Advertisement

ಚುನಾವಣಾ ನೀತಿ ಸಂಹಿತೆ ಕಡ್ಡಾಯ ಪಾಲನೆಗೆ ಸೂಚನೆ

07:50 AM Mar 13, 2019 | Team Udayavani |

ಹಾಸನ: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಇಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

Advertisement

ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದ ವೇಳೆ ಅನುಸರಿಸಬೇಕಾದ ವಿಷಯಗಳು – ಪ್ರಚಾರ ಸಾಮಾಗ್ರಿಗಳ ಮುದ್ರಣ ಮಾಡುವ ಮುನ್ನ ಹಾಗೂ ಸಭೆ, ಸಮಾರಂಭಗಳ ದಿನಾಂಕ ಸಮಯದ ಬಗ್ಗೆ ಅನುಮತಿ ಪಡೆಯುವ ಕುರಿತು ಜಿಲ್ಲಾ ಚುನಾವಣಾಧಿಕಾರಿಯವರು ಮಾಹಿತಿ ನೀಡಿದರು.

ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಾಸನ ಜಿಲ್ಲಾಧಿಕಾರಿಯವರು ಚುನಾವಣಾಧಿಕಾರಿಯಾಗಿ, 9 ಸಹಾಯಕ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಮಿತ್ತಿದ್ದಾರೆ. 2,235 ಮತಗಟ್ಟೆಗಳಿದ್ದು 16.30 ಲಕ್ಷ ಮತದಾರರಿದ್ದಾರೆ. ಹೊಸದಾಗಿ ನೋಂದಾಯಿಸಿಕೊಳ್ಳುವ ಮತದಾರರು ಇದಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಅಕ್ರಂ ಪಾಷಾ ತಿಳಿಸಿದರು.

ಭಾವಚಿತ್ರವಿರುವ ಗುರುತಿನ ಚಿಟಿ ಬಳಸಿ: ರಾಜಕೀಯ ಪಕ್ಷಗಳು ಜಿಲ್ಲಾ ಚುನಾವಣಾಧಿಕಾರಿ ನೀಡುವ ಅಂತಿಮ ಮತದಾರರ ಪಟ್ಟಿಯನ್ನು ಮಾತ್ರ ಇರಿಸಿಕೊಳ್ಳುವುದರಿಂದ ಅನಗತ್ಯ ಗೊಂದಲ ತಪ್ಪುತ್ತದೆ. ಮತದಾರರು ಆದಷ್ಟು ತಮ್ಮ ಬಳಿ ಇರುವ ಚುನಾವಣಾ ಆಯೋಗ ವಿತರಿಸಿರುವ ಭಾವಚಿತ್ರ ಇರುವ ಗುರುತಿನ ಚೀಟಿಯನ್ನೇ ಬಳಸುವುದು ಸೂಕ್ತ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.

ಗೊಂದಲ ಪರಿಹರಿಸಿಕೊಳ್ಳಿ: ಎಲ್ಲಾ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಅರಿತು ಪಾಲನೆ ಮಾಡಬೇಕು. ಯಾವುದಾದರೂ ಗೊಂದಲ ಅಥವಾ ಅನುಮಾನಗಳಿದ್ದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಪರಿಶೀಲಿಸಬಹುದು ಅಥವಾ ಚುನಾವಣಾ ಆಯೋಗದ ಅಥವಾ ಸ್ಥಳೀಯ ಚುನಾವಣಾ ವಿಭಾಗದ ವೆಬ್‌ಸೈಟ್‌ ನಿಂದಲೂ ಮಾಹಿತಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದರು. ವಾಹನ ಹಾಗೂ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಅನುಮತಿಗೆ ಸುವಿಧಾ ಆ್ಯಫ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಇದಲ್ಲದೆ ಚುನಾವಣಾ ದೂರುಗಳ ಬಗ್ಗೆ ನಿಗಾವಹಿಸಲು ಸಿ-ವಿಜ‚ನ್‌ ಕಾರ್ಯ ನಿರ್ವಹಿಸಮಿತ್ತಿದೆ ಎಂದು ಅವರು ವಿವರಿಸಿದರು.

Advertisement

ಚುನಾವಣಾ ಸಹಾಯವಾಣಿ: ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ 1950 ಸಹಾಯವಾಣಿಗೆ ಕರೆಮಾಡಬಹುದಾಗಿದೆ. ಇದಲ್ಲದೆ 261111 ದೂರವಾಣಿ ಸಂಖ್ಯೆಗೂ ಕರೆಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಅಕ್ರಂ ಪಾಷಾ ತಿಳಿಸಿದರು. ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್‌.ವಿಜಯ್‌ಪ್ರಕಾಶ್‌, ಅಪರ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ, ಚುನಾವಣಾ ತಹಶೀಲ್ದಾರ್‌ ನಾಗಭೂಷಣ್‌ ಹಾಗೂ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
 
ಬಂದೂಕು, ಮದ್ದು ಗುಂಡು ಠೇವಣಿಗೆ ಸೂಚನೆ
ಹಾಸನ:
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಹಾಸನ ಜಿಲ್ಲೆಯ ಚುನಾವಣೆ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿನ ಎಲ್ಲಾ ಶಸ್ತ್ರ, ಬಂದೂಕು ಪರವಾನಗಿದಾರರು ಬಂದೂಕು ಪರವಾನಗಿ ಆಧಾರದಲ್ಲಿ ಹೊಂದಿರುವ ಎಲ್ಲಾ ರೀತಿಯ ಶಸ್ತ್ರ, ಬಂದೂಕುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲಿ ಅಥವಾ ಅಧಿಕೃತ ಆಯುಧ ಮತ್ತು ಮದ್ದು ಗುಂಡುಗಳ ವಹಿವಾಟುದಾರರಲ್ಲಿ ಠೇವಣಿ ಇಡಲು ಸೂಚನೆ ನೀಡಲಾಗಿದೆ. 

ಹಾಸನ ಜಿಲ್ಲೆಯ ಚುನಾವಣಾ ಘೋಷಿತ ಯಾವುದೇ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ, ಬಂದೂಕುಗಳನ್ನು ಹೊಂದಿರುವುದನ್ನು ನಿಷೇದಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಆದೇಶಿಸಿರುತ್ತಾರೆ. ಈ ಆದೇಶವು ಮೇ 27 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್‌ಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಅತ್ಯಗತ್ಯವಾಗಿ ತಮ್ಮಲಿಯೇ ಇಟ್ಟುಕೊಳ್ಳುವ ಅನಿವಾರ್ಯತೆಯ ಸಕಾರಣಗಳೊಂದಿಗೆ ತಮ್ಮ ವ್ಯಾಪ್ತಿ ಪ್ರದೇಶದ ಪೊಲೀಸ್‌ ಠಾಣೆಯಲ್ಲಿ ಅರ್ಜಿ ಸಲ್ಲಿಸುವುದು, ಸದರಿ ಅರ್ಜಿಗಳನ್ನು ಪರೀಶಿಲಿಸಿ ಅರ್ಹತೆಗಳ ಆಧಾರದನ್ವಯ ಪೊಲೀಸ್‌ ಠಾಣೆಯ ಮುಖ್ಯಸ್ಥರ ಜವಾಬ್ದಾರಿ ಮೇಲೆ, ಆಯುಧಗಳನ್ನು ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next