Advertisement

ಸಮ್ಮಿಶ್ರ ಸರಕಾರ ಬೀಳಲ್ಲ, ಬಿಜೆಪಿ ಕನಸು ನನಸಾಗಲ್ಲ

11:26 PM May 11, 2019 | Team Udayavani |

ಹುಬ್ಬಳ್ಳಿ: ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಸರಕಾರ ಬಿತ್ತು, ಬಿತ್ತು ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಸರಕಾರ, ರಾಜ್ಯಪಾಲರು, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರು. ಇದೀಗ 20 ಅತೃಪ್ತ ಶಾಸಕರಿದ್ದಾರೆ, ಮೇ 23ರ ನಂತರ ನೋಡಿ ಏನಾಗುತ್ತೆ ಎಂಬ ನಾಟಕ ಶುರುವಿಟ್ಟುಕೊಂಡಿದ್ದಾರೆ. ಬರೆದಿಟ್ಟುಕೊಳ್ಳಿ, ಮತ್ತೆ ಅವರಿಗೆ ನಿರಾಸೆ ಕಾದಿದೆ..

Advertisement

ಇದು ಕಾಂಗ್ರೆಸ್‌ನಲ್ಲಿ “ಟ್ರಬಲ್‌ ಶೂಟರ್‌’ ಎಂದೇ ಖ್ಯಾತರಾದ ಸಚಿವ ಡಿ.ಕೆ.ಶಿವಕುಮಾರ ಅವರ ಅಭಿಮತ. “ಉದಯವಾಣಿ’ ಜತೆ ಶನಿವಾರ ಮಾತನಾಡಿದ ಅವರು, “ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯವರು ಎಲ್ಲ ಯತ್ನ*ತಂತ್ರಗಳನ್ನು ಪ್ರಯೋಗಿಸಿ ವಿಫ‌ಲರಾಗಿದ್ದಾರೆ. ಭ್ರಮಾಲೋಕದಲ್ಲಿದ್ದುಕೊಂಡೇ ಅವರು ಏನೇನು ಹೇಳುತ್ತಿದ್ದಾರೋ ಹೇಳಿಕೊಳ್ಳಲಿ, ನಾವೇಕೆ ಬೇಡ ಎನ್ನೋಣ’ ಎಂದರು.

ಡಿಕೆಶಿಯ ಖಡಕ್‌ ನುಡಿಗಳಿವು
* ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಏನೋ ಆಗಿ ಬಿಡುತ್ತದೆ. ನಮಗೆ ಅಧಿಕಾರ ಪಟ್ಟ ಬರುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಬರೆದಿಟ್ಟುಕೊಳ್ಳಿ, ಮೇ 23ರ ನಂತರ ಸಮ್ಮಿಶ್ರ ಸರಕಾರ ಮತ್ತಷ್ಟು ಬಲಿಷ್ಠವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಲಿದೆ. ರಾಜ್ಯದಲ್ಲಿ ಮೈತ್ರಿಕೂಟ ಬಹುತೇಕ ಸ್ಥಾನಗಳಲ್ಲಿ ಗೆಲ್ಲಲ್ಲಿದ್ದು, ಬಿಜೆಪಿ ಸಿಂಗಲ್‌ ಡಿಜಿಟ್‌ ದಾಟಲ್ಲ.

* ಕುಂದಗೋಳ ವಿಧಾನಸಭೆ ಉಪಚುನಾವಣೆಗೆ ನೂರು ಜನ ಡಿ.ಕೆ.ಶಿವಕುಮಾರ ಬಂದರೂ ಏನೂ ಆಗದು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ, ಸಂತೋಷ. ನಾನು ಯಾರಿಗೂ ಸವಾಲು ಹಾಕಲು ಬಂದಿಲ್ಲ. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ನಾನು.

* ತಿಪ್ಪರಲಾಗ ಹಾಕಲು, ತಂತ್ರಗಾರಿಕೆ ಮಾಡಲು ನಾನು ಬಂದಿಲ್ಲ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಲಿದ್ದು, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕೈ ಮುಗಿದು ಮನವಿ ಮಾಡುತ್ತೇವಷ್ಟೇ. ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ. ಈ ಹಿಂದೆ ಜೆಡಿಎಸ್‌ ಹಾಗೂ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅನೇಕರು ನಮ್ಮ ಪರವಾಗಿರುವುದು ಬಲ ಹೆಚ್ಚಿಸಿದೆ.

Advertisement

* ಕುಂದಗೋಳದಲ್ಲಿ ಬಿಜೆಪಿಯಲ್ಲೂ ಸಾಕಷ್ಟು ಭಿನ್ನಾಭಿಪ್ರಾಯ, ಅಸಮಾಧಾನ-ಆಕ್ರೋಶವಿದೆ. ಮುಂದಿನ ಬಾರಿ ಎಸ್‌.ಐ.ಚಿಕ್ಕನಗೌಡ್ರಗೆ ಟಿಕೆಟ್‌ ಇಲ್ಲ ಎಂಬ ಷರತ್ತಿನ ಮೇರೆಗೆ ಈ ಬಾರಿ ಟಿಕೆಟ್‌ ನೀಡಲಾಗಿದೆ. ಮುಂದೆ ಎಂ.ಆರ್‌.ಪಾಟೀಲಗೆ ಟಿಕೆಟ್‌ ಖಚಿತ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿವೆ. ಆದರೆ, ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯವನ್ನು ಬಳಕೆ ಮಾಡಿಕೊಳ್ಳುವ ಎಳ್ಳಷ್ಟು ಚಿಂತನೆ ನಮಗಿಲ್ಲ.

