ಶೃಂಗೇರಿ: ವಿರೋಧ ಪಕ್ಷವು ಸರಕಾರವನ್ನು ಅಸ್ಥಿರ ಮಾಡುವ ವಿಫಲ ಪ್ರಯತ್ನ ಮಾಡುತ್ತಿದ್ದರೂ, ಸ್ಥಿರ ಹಾಗೂ ಜನಪರ ಆಡಳಿತವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ವಿದ್ಯಾರಣ್ಯಪುರ ಗ್ರಾಪಂನ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಶುಕ್ರವಾರ ಶಾಖಾ ಮಠದ ಸಮುಚ್ಚಯದಲ್ಲಿ ಮೂರು ಕೋಟಿ ರೂ. ರಸ್ತೆ ಕಾಮಗಾರಿಗೆ ನಡೆದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮ್ಮಿಶ್ರ ಸರಕಾರವು ಸುಭದ್ರವಾಗಿದ್ದು, ಜನಪರ ಆಡಳಿತ ನೀಡುತ್ತಿದೆ. ಶೃಂಗೇರಿ ಬಗ್ಗೆ ವಿಶೇಷ ಆಸಕ್ತಿ ಇರುವ ಸಿಎಂ ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ರಸ್ತೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಶಾಸಕ ಹಾಗೂ ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ತಾಲೂಕಿನಾದ್ಯಾಂತ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರ0ವಾಗಿರುವ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನೂತನ ಮಾರ್ಗ ನಿರ್ಮಾಣವಾಗುತ್ತಿರುವುದ ರಿಂದ ವಿದ್ಯುತ್ ಪೂರೈಕೆಯಲ್ಲಿ ಅಡ್ಡಿಯಾಗುತ್ತಿದೆ. ಈಗಾಗಲೇ ಕಾಮಗಾರಿ ಮುಕ್ತಾಯ ಹಂತ ತಲುಪಿದೆ ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ, ಸದಸ್ಯ ಕೆ.ಆರ್. ವೆಂಕಟೇಶ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ರಾಜೇಶ್ ಶೆಟ್ಟಿ, ಸದಸ್ಯೆ ಸೌಭಾಗ್ಯ ಗೋಪಾಲನ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಸಿ.ಶಂಕರಪ್ಪ, ಕಾಂಗ್ರೆಸ್ ಮುಖಂಡರಾದ ಕಾನುವಳ್ಳಿ ಕೃಷ್ಣಪ್ಪ ಗೌಡ, ಬಿಜಿಎಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ನಾಗೇಶ್, ಪ್ರೌಢಶಾಲಾ ವಿಭಾಗದ ಕಿರಣಕುಮಾರ್ ಮತ್ತಿತರರು ಹಾಜರಿದ್ದರು.
ಕಮ್ಮರಡಿಯಿಂದ ಶೃಂಗೇರಿಗೆ ತರಲಾಗುತ್ತಿರುವ 110 ಕೆವಿ ವಿದ್ಯುತ್ ಸ್ಥಾವರಕ್ಕೆ ಸ್ಥಳದ ಕೊರತೆ ಬಗ್ಗೆ ಸಿಎಂ ಶೃಂಗೇರಿಗೆ ಬಂದಿದ್ದ ಸಂದರ್ಭದಲ್ಲಿ ಚರ್ಚಿಸಲಾಗಿದೆ. ಸ್ಥಳದ ಗೊಂದಲವೂ ಶೀಘ್ರ ಪರಿಹಾರವಾಗಲಿದೆ ಟಿ.ಡಿ. ರಾಜೇಗೌಡ, ಶಾಸಕ