ಮೈಸೂರು: ಸಹಕಾರ ಕ್ಷೇತ್ರಕ್ಕೆ ಮುಖ್ಯವಾಗಿ ಅಗತ್ಯವಿರುವ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಮಹಿಳೆಯರಲ್ಲಿ ಹೆಚ್ಚಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ದಾಸಯ್ಯ ತಿಳಿಸಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳ ಮತ್ತು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಮೈಸೂರ ವಿಭಾಗದ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಇಒಗಳ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಸಹಕಾರ ಸಂಘಗಳನ್ನು ರಚಿಸಿಕೊಂಡು ಉತ್ತಮವಾಗಿ ಮುನ್ನಡೆಸುವ ನಂಬಿಕೆಗಳಿಸಿದ್ದು, ಅವರು ಸಂಘಗಳನ್ನು ರಚನೆ ಮಾಡಿದ ಬಳಿಕ ಹಣದ ಕೊರತೆ ನೀಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಾಗಾರಗಳನ್ನು ಹೆಚ್ಚಾಗಿ ನಡೆಸುವ ಮೂಲಕ ಸಹಕಾರ ಕ್ಷೇತ್ರದ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕಿದ್ದು, ಇದಕ್ಕೆ ಸಹಕಾರ ಮಹಾಮಂಡಲ ಸಹಕಾರ ನೀಡಲಿದೆ ಎಂದರು.
ಅರಿವಿದ್ದರೆ ಮೋಸ ಆಗದು: ಸಹಕಾರ ಸಂಘಗಳ ಅಪರ ನಿಬಂಧಕ ಸಿ.ಎನ್.ಪರಶಿವಮೂರ್ತಿ ಮಾತನಾಡಿ, 1599ರ ಸಹಕಾರ ಸಂಘಗಳ ಕಾಯ್ದೆಯಲ್ಲಿ 250 ಕಲಂಗಳಿದ್ದು, ಎಲ್ಲಾ ಸಹಕಾರಿಗಳು ಇದನ್ನು ತಿಳಿದುಕೊಳ್ಳಬೇಕು. ಈ ಎಲ್ಲಾ ಕಾಯ್ದೆಗಳ ಬಗ್ಗೆ ಅರಿವಿದ್ದರೆ ಮೋಸ ಹೋಗುವುದು ತಪ್ಪಲಿದೆ.
2011ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ, ಸ್ವಾಯತ್ತ ಮತ್ತು ಸ್ವಾತಂತ್ರ್ಯ ಸಂಸ್ಥೆಗಳಾಗಿ ಮಾಡಲಾಗಿದ್ದು, ಬಳಿಕ 2013, 2014 ಹಾಗೂ 2016ರಲ್ಲಿ ಮೂರು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಸಹಕಾರ ಸಂಘಗಳಿಗೆ ಸಂಬಂಧಪಟ್ಟ ಕಾಯ್ದೆ ಹಾಗೂ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಡಿಸಿಸಿ ಬ್ಯಾಂಕ್ ಜಂಟಿ ನಿರ್ದೇಶಕ ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್‌ಕುಮಾರ್, ಮಹಾ ಮಂಡಳದ ಹಿರಿಯ ಅಧಿಕಾರಿ ವೀಣಾ ನಾಗೇಶ್, ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕಿ ಶೈಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.