Advertisement

ಸಮ್ಮಿಶ್ರ ಸರ್ಕಾರ ತಾನೇ ಅತಂತ್ರವಾಗುತ್ತಿದೆ

12:32 AM May 29, 2019 | Team Udayavani |

ಧಾರವಾಡ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ರಾಜ್ಯ ಸರಕಾರವನ್ನು ಬಿಜೆಪಿ ಅತಂತ್ರ ಮಾಡುತ್ತಿಲ್ಲ. ಸರಕಾರವೇ ಅತಂತ್ರವಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿಯ ಕಲ್ಯಾಣನಗರದ ನಾಡೋಜ ಡಾ|ಚೆನ್ನವೀರ ಕಣವಿ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಸನ್ಮಾನಿಸಿದ ಬಳಿಕ ಅವರು ಮಾತನಾಡಿದರು.

Advertisement

ಮೈತ್ರಿ ಸರಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು, ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿಲ್ಲ. ಕುಡಿಯುವ ನೀರಿಗಾಗಿ ರಾಜ್ಯದಲ್ಲಿ ಹಾಹಾಕಾರ ನಿರ್ಮಾಣವಾಗಿದ್ದು, ಮಲೆನಾಡಿನ ಪ್ರದೇಶದಲ್ಲೂ ನೀರಿನ ಅಭಾವ ತಲೆದೋರುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನತೆಯ ಹಿತ ಕಾಪಾಡುವ ಬದಲು ಸರಕಾರ ಉಳಿಸಿಕೊಳ್ಳುವಲ್ಲಿ ನಿರತವಾಗಿದೆ. ಬಂಡಾಯ ಶಮನ ಮಾಡುವುದರಲ್ಲಿ ಕಾರ್ಯನಿರತವಾಗಿದೆ ಎಂದರು.

ಜಿಂದಾಲ್ಗೆ ಭೂಮಿ ನೀಡುವ ವಿಚಾರ ಬಗ್ಗೆ ಸಮ್ಮಿಶ್ರ ಸರಕಾರ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಬೇಕು. ಜಿಂದಾಲ್ನವರು ಅಷ್ಟೊಂದು ಭೂಮಿ ತೆಗೆದುಕೊಂಡು ಏನು ಮಾಡುತ್ತಾರೆ? ಕಮಿಷನ್‌ ಪಡೆದು ಟೆಂಡರ್‌ ನೀಡುತ್ತಿದ್ದಾರೆ. ಟೆಂಡರ್‌ ಕರೆದು ಕಮಿಷನ್‌ ಹೊಡೆಯುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.

ಕವಿ ಡಾ|ಚೆನ್ನವೀರ ಕಣವಿಗೆ ಸನ್ಮಾನ
ಲೋಕಸಭೆ ಚುನಾವಣೆ ಸಮಯದಲ್ಲಿ ಕವಿ ಕಣವಿ ಅವರ ಮನೆಗೆ ಭೇಟಿ ನೀಡಿ ಮತಯಾಚಿಸಿ ಬೆಂಬಲ ಕೋರಿದ್ದ ಪ್ರಹ್ಲಾದ ಜೋಶಿ ಅವರು, ಈಗ ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ಮನೆಗೆ ಭೇಟಿ ನೀಡಿ ಅವರಿಂದ ಆಶೀರ್ವಾದ ಪಡೆದರು. ಈ ವೇಳೆ ಪೇಡೆ ವಿತರಿಸಿ, ಸನ್ಮಾನಿಸಿದರು. ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಈರೇಶ ಅಂಚಟಗೇರಿ, ಶಿವು ಹಿರೇಮಠ, ಪೂರ್ಣಾ ಪಾಟೀಲ, ಟಿ.ಎಸ್‌.ಪಾಟೀಲ, ಮೋಹನ ರಾಮದುರ್ಗ, ಈರಣ್ಣ ಹಪ್ಪಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next