Advertisement

ವಿರೋಧ ಪಕ್ಷದ ನಾಯಕಿ ಯಾರಮ್ಮ? ಎಲ್ಲಿದ್ದಿಯಮ್ಮ? ಸಿಎಂ ಪ್ರಶ್ನೆ

05:37 PM Aug 01, 2023 | Team Udayavani |

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಉಡುಪಿಗೆ ಭೇಟಿ ನೀಡಿದ ವೇಳೆ ಎರಡು ಸರಕಾರಿ ಹಾಸ್ಟೆಲ್‌ಗ‌ಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಚ್ಚರಿ ಮೂಡಿಸಿದರು.

Advertisement

ಹಾಸ್ಟೆಲ್‌ನ ಬೋರ್ಡ್‌ನಲ್ಲಿ ವಿದ್ಯಾರ್ಥಿ ನಾಯಕಿಯರ ಸಮಿತಿಯ ಪ್ರಧಾನ ಮಂತ್ರಿ, ಆರೋಗ್ಯ ಮಂತ್ರಿ ಪಟ್ಟಿಯನ್ನು ನೋಡಿದ ಸಿಎಂ ಅವರು ವಿರೋಧ ಪಕ್ಷದ ನಾಯಕಿ ಯಾರಮ್ಮ? ಎಲ್ಲಿದ್ದಿಯಮ್ಮ ಎಂದು ಪ್ರಶ್ನಿಸಿ ನಗೆ ಚಟಾಕಿ ಹಾರಿಸಿದರು. ವಿದ್ಯಾರ್ಥಿಗಳು ಸಿಎಂ ಅವರಿಗೆ ತಮ್ಮ ಹೆಸರು ಪರಿಚಯ ಹೇಳಿಕೊಂಡು ಗ್ರೂಪ್‌ ಫೋಟೊ ತೆಗೆಸಿಕೊಂಡರು.

ಬನ್ನಂಜೆ ಸರಕಾರಿ ನಿಲಯದ ಸಮೀಪದಲ್ಲಿರುವ ಹಿಂದುಳಿದ ವರ್ಗಗಳ ದೇವರಾಜ ಅರಸು ಮೆಟ್ರಿಕ್‌ ನಂತರದ ಹಾಸ್ಟೆಲ್‌ಗೆ ಮೊದಲು ಭೇಟಿ ನೀಡಿದರು. ಸರಕಾರಿ ಸಭೆ, ಸಂಘ, ಸಂಸ್ಥೆ, ಪಕ್ಷದ ಕಾರ್ಯಕರ್ತರ ಭೇಟಿ, ಮನವಿಗಳ ಒತ್ತಡದ ನಡುವೆಯೂ ನಾಡದೊರೆ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿ ಗಮನ ಸೆಳೆದರು. ಸಿಎಂ ಅವರನ್ನು ನೇರವಾಗಿ ಕಂಡ ವಿದ್ಯಾರ್ಥಿನಿಯರು ಅಚ್ಚರಿ, ಸಂತಸ ವ್ಯಕ್ತಪಡಿಸಿದರು. ಹಾಸ್ಟೆಲ್‌ನ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿನಿಯರು ಮಲಗುವ ಬೆಡ್‌ಗಳ ವ್ಯವಸ್ಥೆಯನ್ನು ಪರಿಶೀಲಿಸಿದರು. ಅನಂತರ ಹಾಸ್ಟೆಲ್‌ ವಿದ್ಯಾರ್ಥಿನಿಯರ ಜತೆಗೆ ಸಿಎಂ ಮಾತುಕತೆ ನಡೆಸಿದರು.

