ಯಾದಗಿರಿ: ರಾಜ್ಯಪಾಲರ ಬಣ್ಣ ಬಯಲಾಗಲಿದೆ, ಒಬ್ಬ ಆರ್.ಟಿ.ಐ ಕಾರ್ಯಕರ್ತನ ದೂರಿನ ತಳಬುಡ ಗೊತ್ತಲ್ಲದೆ ಗೌರವಯುತ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ನೀಡುತ್ತಾರೆ ಎಂದರೆ ಅದರ ಅರ್ಥ ರಾಜ್ಯಪಾಲರು ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಾ ಇದ್ದಾರೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ರಾಜ್ಯಪಾಲರ ಮುಂದೆ ಇರುವ ಎಲ್ಲಾ ಪ್ರಕರಣಗಳನ್ನು ತನಿಖೆ ಮಾಡಲಿ ನೋಡೋಣ, ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳೆಯುವ ಒಂದೇ ಒಂದು ಕೆಟ್ಟ ಉದ್ದೇಶದಿಂದ ಇಷ್ಟೇಲ್ಲಾ ನಡೆಯುತ್ತಿದೆ ಎಂದರು.
ಆ.29 ವರೆಗೂ ಸಿಎಂ ಅವರಿಗೆ ಕಾಲಾವಕಾಶವಿದೆ. ನಾವು ಸಹ ಕಾನೂನು ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಹಿಂದೆ ಇಡೀ ಕ್ಯಾಬಿನೆಟ್ ಹಾಗೂ ಕಾಂಗ್ರೆಸ್ ಪಕ್ಷವೇ ಇದೆ. ಕೊನೆಗೆ ರಾಜ್ಯಪಾಲರ ಬಣ್ಣ ಬಯಲಾಗಲಿದೆ ಎಂದು ಹೇಳಿದರು.
ಮುಡಾ ಮುಂದಿಟ್ಟುಗೊಂಡು ಬಿಜೆಪಿಯವರು ಮಾಡಿದ ಪಾದಯಾತ್ರೆ ಯಶಸ್ವಿಯಾಯಿತಾ.? ಪಾದಯಾತ್ರೆಯಲ್ಲಿ ಅವರ ಪಕ್ಷದ ಮುಖಂಡರೇ ಬಂದಿಲ್ಲ. ಜೆಡಿಎಸ್ ನವರಿಗೆ ಕಾಲು-ಕೈ ಬೀಳುವ ಪಾಳಿ ಬಂತು ರಾಜ್ಯ ಬಿಜೆಪಿ ನಾಯಕರಿಗೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಅಂತು ಡಿಮ್ಯಾಂಡ್ ನಲ್ಲಿದ್ದರು. ನಾನು ಪಾದಯಾತ್ರೆ ಬರುವುದಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಶಾಸಕ ಯತ್ನಾಳ ಪ್ರತ್ಯೇಕ ಪಾದಯಾತ್ರೆಗೆ ಮುಂದಾಗಿದ್ದರು. ಇದೆಲ್ಲ ಜನರೂ ಗಮನಿಸುತ್ತಾರೆ. ಬಿಜೆಪಿ-ಜೆಡಿಎಸ್ ಅವರ ನಡುವೆಯೇ ನೂರೆಂಟು ಜಗಳಗಳಿವೆ. ಕಾಂಗ್ರೆಸ್ ಜನಪರ ಆಡಳಿತ ನೀಡುವುದನ್ನು ಕುಮಾರಸ್ವಾಮಿ ಸಹಿಸದೆ ಇಂತಹ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.