ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರದ ಕೆಲವೆಡೆ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ನೀತಿ ಸಂಹಿತೆ ಜಾರಿಯಾಗಿದೆ ಎಂದು ಹೇಳಿ ಗುತ್ತಿಗೆದಾರರು ಸ್ಥಗಿತಗೊಳಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದೆ. ಆದರೆ, ಹೊಸ ಕಾಮಗಾರಿಗಳನ್ನು ಹೊರತುಪಡಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ನೀತಿ ಸಂಹಿತೆ ಜಾರಿಗೆ ಮೊದಲೇ ಕಾರ್ಯಾದೇಶ ಪಡೆದು ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರೆ, ಅಂತಹ ಕಾಮಗಾರಿಗಳಿಗೆ ನೀತಿ ಸಂಹಿತೆಗೆ ಅನ್ವಯವಾಗುವುದಿಲ್ಲ. ಆದರೆ, ಟೆಂಡರ್ ಆಗಿ ಕಾರ್ಯಾದೇಶ ಪಡೆಯದಿದ್ದರೆ ಅಥವಾ ಕಾರ್ಯಾದೇಶ ಪಡೆದರೂ ಕಾಮಗಾರಿ ಆರಂಭಿಸದೆ. ಈಗ ಆರಂಭಿಸಲು ಮುಂದಾದರೆ ಅಂತಹ ಯೋಜನೆಗಳಿಗೆ ಸಂಹಿತೆ ಅನ್ವಯವಾಗುತ್ತದೆ.
ನಗರದ ವಿವಿಧ ಭಾಗಗಳಲ್ಲಿ ಹಲವಾರು ಯೋಜನೆಗಳಿಗೆ ಬಿಬಿಎಂಪಿ ಈಗಾಗಲೇ ಚಾಲನೆ ನೀಡಿರುವುದರಿಂದ ಕಾಮಗಾರಿಗಳು ಸುಸೂತ್ರವಾಗಿ ನಡೆಯಲಿವೆ. ಒಂದೊಮ್ಮೆ ನೀತಿ ಸಂಹಿತೆ ನೆಪವಾಗಿರಿಸಿಕೊಂಡು ಕೆಲಸ ಸ್ಥಗಿತಗೊಳಿಸಲು ಗುತ್ತಿಗೆದಾರರು ಮುಂದಾದರೆ, ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಪ್ರಗತಿಯಲ್ಲಿರುವ ಪ್ರಮುಖ ಕಾಮಗಾರಿಗಳು: ಓಕಳಿಪುರ ಅಷ್ಟಪಥ ಕಾರಿಡಾರ್ ಯೋಜನೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಸಿಗ್ನಲ್ ಮುಕ್ತ ಕಾಮಗಾರಿ, ಬಹುಮಹಡಿ ನಿಲುಗಡೆ ತಾಣ, ಸಿಲ್ಕ್ಬೋರ್ಡ್‌ನಿಂದ ನಾಯಂಡಹಳ್ಳಿ ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್, ನಗರದ 93.47 ಕಿ.ಮೀ. ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ, ಶಿವಾನಂದ ಉಕ್ಕಿನ ಮೇಲ್ಸೇತುವೆ, ವಿವಿಧ ಕೆರೆಗಳ ಅಭಿವೃದ್ಧಿ, ರಸ್ತೆಗಳ ಡಾಂಬರೀಕರಣ ಸೇರಿದಂತೆ ಈಗಾಗಲೇ ಕಾಮಗಾರಿ ಆರಂಭವಾಗಿರುವ ಎಲ್ಲ ಕಾಮಗಾರಿಗಳಿಗೆ ನೀತಿ ಸಂಹಿತೆ ಬಿಸಿ ತಟ್ಟುವುದಿಲ್ಲ.
ನೀತಿ ಸಂಹಿತೆಯ ಜಾರಿಯಾಗುವ ಮೊದಲು ಆರಂಭವಾಗಿರುವ ಕಾಮಗಾರಿಗಳಿಗೆ ಯಾವುದೇ ತೊಂದರೆಯಿಲ್ಲ. ಆದರೆ, ನೀತಿ ಸಂಹಿತೆ ಜಾರಿಯಾದ ಬಳಿಕ ಯಾವುದೇ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ. ಒಂದೊಮ್ಮೆ ಗುತ್ತಿಗೆದಾರರು ಕಾರ್ಯಾದೇಶ ಪಡೆದು ಕೆಲಸ ಆರಂಭಿಸದಿದ್ದರೆ ಅಂತಹ ಕಾಮಗಾರಿಗಳಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ.
-ಎನ್.ಮಂಜುನಾಥ ಪ್ರಸಾದ್, ಪಾಲಿಕೆ ಆಯುಕ್ತ