ಜಪ, ಹೋಮ, ಜಲಾಭಿಷೇಕ ಮತ್ತು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಪ್ರತಿ ದೇವಸ್ಥಾನದಲ್ಲಿ 5 ಸಾವಿರ ರೂ.ವೆಚ್ಚ ಮಾಡಲಾಗಿತ್ತು. ಹೀಗಾಗಿ, ಶೆಟ್ಟರ್‌ ಅವರು ರಾಜಕೀಯ ಪ್ರೇರಿತರಾಗಿ ತಮ್ಮ ಬಗ್ಗೆ ಮಾತನಾಡಿದ್ದಾರೆ. 
– ಎಂ.ಬಿ.ಪಾಟೀಲ್‌,
ಜಲಸಂಪನ್ಮೂಲ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next