Advertisement

ಶಿಥಿಲಗೊಂಡಿದ್ದಕ್ಕೇ ಕುಸಿದ ಕಟ್ಟಡ

12:00 PM Oct 17, 2017 | Team Udayavani |

ಬೆಂಗಳೂರು: “ಕಟ್ಟಡ ಅರ್ಧ ಶತಮಾನಕ್ಕೂ  (54 ವರ್ಷ) ಹೆಚ್ಚು ಹಳೆಯದಾಗಿರುವ ಕಾರಣ ಈಗಾಗಲೇ ಶಿಥಿಲಗೊಂಡಿದೆ. ಕಾರಣ, ಕಟ್ಟಡ ವಾಸಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಅಲ್ಲಿ ಯಾರೂ ವಾಸಿಸುವುದು ಸೂಕ್ತವಲ್ಲ. ಕೂಡಲೆ ಕಟ್ಟಡ ತೆರವುಗೊಳಿಸಿ,’ ಎಂದು ಬಿಬಿಎಂಪಿ ನೀಡಿದ್ದ ನೋಟೀಸನ್ನು ಆ ಮನೆ ಮಾಲೀಕ ಗಂಭೀರವಾಗಿ ಪರಿಗಳಿಸಿದ್ದರೆ ಇಂದು ಏಳು ಅಮಾಯಕ ಜೀವಗಳು ಬಲಿಯಾಗುವುದು ತಪ್ಪುತ್ತಿತ್ತು!

Advertisement

ನಿಜ. ಈಜಿಪುರದ ಮನೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಏಳು ಅಮಾಯಕರು ಮೃತಪಟ್ಟ ಘಟನೆಗೆ ಆ ಮನೆ ಅಥವಾ ಕಟ್ಟಡ ಮಾಲೀಕ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಮೇಲ್ನೋಟಕ್ಕೆ ನೋಡಿದಾಗ ಘಟನೆಗೆ ಸಿಲಿಂಡರ್‌ ಸ್ಫೋಟವೇ ಎಂದು ಸ್ಪಷ್ಟವಾಗಿದೆ. ಆದರೆ ಕಟ್ಟಡ ಶಿಥಿಲಗೊಂಡಿದ್ದರಿಂದಲೇ ಇಷ್ಟೊಂದು ದೊಡ್ಡ ಮಟ್ಟದ ಸಾವು-ನೋವು ಸಂಭವಿಸಿದೆ.

ಒಂದೊಮ್ಮೆ ಸರಿಯಾದ ಸಮಯಕ್ಕೆ ಮಾಲೀಕ ಎಚ್ಚೆತ್ತುಕೊಂಡು, ಮನೆಯನ್ನು ಯಾರಿಗೂ ಬಾಡಿಗೆಗೆ ನೀಡದೆ, ನೆಲಸಮಗೊಳಿಸಿದ್ದರೆ ನಾಹುತವೇ ನಡೆಯುತ್ತಿರಲಿಲ್ಲ. ಘಟನೆಗೆ ಸಿಲಿಂಡರ್‌ ಸ್ಫೋಟ ಕಾರಣವಾದರೂ, ಕಟ್ಟಡ ಶಿಥಿಲಗೊಂಡಿದ್ದರಿಂದಲೇ ಡೀ ಕಟ್ಟಡ ಕುಸಿದಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

54 ವರ್ಷಗಳ ಹಿಂದಿನ ಕಟ್ಟಡ: 1963ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ನೆಲಮಹಡಿ ಮತ್ತು ಒಂದನೆ ಮಹಡಿಗೆ ಮಾತ್ರ ಬಿಬಿಎಂಪಿಯಿಂದ ಅನುಮತಿಯನ್ನು ನೀಡಲಾಗಿತ್ತು. ಆದರೆ, ಕಟ್ಟಡ ಮಾಲೀಕ ಗುಣೇಶ್‌ ನಿಯಮ ಮೀರಿ ಎರಡನೇ ಮಹಡಿ ನಿರ್ಮಿಸಿದ್ದರು. ಅಲ್ಲದೇ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಭಾರೀ ಮಳೆ ಇಡೀ ಕಟ್ಟಡ ಶಿಥೀಲಗೊಂಡಿದೆ. ಮನೆಗಳ ಗೋಡೆಗಳು ಬಿರುಕುಗೊಂಡಿದೆ. ಆದರೂ ಯಾವುದೇ ಮುನ್ನೆಚ್ಚರಿಕಾ ಕ್ರಮಕೈಗೊಳ್ಳದೇ ಮನೆ ಮಾಲೀಕ ನಿರ್ಲಕ್ಷ್ಯ ತೋರಿದಿದ್ದಾರೆ ಎನ್ನಲಾಗಿದೆ. 

