ಹುಬ್ಬಳ್ಳಿ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ “ನಾನೂ ಮುಖ್ಯಮಂತ್ರಿ ರೇಸ್‌ನಲ್ಲಿದ್ದೇನೆ’ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ನಾವ್ಯಾರೂ ಕಿತ್ತಾಡುತ್ತಿಲ್ಲ, ಮಾಧ್ಯಮಗಳಲ್ಲಿ ಮಾತ್ರ ಕಿತ್ತಾಟಗಳಿವೆ. ನಾವು ಒಗ್ಗಟ್ಟಿನಿಂದ ಇದ್ದೇವೆ. ಪಕ್ಷದಲ್ಲಿ ಯಾರಿಗೆ ಯಾರೂ ಸ್ಪರ್ಧಿಗಳಲ್ಲ. ಯಾರು ಏನೇ ಹೇಳಿಕೆ ನೀಡಿದರೂ ಪಕ್ಷ ಹಾಗೂ ಸೋನಿಯಾ ಗಾಂಧಿ ಯಾರಿಗೆ ಟೋಪಿ ಹಾಕುತ್ತಾರೋ ಅವರೇ ಮುಖ್ಯಮಂತ್ರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ
ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ಹೆಸರಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ ನಡೆದಿದೆ. ಆರೆಸ್ಸೆಸ್ ಹೆಸರಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ. ಯಾರ ಹೆಸರಲ್ಲಿವೆ ಎಂಬುದು ಗೊತ್ತಿಲ್ಲವೇ. ನಾಷನಲ್ ಹೆರಾಲ್ಡ್ ಸಂಸ್ಥೆಗೆ ಹಿಂದೆ ಹಲವರು ಅಧ್ಯಕ್ಷರಾಗಿದ್ದರು. ಅಂದ ಮಾತ್ರಕ್ಕೆ ಅವರ ಹೆಸರಲ್ಲಿ ಸಂಸ್ಥೆ ಇರುತ್ತದೆಯೇ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳು ಇರಬಾರದು ಎನ್ನುವ ಕೆಟ್ಟ ಮನಸ್ಥಿತಿಯ ಸರ್ಕಾರ ಇದಾಗಿದೆ. ಹೀಗಾಗಿಯೇ ಸೋನಿಯಾ, ರಾಹುಲ್ ಗಾಂಧಿ ಅವರನ್ನು ವಿಚಾರಣೆ ಹೆಸರಲ್ಲಿ ಶೋಷಣೆ ಮಾಡುತ್ತಿದ್ದಾರೆ. ಕಡಿಮೆ ದರದಲ್ಲಿ ಆಸ್ತಿಯನ್ನು ಆರೆಸ್ಸೆಸ್‌ಗೆ ಈ ಸರ್ಕಾರ ನೀಡಿಲ್ಲವೆ, ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡಿಲ್ಲವೆ ಎಂದರು.
ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಕಾಂಗ್ರೆಸ್‌ನಿಂದ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ 74 ಸಾವಿರಕ್ಕಿಂತ ಹೆಚ್ಚು ಜನರಿಂದ ಸ್ವಾತಂತ್ರ್ಯ ನಡಿಗೆ ನಡೆಯಲಿದೆ. ಜಿಲ್ಲಾ, ಕ್ಷೇತ್ರ ಮಟ್ಟದಲ್ಲೂ ಪಾದಯಾತ್ರೆ ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಆ.1ರಿಂದ 10ರೊಳಗೆ ಜಿಲ್ಲಾ, ಕ್ಷೇತ್ರ ಮಟ್ಟದಲ್ಲಿ ಪಾದಯಾತ್ರೆ ಮುಗಿಯಬೇಕು. ಆ.15ರಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜ್‌ವರೆಗೆ ನಡೆಯಲಿದೆ ಎಂದರು.
ಇದರಲ್ಲಿ 75 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಇದನ್ನು ಪಕ್ಷಾತೀತವಾಗಿ ಆಚರಿಸಲಾಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಅನುಮತಿ ಕೇಳಿದ್ದೇವೆ. ಕೊಡದಿದ್ದರೂ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಬೂತ್‌ಗಳಿಂದ ಮೂವರು ಈ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜು.24ಕ್ಕೆ ಧಾರವಾಡದ ಮಯೂರ ರೆಸಾರ್ಟ್ ನಲ್ಲಿ ಚಿಂತನಾ ಸಭೆ ನಡೆಯಲಿದೆ. ಐದು ಜಿಲ್ಲೆಯ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದು, ಸಂಘಟನೆ, ಮುಂದಿನ ಬೆಳವಣಿಗೆ ಕುರಿತು ಚರ್ಚೆಯಾಗಲಿದೆ ಎಂದರು.