Advertisement

ಕುಸಿದ ಕಿಂಡಿ ಅಣೆಕಟ್ಟು

10:16 PM Oct 22, 2019 | mahesh |

ಆಲಂಕಾರು: ಕಡಬ ತಾಲೂಕಿನ ಆಲಂಕಾರು ಪರಿಸರದಲ್ಲಿ ಸುರಿದ ಭಾರೀ ಮಳೆಯ ಹೊಡೆತಕ್ಕೆ ಗ್ರಾಮದ ನೆಕ್ಕಿಲಾಡಿ ತೋಡಿಗೆ ಜಲಾನಯನ ಇಲಾಖೆ ನಿರ್ಮಿಸಿದ್ದ ಕಿಂಡಿ ಅಣೆಕಟ್ಟು ಮಂಗಳವಾರ ಮುಂಜಾನೆ ಕುಸಿದಿದೆ.

Advertisement

ಆಲಂಕಾರು ಪರಿಸರದಲ್ಲಿ ಮಳೆ ಸುರಿದು ಹಳ್ಳ, ತೋಡು, ಕೃಷಿ ತೋಟ ಭತ್ತದ ಗದ್ದೆಗಳಲ್ಲಿ ನೀರು ತುಂಬಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ನೆಕ್ಕಿಲಾಡಿಯ ತೋಡು ತುಂಬಿ ಹರಿದು, ಹತ್ತಿರದ ತೋಟಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಆವರಿಸಿಕೊಂಡಿದೆ. ನೆರೆ ನೀರಿನಲ್ಲಿ ಕಸ, ಕಡ್ಡಿ, ತ್ಯಾಜ್ಯಗಳು ತೇಲಿ ಬಂದು ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದವು. ಅಣೆಕಟ್ಟೆಯ ಒಂದು ಭಾಗದಲ್ಲಿ ನೀರು ಹರಿದು ತಡೆಗೋಡೆಯ ಬದಿಯಲ್ಲಿ ಮಣ್ಣು ಕೊರೆದು ಹೋಗಿದೆ. ತಡೆಗೋಡೆ ರವಿವಾರವೇ ಸ್ವಲ್ಪ ಮಟ್ಟಿಗೆ ಕುಸಿದಿತ್ತು. ಮರುದಿನ ನಾಗರಿಕರು ತಡೆಗೋಡೆಯಲ್ಲಿ ಸಿಲುಕಿದ್ದ ಕಸ ತೆಗೆಯಲು ಪ್ರತ್ನಿಸಿದ್ದರು. ಈ ಸಂದರ್ಭ ತಡೆಗೋಡೆಯ ಒಳಗಡೆ ಇಬ್ಬರು ಸಿಲುಕಿಕೊಂಡಿದ್ದು, ಬಳಿಕ ಅವರನ್ನು ರಕ್ಷಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಕಸವನ್ನು ತೆರವುಗೊಳಿಸುವ ಸಂಧರ್ಭ ಸ್ಲಾéಬ್‌ ಸಂಪೂರ್ಣ ಕುಸಿದು ಬಿದ್ದಿದೆ.

ಗಾಣಂತಿ, ನಡಿರು, ಕಣಿಪುರ, ಪಜ್ಜಾಪು, ಶರವೂರಿನ ಸುಮಾರು 50 ಮನೆಗಳ ಜನರು ಆಲಂಕಾರು ಪೇಟೆ ಹಾಗೂ ಕುಂಡಾಜೆ ಶಾಲೆಯನ್ನು ಸಂಪರ್ಕಿಸಲು ಈ ಕಿಂಡಿ ಅಣೆಕಟ್ಟಿನ ಮೇಲೆ ನಿರ್ಮಿಸಿದ್ದ ಸಂಪರ್ಕ ಸೇತುವೆಯನ್ನೇ ಅವಲಂಬಿಸಿದ್ದರು. ಇದೀಗ ಆಲಂಕಾರು ಭಾಗದ ಕಿನ್ನಿಗೋಳಿ ಮುಖಾಂತರ 5 ಕಿ.ಮೀ. ಸುತ್ತು ಬಳಸಿ ಸಾಗಬೇಕು. ಮುಖ್ಯವಾಗಿ ಕುಂಡಾಜೆ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಹೋಗುವ ಮಕ್ಕಳಿಗೆ ಸಮಸ್ಯೆಯಾಗಿದೆ. ಜಲಾನಯನ ಇಲಾಖೆಯ ಮುಖಾಂತರ 5 ಲಕ್ಷ ರೂ. ವೆಚ್ಚದಲ್ಲಿ 2014ರಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗಿತ್ತು. ಆಲಂಕಾರು ಗ್ರಾ.ಪಂ. ಉಪಾಧ್ಯಕ್ಷ ಸದಾನಂದ ಆಚಾರ್ಯ, ಪಿಡಿಒ ಜಗನ್ನಾಥ ಶೆಟ್ಟಿ, ಸದಸ್ಯೆ ಸುನಂದಾ ಶರವೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಾದ ತಿಮ್ಮಪ್ಪ ಗೌಡ, ಉಮೇಶ್‌ ಗೌಡ, ಮನೋಜ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next