ಕಲಬುರಗಿ: ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಸಾರ್ವಜನಿಕರು ಅಹವಾಲು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಹಲವು ಸಂಘ-ಸಂಸ್ಥೆಗಳು ಮತ್ತು ವಿವಿಧ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದವು.
ಎಐಡಿಎಸ್‌ಒ ಸಂಘಟನೆ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಫಾರ್ಮಸಿ ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಎರಡು ಡೋಸ್ ಲಸಿಕೆ ನೀಡುವವರೆಗೆ ಪರೀಕ್ಷೆ ನಡೆಸಬಾರದು ಎಂದು ಒತ್ತಾಯಿಸಿದರು.
ಪಿಯು ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದಂತೆ ಡಿಪ್ಲೋಮಾ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಯನ್ನು ಆಂತರಿಕ ಮೌಲ್ಯಮಾಪನ ಅಥವಾ ಇನ್ನಾವುದಾದರೂ ವೈಜ್ಞಾನಿಕ ಮಾನದಂಡದ ಮೂಲಕ ಮೌಲ್ಯಮಾಪನ ಮಾಡಬೇಕು. ಶಿಕ್ಷಣ ತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆ ನಡೆಸಿ. ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆ ಮೌಲ್ಯಮಾಪನ ಇವುಗಳ ಬಗ್ಗೆ ವೈಜ್ಞಾನಿಕ-ಪ್ರಜಾತಾಂತ್ರಿಕ ನೀತಿ ರೂಪಿಸಬೇಕೆಂದು ಮನವಿ ಮಾಡಿದರು.
ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಮುನ್ನ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸಬಾರದು ಎಂದು ಸಂಘಟನೆ ಜಿಲ್ಲಾಧ್ಯಕ್ಷ ಹಣಮಂತ ಎಸ್.ಎಚ್., ಸ್ನೇಹಾ ಕಟ್ಟಿಮನಿ, ಈರಣ್ಣ ಇಸಬಾ, ತುಳಜಾರಾಮ ಎನ್.ಕೆ, ವೆಂಕಟೇಶ ದೇವದುರ್ಗ, ಪ್ರೀತಿ ದೊಡ್ಡಮನಿ, ಕಾರ್ತಿಕ, ರಿತ್ವಿಕ್ ಮನವಿ ಪತ್ರ ಸಲ್ಲಿಸಿದರು. ಈಗಿರುವ ಕಲ್ಯಾಣ ಕರ್ನಾಟಕ ಇತಿಹಾಸ ಸಮಿತಿ ರದ್ದುಗೊಳಿಸಿ ಪುನರ್ ರಚಿಸಬೇಕೆಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು. ಮಂಜುನಾಥ ನಾಲವಾರಕರ್, ಸಚಿನ ಫರಹತಾಬಾದ್, ಸಂಪತ್ ಹಿರೇಮಠ, ದತ್ತು ಹಯ್ನಾಳಕರ್, ಶರಣು ಹೊಸಮನಿ ಅವರು ಸಿಎಂ ಅವರನ್ನು ಭೇಟಿ ಮಾಡಿ, ಈಗ ಸಮಿತಿಯ ಕಾರ್ಯ ಚಟುವಟಿಕೆಗಳು ನಿಂತು ಹೋಗಿವೆ. ಆದ್ದರಿಂದ ಈ ಸಮಿತಿ ರದ್ದು ಮಾಡಬೇಕು. ಹೊಸ ಸಮಿತಿ ರಚಿಸಿ, ಸಮಿತಿಗೆ ಬೇಕಾದ ಕಚೇರಿ ಕಟ್ಟಡ, ವಾಹನ, ಕ್ಯಾಮರಾ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೆಕೆಆರ್ ಡಿಬಿ ಅನುದಾನದಲ್ಲಿ ಒದಗಿಸ ಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘಟನೆ ಮತ್ತು ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ರೈತರು, ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಯಿತು. ಡಿಸಿಸಿ ಬ್ಯಾಂಕ್ ಮೂಲಕ ವಿಎಸ್‌ಎಸ್‌ಎನ್ ಸೊಸೈಟಿ ಮೂಲಕ ಎಲ್ಲ ರೈತರಿಗೆ ಸರಳವಾಗಿ ಹೊಸ ಸಾಲ ವಿತರಣೆ ಮಾಡಬೇಕು. 2017-18ನೇ ಸಾಲಿನ ಸಾಲ ಮನ್ನಾದಲ್ಲಿ ವಂಚನೆಗೊಳಗಾದ ಎಲ್ಲ ರೈತರಿಗೂ ಸಾಲ ಮನ್ನಾ ಅನ್ವಯಿಸಬೇಕು. 2012-13ನೇ ಸಾಲಿನಲ್ಲಿ ಬೆಳೆ ವಿಮೆ ಸಿಗದೆ ವಂಚಿತರಾದ ರೈತರಿಗೆ ಹಣ ಒದಗಿಸಬೇಕು. ಸ್ತಿಶಕ್ತಿ ಸ್ವ-ಸಹಾಯ ಸಂಘಗಳ ಮಹಿಳೆಯರ ಪಡೆದ ಸಾಲವನ್ನು ಬಡ್ಡಿ ಸಹಿತ ಮಾಡಬೇಕು.
ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕೆಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೋರಾಟಗಾರ್ತಿ ಕೆ.ನೀಲಾ, ಹೋರಾಟಗಾರರಾದ ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ, ಪಾಂಡುರಂಗ ಮಾವಿನಕರ, ಗೌರಮ್ಮ ಪಾಟೀಲ, ಮೇಘರಾಜ ಕಠಾರೆ, ಅಮೀನಾ ಬೇಗಂ, ಸೈಯದ್ ಖೈರುನ್ನಿಸಾ, ಸುಧಾಮ ಧನ್ನಿ, ಶಹಜಾನ್ ಅಖ್ತರ್ ಮತ್ತಿತರರು ಇದ್ದರು.