ಈ ಮಧ್ಯೆ ಮೃತ ಕಲಾವತಿ ಅವರ ಪುತ್ರಿ ಕೃಷ್ಣವೇಣಿ, ಘಟನೆಗೆ ಕಟ್ಟಡದ ಮಾಲೀಕ ಗುಣೇಶ್‌ ನೇರ ಹೊಣೆ ಎಂದು ಆರೋಪಿಸಿ ವಿವೇಕನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 336, 338 ಹಾಗೂ 304ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಅಷ್ಟೇ ಅಲ್ಲದೇ, ಇದೇ ಪ್ರದೇಶದಲ್ಲಿರುವ ಇತರೆ 35-30 ವರ್ಷಗಳಿಗೂ ಹಳೆಯ ಕಟ್ಟಡಗಳನ್ನು ಗುರುತಿಸಿ ನೆಲಸಮ ಮಾಡಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಘಟನೆಗೆ ಸ್ಪಷ್ಟ ಕಾರಣ ಗೊತ್ತಿಲ್ಲ: ಕಟ್ಟಡ ಕುಸಿತಕ್ಕೆ ಸಿಲಿಂಡರ್‌ ನ್ಪೋಟ ಕಾರಣವೇ ಅಥವಾ ಭಾರಿ ಮಳೆಯಿಂದ ಕಟ್ಟಡ ಶೀಥಿಲಗೊಂಡಿದಿದ್ದರಿಂದ ಕಟ್ಟಡ ಕುಸಿತಗೊಂಡಿದ್ದೇಯೇ ಎಂಬುದು ಸ್ಪಷ್ಟವಾಗಿಲ್ಲ.  ಈ ಸಂಬಂಧ ತನಿಖೆ ನಡೆಯುತ್ತಿದ್ದು, ಮನೆ ಮಾಲೀಕ ಅಥವಾ ಆತನ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕವೇಗೊತ್ತಾಗಲಿದೆ. ಸ್ಥಳೀಯರು ಹೇಳುವ ಪ್ರಕಾರ ಭಾರಿ ಪ್ರಮಾಣದ ಶಬ್ದ ಕೇಳಿ ಬಂತು. ಹೊರ ಬಂದು ನೋಡುವಷ್ಟರಲ್ಲಿ ಕಟxಡ ನೆಲಸಮವಾಗಿತ್ತು ಎನ್ನುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದಿದ್ದ “ಬ್ರಾಡಿ’: ಎನ್‌ಡಿಆರ್‌ಎಫ್ನ ಶ್ವಾನದಳ “ಬ್ರಾಡಿ’ ನಗರದಲ್ಲಿ ಯಾವುದೇ ಕಟ್ಟಡ ಕುಸಿದು ಅವ‌ಶೇಷಗಳಡಿ ಸಿಲುಕಿಕೊಂಡರೆ ಕ್ಷಣ ಮಾತ್ರದಲ್ಲಿ ಪತ್ತೆ ಮಾಡುವ ಚಾಣಾಕ್ಷ. ಈಜಿಪುರದಲ್ಲೂ ಸಹ ಆರಂಭದಲ್ಲಿ ಅಲ್ಲಲ್ಲಿ ಸಿಲುಕಿದ ಎಲ್ಲ ಮೃತ ದೇಹಗಳನ್ನು ರಕ್ಷಣಾ ಪಡೆ ಹೊರ ತೆಗೆಯಿತು. ಆದರೆ, ಇನ್ನು ಮೃತ ದೇಹಗಳು ಇರಬಹುದೆಂಬ ಅನುಮಾನದ ಮೇರೆಗೆ ಬ್ರಾಡಿಯಿಂದ ಸ್ಥಳ ಪರಿಶೀಲಿಸಲಾಯಿತು. ಕೊನೆಗೆ 20 ನಿಮಿಷಗಳ ಕಾಲ ಕಟ್ಟಡದ ಅವಶೇಷಗಳಲ್ಲಿ ಸುತ್ತಾಡಿ ಪರಿಶೀಲಿಸಿ ಯಾರು ಇಲ್ಲ ಎಂದು ಖಾತ್ರಿ ಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next