* ಪಕ್ಷದ ಶಿಸ್ತಿನ ಶಿಪಾಯಿ ನಾನು. ಪಕ್ಷ ಏನು ಆದೇಶ ಕೊಡುತ್ತದೆಯೋ ಅದನ್ನು ಪಾಲಿಸುವೆ. ಗುಂಡ್ಲುಪೇಟೆ, ಬಳ್ಳಾರಿ, ಶಿವಮೊಗ್ಗ, ಇದೀಗ ಕುಂದಗೋಳ ಉಪ ಚುನಾವಣೆ ಉಸ್ತುವಾರಿ ನೀಡಲಾಗಿದೆ. ಪ್ರಾಮಾಣಿಕವಾಗಿ ಕಾರ್ಯ ಮಾಡಿದ್ದೇನೆ. ಒಂದು ಮನೆಗೆ ಹೇಗೆ ಸ್ವೀಪರ್‌, ಕ್ಲೀನರ್‌, ಕಾರು ಚಾಲಕ ಇನ್ನಿತರ ಕೆಲಸಗಾರರು ಇರಬೇಕೋ ಅದೇ ರೀತಿಯ ಕೆಲಸವನ್ನು ಪಕ್ಷದಲ್ಲಿ ಮಾಡುತ್ತಿದ್ದೇನೆ. ನನಗೆ ಪಕ್ಷದ ಹಿತ ಮುಖ್ಯವಷ್ಟೇ.

* ಕುಸುಮಾವತಿ ಗೆದ್ದರೆ ಸಮರ್ಪಕವಾಗಿ ಆಡಳಿತ ನಡೆಸಲಾರರು. ಶಿವಳ್ಳಿ ಸಹೋದರರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬಿತ್ಯಾದಿ ಆರೋಪಗಳಿಗೆ ಬಿಜೆಪಿಯವರು ಮುಂದಾಗಿರಬಹುದು. ಕುಸುಮಾವತಿ ಉತ್ತಮ ಆಡಳಿತ ನೀಡಲು ನಾವೆಲ್ಲ ಉಸ್ತುವಾರಿಯಾಗಿರುತ್ತೇವೆ. ನಮ್ಮ ಪಕ್ಷದ ಮಹಿಳಾ ಶಾಸಕರು ಕುಸುಮಾವತಿ ಅವರಿಗೆ ಆಡಳಿತ ನಿರ್ವಹಣೆ, ಅಧಿವೇಶನಗಳ ಕುರಿತು ಅಗತ್ಯ ತಿಳಿವಳಿಕೆ ನೀಡಲಿದ್ದಾರೆ.

* “ಕರ್ಮಣ್ಯೆ ವಾಧಿಕಾರಸ್ತೆ..ಮಾ ಫ‌ಲೇಶು ಕದಾಚನ..ಮಾ ಕರ್ಮ ಫ‌ಲಹೇ ತುರುಃ..’ ಎಂಬ ಭಗವದ್ಗೀತೆ ಶ್ಲೋಕವೇ ನನ್ನ ಧ್ಯೇಯ.

ನಾಟಕ ಗೊತ್ತೇ ಇಲ್ಲ..: ಸಿ.ಎಸ್‌.ಶಿವಳ್ಳಿ ನನ್ನ ತಮ್ಮನ ಸಮಾನ. ಅವನ*ನನ್ನ ಸ್ನೇಹ ಬಾಂಧವ್ಯ ದೊಡ್ಡದು. ನಿಧನರಾಗುವ ಕೆಲವೇ ದಿನಗಳ ಮೊದಲು ರಾತ್ರಿ 11ಗಂಟೆ ಸುಮಾರಿಗೆ ನನ್ನ ಮನೆಗೆ ಬಂದು, ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದ. ಬಡ ಕುಟುಂಬದ ವ್ಯಕ್ತಿಯಾಗಿದ್ದು, ಜನಾನುರಾಗಿಯಾಗಿ ರಾಜಕೀಯ ಸಾಧನೆ ತೋರಿದ್ದ.

ಕ್ಷೇತ್ರದ ಅಭಿವೃದ್ಧಿಗೂ ಶ್ರಮಿಸಿದ್ದ. ಇದೆಲ್ಲವುಗಳನ್ನು ನೆನಪಿಸಿಕೊಂಡು ನನಗರಿವಿಲ್ಲದೆ ಕಣ್ಣೀರು ಬಂದಿತ್ತೆ ವಿನ:, ಮತಕ್ಕಾಗಿ ಕಣ್ಣೀರು ಹಾಕುವ ಜಾಯಮಾನ ನನ್ನದಲ್ಲ. ನಾಟಕ ಮಾಡಿ ಜನರನ್ನು ನಂಬಿಸುವುದಂತೂ ನನ್ನ ಡಿಕ್ಷನರಿಯಲ್ಲೇ ಇಲ್ಲ. ಐಟಿ ದಾಳಿ ಕಿರುಕುಳಕ್ಕೂ ಈ ಶಿವಕುಮಾರ ಜಗ್ಗಲಿಲ್ಲ.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next