ಊಟ, ತಿಂಡಿ ಸರಿಯಾಗಿ ಕೊಡುತ್ತಾರ ? ನೀರಿನ ಸಮಸ್ಯೆ ಇದೆಯಾ ? ಆರೋಗ್ಯ ಪರೀಕ್ಷೆಗೆ ಡಾಕ್ಟರ್‌ ಬರುತ್ತಾರ ? ಸೋಪು, ಪೇಸ್ಟ್‌ ಸರಿಯಾಗಿ ಕೊಡುತ್ತಾರ ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದರು. ಕಷ್ಟದ ದಿನಗಳಲ್ಲಿ ಬಾಲ್ಯವನ್ನು ಕಳೆದು ಶಿಕ್ಷಣ ಪೂರೈಸಿದವನು ನಾನು. ಸರಕಾರ ಇಂದಿನ ಮಕ್ಕಳಿಗೆ ಎಲ್ಲ ಸೌಲಭ್ಯ, ಸಹಕಾರ ನೀಡುತ್ತಿದೆ. ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.



ಇವರು ಯಾರು ಗೊತ್ತ ?

ಸಿಎಂ ಸಿದ್ದರಾಮಯ್ಯ ಅವರು ವಿದ್ಯಾರ್ಥಿನಿಯರ ಜತೆ ಚರ್ಚಿಸುವಾಗ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತೋರಿಸಿ ಇವರು ಯಾರು ಗೊತ್ತ ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ವಿದ್ಯಾರ್ಥಿನಿಯರು ಉತ್ತರಿಸಿದರು. ನಿಮ್ಮ ಏನೇ ಸಮಸ್ಯೆ ಇದ್ದರೂ ಇವರ ಬಳಿ ಹೇಳಿಕೊಳ್ಳಿ. ಪರೀಕ್ಷೆಗೆ ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯಬೇಕು ಎಂದು ಸಲಹೆ ನೀಡಿದರು.

ಈಯಮ್ಮನ ನೋಡ್ಬೇಡಿ, ನನ್ನ ನೋಡ್ಕಂಡ್‌ ಹೇಳ್ರಮ್ಮ
ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ಅನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಕೆಲಕಾಲ ಸಮಯ ಕಳೆದರು. ಊಟ, ತಿಂಡಿ, ಶುಚಿತ್ವ ವ್ಯವಸ್ಥೆ ಹೇಗಿದೆ ಎಂದು ಮಾಹಿತಿ ಪಡೆದರು. ಎನಾದರೂ ಸಮಸ್ಯೆ ಇದ್ದರೆ ಹೇಳಿಕೊಳ್ಳಿ. ಈಯಮ್ಮನ ನೋಡ್ಬೇಡಿ(ನಿಲಯ ಮೇಲ್ವಿಚಾರಕಿ), ನನ್ನ ನೋಡ್ಕಂಡ್‌ ಹೇಳ್ರಮ್ಮ ಎಂದು ಸಿಎಂ ಜೋರಾಗಿ ಹೇಳಿದರು. ಊಟೋಪಚಾರ, ಸೌಲಭ್ಯಗಳು ಉತ್ತಮವಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಮತ್ತು ಕರಾಟೆಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಸಿಎಂಗೆ ತಿಳಿಸಿದರು.

Advertisement

ಸರಕಾರಿ ಉಚಿತ ಯೋಜನೆಗಳ ಬಗ್ಗೆ ವಿದ್ಯಾರ್ಥಿನಿಯರ ಜತೆಗೆ ಚರ್ಚಿಸಿದರು. ನಿಮ್ಮ ಅಮ್ಮಂದಿರಿಗೆ ಹೇಳಿ ಗೃಹ ಲಕ್ಷ್ಮೀ ಯೋಜನೆ ನೋಂದಣಿ ಮಾಡಿಸಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ವಿವಿಧ ಜನಪ್ರತಿನಿಧಿಗಳು, ಪಕ್ಷದ ನಾಯಕರು, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿ. ಪಂ. ಸಿಇಒ ಪ್ರಸನ್ನ ಎಚ್‌., ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು, ಸಹಾಯಕ ನಿರ್ದೇಶಕ ರಮೇಶ್‌, ನಿಲಯ ಮೇಲ್ವಿಚಾರಕಿ ಸುಚಿತ್ರಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಗಣೇಶ್‌ ನಾಯಕ್‌, ನಿಲಯ ಮೇಲ್ವಿಚಾರಕ ಶ್ರೀಕಾಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next