ಬೆಂಗಳೂರು: “ನನ್ನ ಮಗ ರವಿ ಸಾವಿನ ಹಿಂದೆ ದೊಡ್ಡ ಸಂಚೇ ಅಡಗಿದೆ. ಪ್ರಕರಣದ ಸಂಬಂಧ ನಾವು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ಆದರೆ ಸಿಬಿಐ ತನಿಖಾ ತಂಡ ನೀಡಿದ “ಸಮಗ್ರ ತನಿಖಾ ವರದಿ’ಯ ನಕಲು ಪ್ರತಿಗಳನ್ನು ಕೊಡಿ ಎಂದರೆ ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳು ದಿನಾ ಅಲೆದಾಡಿಸುತ್ತಿದ್ದಾರೆ,’ ಎಂದು ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ತಾಯಿ ಗೌರಮ್ಮ ದೂರಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಮಗನ ಕೊಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ವರ್ತೂರು ಪ್ರಕಾಶ್, ನಾರಾಯಣಸ್ವಾಮಿ ಮತ್ತು ರವಿಯ ಸ್ನೇಹಿತರಾದ ಚಂದ್ರಶೇಖರ್, ಹರಿಕಷ್ಣ ಹಾಗೂ ಡಿ.ಕೆ.ರವಿ ಮಾವ ಹನುಮಂತರಾಯಪ್ಪ ಅವರು ಶಾಮೀಲಾಗಿದ್ದಾರೆ,’ ಎಂದು ಗಂಭೀರ ಆರೋಪ ಮಾಡಿದರು.
ಪುತ್ರನ ನೆನೆದು ಕಣ್ಣೀರು ಹಾಕಿದ ಗೌರಮ್ಮ, “ಶವಪರೀಕ್ಷೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜಿ ಜಾರ್ಜ್ ಹಿಂಬಾಗಿಲ ಪ್ರವೇಶ ಮಾಡಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿದ್ದವರು ಈ ರೀತಿ ಮಾಡಬಹುದೇ? ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಕುತಂತ್ರದಿಂದಲೇ ಆತನನ್ನು ಕೊಲೆ ಮಾಡಲಾಗಿದೆ,’ ಎಂದು ದೂರಿದರು.
ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, “ತನಿಖೆಗೆಂದು ನಮ್ಮ ಮನೆಗೆ ಬಂದಾಗ ನಾನು ನೀಡಿದ್ದ ಹೇಳಿಕೆಗಳನ್ನು ಸಿಬಿಐ ಅಧಿಕಾರಿಗಳು ವರದಿಯಲ್ಲಿ ಪ್ರಸ್ತಾಪಿಸಲಿಲ್ಲ. ಮರಣೋತ್ತರ ಪರೀಕ್ಷೆಗೆ ಒತ್ತಾಯ ಮಾಡಿದ್ದೆ ಅದನ್ನು ಕೂಡ ನಮೂದಿಸಿಲ್ಲವೇಕೆ? ತನಿಖಾಧಿಕಾರಿಗಳ ವರದಿಯಲ್ಲೇ ಹಲವು ಅನುಮಾನಗಳಿವೆ. ರವಿಯ ಮಾವ ಹನುಮಂತರಾಯಪ್ಪ, ತಮ್ಮ ರಾಜಕೀಯ ಲಾಭಕ್ಕಾಗಿ ಪ್ರಕರಣವನ್ನು ಮುಚ್ಚಿಹಾಕುವ ಕುತಂತ್ರಿಗಳ ಜತೆ ಕೈಜೋಡಿಸಿದ್ದಾರೆ,’ ಎಂದು ದೂರಿದರು.
ಈಗಾಗಲೇ ಪೋಲಿಸ್ ಅಧಿಕಾರಿ ಗಣಪತಿ ಹತ್ಯೆ ಪ್ರಕರಣದಲ್ಲಿ ಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ. ತಮ್ಮ ಮಗನ ಪ್ರಕರಣದಲ್ಲೂ ನ್ಯಾಯಲಯದಲ್ಲಿ ನ್ಯಾಯಸಿಗುವ ವಿಶ್ವಾಸ ಇದೆ. ಸರ್ಕಾರ ಮೊದಲು ತನಿಖಾ ತಂಡದ ವರದಿಯ ಪ್ರತಿಗಳನ್ನು ನೀಡಲಿ ಎಂದು ಆಗ್ರಹಿಸಿದರು.